ಸಾರಾಂಶ
ಬಸವರಾಜ ನಂದಿಹಾಳ
ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿಉತ್ತರ ಕರ್ನಾಟಕದಲ್ಲಿ ರೈತರು ಕೃಷಿಗೆ ಹಾಗೂ ಜಾನುವಾರುಗಳಿಗೆ ಸಂಬಂಧಿಸಿದಂತೆ ಹಲವು ಹಬ್ಬಗಳನ್ನು ಆಚರಿಸುತ್ತಾ ಬಂದಿದ್ದಾರೆ. ಅವುಗಳಲ್ಲಿ ಕಾರಹುಣ್ಣಿಮೆ ನಂತರ ಬರುವ ಮಣ್ಣೆತ್ತಿನ ಅಮವಾಸ್ಯೆಯು ಪ್ರಮುಖ. ಈ ವೇಳೆ ಜನರು ಮಣ್ಣಿನಿಂದ ಮಾಡಿದ ಎತ್ತುಗಳನ್ನು ಪೂಜೆ ಮಾಡುವುದು ರೂಢಿಗತವಾಗಿ ಬಂದಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಪಿಒಪಿ ಎತ್ತಿನ ಮಾರಾಟ ಜೋರಾಗಿದೆ.
ಎತ್ತು ಮತ್ತು ಮಣ್ಣನ್ನು ಪೂಜಿಸಿದರೆ ಮಳೆ-ಬೆಳೆಗಳು ಚೆನ್ನಾಗಿ ಬರುತ್ತವೆ ಎಂಬ ನಂಬಿಕೆ ರೈತರದ್ದು. ಆದರೀಗ ಮಣ್ಣೆತ್ತಿನ ಬದಲಾಗಿ ಮಾರುಕಟ್ಟೆಯಲ್ಲಿ ಹೆಚ್ಚಾಗಿ ಪ್ಯಾರಿಸ್ ಆಫ್ ಪ್ಲಾಸ್ಟರ್‌ನಿಂದ ತಯಾರಿಸಿದ ಎತ್ತುಗಳ ಮಾರಾಟ ಜೋರಾಗಿದೆ. ಈ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಮಣ್ಣೆತ್ತು ಜೊತೆಗೆ ಮಾರುಕಟ್ಟೆಯಲ್ಲಿ ಕೊಲ್ಹಾಪುರದಿಂದ ತರಿಸಿರುವ ಪಿಒಪಿಯಿಂದ ತಯಾರಿಸಿದ ಬಣ್ಣ ಬಣ್ಣದ ಎತ್ತುಗಳ ಮಾರಾಟ ಕಂಡು ಬಂತು.ಮುಂಗಾರು ಮಳೆಯೊಂದಿಗೆ ಆರಂಭವಾಗುವ ಹಬ್ಬಗಳ ಆಚರಣೆಯೊಂದಿಗೆ ಕೃಷಿ ಚಟುವಟಿಕೆಯಲ್ಲಿ ನಿರತರಾಗುವ ರೈತ ಕುಟುಂಬದವರು ಸಂಪ್ರದಾಯದಂತೆ ಮಣ್ಣೆತ್ತಿನ ಹಬ್ಬವನ್ನು ಉತ್ಸಾಹದಿಂದ ಆಚರಿಸುತ್ತಾರೆ. ಈ ವರ್ಷ ಮುಂಗಾರು ಆರಂಭದ ಮುನ್ನವೇ ಮಳೆ ಆಗಮಿಸಿದ್ದರಿಂದಾಗಿ ರೈತರು ಹರ್ಷಗೊಂಡಿದ್ದಾರೆ. ಬಿತ್ತನೆ ಕಾರ್ಯ ತೀವ್ರವಾಗಿದೆ. ಬಿತ್ತನೆಯಾದ ನಂತರ ಅಲ್ಪಸ್ವಲ್ಪ ಮಳೆಯಾಗಿದೆ. ಇನ್ನಷ್ಟು ಮಳೆಯಾದರೆ ಬಿತ್ತನೆ ಮಾಡಿರುವುದಕ್ಕೆ ತುಂಬಾ ಅನುಕೂಲವಾಗುತ್ತದೆ ಎಂದು ರೈತರು ಹೇಳುತ್ತಾರೆ.
ಅಮವಾಸ್ಯೆ ದಿನದಂದು ಜನತೆ ಕುಂಬಾರರ ಮನೆಗೆ ತೆರಳಿ ಮಣ್ಣೆತ್ತುಗಳನ್ನು ತಂದು ದೇವರ ಜಗುಲಿಯ ಮೇಲಿಟ್ಟು ಕುಟುಂಬ ಸದಸ್ಯರೊಂದಿಗೆ ಸಾಮೂಹಿಕ ಪೂಜೆ ಸಲ್ಲಿಸುವ ಸಂಪ್ರದಾಯ ಕಡಿಮೆಯಾಗುತ್ತಿದೆ. ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಸಾರ್ವಜನಿಕ ಸ್ಥಳದಲ್ಲಿಯೂ ದೊಡ್ಡದಾದ ಮಣ್ಣೆತ್ತು ಪ್ರತಿಷ್ಠಾಪನೆ ಮಾಡಿ ಐದು ದಿನಗಳವರೆಗೆ ಪೂಜೆ ಸಲ್ಲಿಸುತ್ತಾರೆ. ನಂತರ ಊರ ಮುಂದಿನ ಕೆರೆ, ಹಳ್ಳ ಬಾವಿಯಲ್ಲಿ ಮಣ್ಣೆತ್ತುಗಳನ್ನು ವಿಸರ್ಜನೆ ಕಾರ್ಯ ಸಂಭ್ರಮದಿಂದ ಮಾಡುತ್ತಾರೆ.----
ಕೋಟ್ಮೊದಲು ಪಟ್ಟಣದಲ್ಲಿ ಹಿರಿಯರಾದ ಸಾಯಬಣ್ಣ ಕುಂಬಾರ, ಪರ್‍ವುತಪ್ಪ ಕುಂಬಾರ ಅವರು ಕಾರಹುಣ್ಣಿಮೆ ಮರುದಿನದಿಂದಲೇ ಮಣ್ಣೆತ್ತಿನ ಅಮವಾಸ್ಯೆಗೆ ಬೇಕಾದ ಮಣ್ಣೆತ್ತು ಮಾಡಲು ತೊಡಗುತ್ತಿದ್ದರು. ಮಣ್ಣೆತ್ತಿನ ಅಮವಾಸ್ಯೆ ದಿನ ರೈತರ ಮನೆಗಳಿಗೆ ವಿತರಣೆ ಮಾಡಿ ಜೋಳ ಇಲ್ಲವೇ ಹಣ ಸಂಗ್ರಹಿಸುತ್ತಿದ್ದರು. ಇದೀಗ ಈ ಇಬ್ಬರು ವ್ಯಕ್ತಿಗಳು ಮೃತರಾಗಿದ್ದಾರೆ. ಇದೀಗ ಕುಂಬಾರ ಮನೆಗಳಲ್ಲಿ ಮಣ್ಣೆತ್ತು ತಯಾರಿಸುವುದು ಕಡಿಮೆಯಾಗುತ್ತಿರುವುದು ವಿಷಾದಕರ ಸಂಗತಿ. ಅಮವಾಸ್ಯೆ ದಿನ ನಮ್ಮ ಮನೆಗೆ ಮೊದಲಿನಂತೆ ಯಾರೂ ಮಣ್ಣೆತ್ತುಗಳನ್ನು ಕೊಡದೇ ಇರುವುದರಿಂದಾಗಿ ನಾನೇ ಮನೆಯಲ್ಲಿ ಮಣ್ಣಿನಿಂದ ಎತ್ತುಗಳನ್ನು ಮಾಡಿ ಸಂಪ್ರದಾಯದಂತೆ ಪೂಜೆ ಮಾಡಲಾಗುತ್ತಿದೆ.
-ಬಸವರಾಜ ಹಾರಿವಾಳ ಪಟ್ಟಣದ ಹಿರಿಕರು-----
ಮಣ್ಣೆತ್ತಿನ ಅಮವಾಸ್ಯೆ ಅಂಗವಾಗಿ ಜನರ ಬೇಡಿಕೆ ಅನುಗುಣವಾಗಿ ಬಣ್ಣ ಹಚ್ಚಿರುವ (ಪಿಒಪಿ) ಎತ್ತುಗಳನ್ನು ಕೊಲ್ಹಾಪುರ ಹಾಗೂ ಉಮರ್ಗಾದಿಂದ ಮಾರಾಟಕ್ಕೆ ತರಿಸಲಾಗಿದೆ. ಬೇರೆ ಕಡೆಯಿಂದ ತರಿಸಲಾದ ಪ್ಯಾರಿಸ್ ಆಫ್ ಪ್ಲಾಸ್ಟರ್‌ನಿಂದ ತಯಾರಿಸಿದ ಎತ್ತುಗಳನ್ನು ಗಾತ್ರದ ಅನುಗುಣವಾಗಿ ₹೧೦೦ ರಿಂದ ೨೫೦೦ವರೆಗೆ ಮಾರಾಟ ಮಾಡಲಾಗುತ್ತಿದೆ. ಮಣ್ಣಿನಿಂದ ತಯಾರಿಸಿದ ಎತ್ತುಗಳು ಜೋಡಿಗೆ ₹೫೦ ರಿಂದ ೧೦೦ವರೆಗೆ ಮಾರಾಟವಾಗುತ್ತಿವೆ.-ಗದಿಗೆಪ್ಪ ಕುಂಬಾರ, ಕುಂಬಾರರು