ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಸಾರ್ವಜನಿಕರು ಹಾಗೂ ವ್ಯಾಪಾರಸ್ಥರು ಪರಿಸರ ಸ್ನೇಹಿ ಗೌರಿ-ಗಣೇಶ ಹಬ್ಬ ಆಚರಿಸಬೇಕು. ಪಿಒಪಿ ಗಣೇಶ ಮೂರ್ತಿ ವ್ಯಾಪಾರ ಮಾಡುವುದು ಕಂಡುಬಂದರೇ ಅವರ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ನಗರಸಭೆ ಆಯುಕ್ತರಾದ ನರಸಿಂಹಮೂರ್ತಿ ಎಚ್ಚರಿಕೆ ನೀಡಿದರು. ನಗರಸಭೆ ಕುವೆಂಪು ಸಭಾಂಗಣದಲ್ಲಿ ಸೋಮವಾರ ಸಂಜೆ ಕರೆಯಲಾಗಿದ್ದ ಗಣೇಶ ಮೂರ್ತಿ ವ್ಯಾಪಾರಸ್ಥರ ಸಭೆಯಲ್ಲಿ ಎಲ್ಲರ ಸಲಹೆ ಕೇಳಿ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಹಾಸನ ನಗರಸಭಾ ವ್ಯಾಪ್ತಿಯ ಸಾರ್ವಜನಿಕರಿಗೆ ಹಾಗೂ ಗೌರಿ ಗಣೇಶ ಮೂರ್ತಿಗಳ ತಯಾರಿಕರಿಗೆ ಮತ್ತು ಮಾರಾಟಗಾರರಿಗೆ ಈ ಬಾರಿಯ ಗೌರಿಗಣೇಶ ಹಬ್ಬದಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿ.ಒ.ಪಿ) ಮತ್ತು ವಿಷಕಾರಿ ಬಣ್ಣ ಲೇಪನದ ಗೌರಿಗಣೇಶ ವಿಗ್ರಹಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಹಾಸನ ನಗರಸಭಾ ವ್ಯಾಪ್ತಿಯಲ್ಲಿ ಈ ಆದೇಶವನ್ನು ಉಲ್ಲಂಘಿಸುವ ಮತ್ತು ಜಲಮೂಲಗಳನ್ನು ಕಲುಷಿತಗೊಳಿಸುವವರ ವಿರುದ್ಧ ಪರಿಸರ ನಿಯಮಗಳನ್ವಯ ವಾಯು ಮತ್ತು ಜಲ ಮಾಲಿನ್ಯ ನಿಯಂತ್ರಣ ಕಾಯ್ದೆಯಡಿ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಲಾಗುವುದು. ಆದ್ದರಿಂದ ಪರಿಸರ ಸ್ನೇಹಿ ವಿಗ್ರಹಗಳನ್ನು ಮತ್ತು ಹಸಿರು ಪಟಾಕಿಗಳ ಬಳಕೆಯು ಸಾರ್ವಜನಿಕರ ಜವಾಬ್ದಾರಿ ಎಂದು ತಿಳಿಸಿದರು.ಸಾರ್ವಜನಿಕರು ಹಾಗೂ ವ್ಯಾಪಾರಸ್ಥರು ಗಣಪತಿ ವಿಗ್ರಹ ಪ್ರತಿಷ್ಠಾಪನೆ ಮತ್ತು ಮಾರಾಟ ಮಾಡಲು ನಗರಸಭೆಯಿಂದ ಕಡ್ಡಾಯವಾಗಿ ಅನುಮತಿಯನ್ನು ಪಡೆಯಬೇಕು. ಹಾಸನ ನಗರಸಭಾ ವ್ಯಾಪ್ತಿಯಲ್ಲಿ ಗೌರಿ-ಗಣೇಶ ವಿಗ್ರಹಗಳ ವಿಸರ್ಜನೆಗಾಗಿ ತಾತ್ಕಾಲಿಕವಾಗಿ ನಗರಸಭೆಯಿಂದ ನೀರು ತುಂಬಿದ ಟ್ರ್ಯಾಕ್ಟರ್‌ಗಳ ವ್ಯವಸ್ಥೆ ಮತ್ತು ತಾತ್ಕಾಲಿಕ ಗುಂಡಿಗಳನ್ನು ಈ ಕೆಳಕಂಡ ಸ್ಥಳಗಳಲ್ಲಿ ಮಾಡಲಾಗಿದ್ದು. ಸಾರ್ವಜನಿಕರು ಗಣಪತಿ ವಿಗ್ರಹಗಳನ್ನು ಟ್ರ್ಯಾಕ್ಟರ್‌ಗಳಲ್ಲಿ ಹಾಗೂ ತಾತ್ಕಾಲಿಕ ಗುಂಡಿಗಳಲ್ಲಿ ವಿಸರ್ಜಿಸಿ ಜಲಮೂಲಗಳ ಸಂರಕ್ಷಣೆಗೆ ಸಹಕಾರ ನೀಡಬೇಕೆಂದು ಕೋರಿದರು.ಟ್ರ್ಯಾಕ್ಟರ್‌ಗಳು ನಿಲ್ಲುವ ಸ್ಥಳಗಳ ವಿವರ:
ಹೌಸಿಂಗ್ ಬೋರ್ಡ್ ಮಿನಿ ವಿಧಾನಸೌಧದ ಹತ್ತಿರ ಎರಡು ಟ್ರ್ಯಾಕ್ಟರ್ ವ್ಯವಸ್ಥೆ, ಕುವೆಂಪು ನಗರ ಗಣಪತಿ ದೇವಸ್ಥಾನದ ಹತ್ತಿರ ಒಂದು ಟ್ರ್ಯಾಕ್ಟರ್, ಸಾಲಗಾಮೆ ರಸ್ತೆ ಅರಳೀಕಟ್ಟೆ ಹತ್ತಿರ ಎರಡು ಟ್ರ್ಯಾಕ್ಟರ್, ಹೊಸಲೈನ್ ರಸ್ತೆ, ಶ್ರಿ ಬಸವೇಶ್ವರ ಕಲ್ಯಾಣ ಮಂಟಪದ ಹತ್ತಿರ ಒಂದು ಟ್ರ್ಯಾಕ್ಟರ್, ಶಂಕರೀಮಠದ ರಸ್ತೆ, ಶಂಕರೀಮಠದ ಮುಂಬಾಗ ಒಂದು ಟ್ರ್ಯಾಕ್ಟರ್, ಕರೀಗೌಡ ಕಾಲೋನಿ ಯುನೈಟೆಡ್ ಶಾಲೆ ಉಡಸಲಮ್ಮ ದೇವಸ್ಥಾನದ ಬಳಿ ಒಂದು ಟ್ರ್ಯಾಕ್ಟರ್, ಹಾಸನಾಂಬ ವೃತ್ತದ ಬಳಿ ಮೂರು ಟ್ರ್ಯಾಕ್ಟರ್, ದೇವಿಗೆರೆ ವೃತ್ತದಲ್ಲಿ ಮೂರು ಟ್ರ್ಯಾಕ್ಟರ್, ತಣ್ಣೀರು ಹಳ್ಳ ವೃತ್ತದ ಹತ್ತಿರ ಒಂದು ಟ್ರ್ಯಾಕ್ಟರ್, ಎಂ.ಜಿ. ರಸ್ತೆ ಆದಿಚುಂಚನಗಿರಿ ಕಲ್ಯಾಣ ಮಂಟಪದ ಹತ್ತಿರ ಒಂದು ಟ್ರ್ಯಾಕ್ಟರ್, ಆಡುವಳ್ಳಿ ಅರಳೀಮರದ ಮುಂಬಾಗ ಒಂದು ಟ್ರ್ಯಾಕ್ಟರ್, ಹೌಸಿಂಗ್ ಬೋರ್ಡ್ ಮುಖ್ಯ ರಸ್ತೆ ಪೃಥ್ವಿ ಚಿತ್ರ ಮಂದಿರ ಹಾಗೂ ಸ್ಕೌಟ್ ಭವನದ ಮಧ್ಯಭಾಗ ಒಂದು ಟ್ರ್ಯಾಕ್ಟರ್, ಕೆ.ಆರ್. ಪುರಂ ಹೈಸ್ಕೂಲ್ ಫೀಲ್ಡ್ ಮೈದಾನದ ಬಳಿ ಒಂದು ಟ್ರ್ಯಾಕ್ಟರ್, ಹೇಮಾವತಿ ನಗರ ಮಾಜಿ ಶಾಸಕರ ಮನೆ ಮುಂಬಾಗ ಒಂದು ಟ್ರ್ಯಾಕ್ಟರ್, ಸಾಲಗಾಮೆಚ ರಸ್ತೆ ಆಕಾಶವಾಣಿ ಹತ್ತಿರ ಒಂದು ಟ್ರ್ಯಾಕ್ಟರ್, ಸಿದ್ದಯ್ಯನಗರದಲ್ಲಿ ಒಂದು ಟ್ರ್ಯಾಕ್ಟರ್, ಪಿಡಬ್ಲ್ಯೂಡಿ ಕಾಲೋನಿ, ರವೀಂದ್ರ ನಗರ ಬಳಿ ಒಂದು ಟ್ರ್ಯಾಕ್ಟರ್, ಶಾಂತಿನಗರ ೩ನೇ ಮೈನ್, ೬ನೇ ಕ್ರಾಸ್ ರುದ್ರೇಗೌಡರ ಜಾಗದ ಮುಂದೆ ಒಂದು ಟ್ರ್ಯಾಕ್ಟರ್, ಸಾಲಗಾಮೆ ರಸ್ತೆ ಬಾಗಡೇರ ಕೊಪ್ಪಲು ದೇವಸ್ಥಾನದ ಹತ್ತಿರ ಒಂದು ಟ್ರ್ಯಾಕ್ಟರ್, ಲಕ್ಷ್ಮೀಪುರಂ ಜವೇನಹಳ್ಳಿ ಮಠದ ಮುಂಭಾಗ ಒಂದು ಟ್ರ್ಯಾಕ್ಟರ್, ಚನ್ನಪಟ್ಟಣ ಬಡಾವಣೆ ಕೋರ್ಟ್ ಮುಂಬಾಗ ಒಂದು ಟ್ರಾಕ್ಟರ್, ಡಾಂಗೆ ಕಣ್ಣಿನ ಆಸ್ಪತ್ರೆ ಹತ್ತಿರ ಒಂದು ಟ್ರ್ಯಾಕ್ಟರ್ ಅನ್ನು ಗಣೇಶ ಹಬ್ಬದ ಸಂಜೆ ತಂದು ನಿಲ್ಲಿಸಲಾಗುವುದು.ಜೊತೆಗೆ ಗಣೇಶ ವಿಸರ್ಜನೆ ಮಾಡಲು ತಾತ್ಕಾಲಿಕ ಗುಂಡಿಗಳಿಗೆ ನಗರಸಭೆಯ ವಸ್ತು ಪ್ರದರ್ಶನದ ಆವರಣ ಮುಖ್ಯ ಪ್ರವೇಶದ್ವಾರದ ಬಳಿ ಅವಕಾಶ ನೀಡಿದೆ. ಮಹಾರಾಜ ಪಾರ್ಕ್ ಒಳಭಾಗ ಸುಧಾ ಹೋಟೆಲ್ ಎದುರು ಹಾಗೂ ಸಾಲಗಾಮೆ ರಸ್ತೆ ಮಾರ್‍ನಾಮಿ ಮಂಟಪದ ಮುಂಭಾಗ ಅವಕಾಶ ಕೊಡಲಾಗಿದೆ. ಇದರಲ್ಲಿ ಗಣಪತಿ ವಿಸರ್ಜನೆ ಮಾಡಲು ಅವಕಾಶ ಕೊಡಲಾಗಿದೆ. ಯಾವುದೇ ಕೆರೆ, ನದಿ, ಹೊಳೆಗಳಲ್ಲಿ ಗಣಪತಿ ವಿಸರ್ಜನೆ ಮಾಡಲು ಅವಕಾಶ ಇರುವುದಿಲ್ಲ ಎಂದು ಹೇಳಿದರು.
ಇದೇ ವೇಳೆ ನಗರಸಭೆ ಪರಿಸರ ಎಂಜಿನಿಯರ್ ವೆಂಕಟೇಶ್, ಪ್ರಸಾದ್, ಮಂಜುನಾಥ್, ಆನಂದ್, ಸೇರಿದಂತೆ ಇತರರು ಉಪಸ್ಥಿತರಿದ್ದರು.