ಜನಮನ ಸೂರೆಗೊಂಡ ಗ್ರಾಮೀಣ ಸಾಂಸ್ಕೃತಿಕ ಕಲರವ

| Published : May 10 2024, 11:47 PM IST

ಸಾರಾಂಶ

ವರ್ಷಪೂರ್ತಿ ಪಾಠ- ಪ್ರವಚನದಲ್ಲಿ ಮಗ್ನರಾಗಿದ್ದ ವಿದ್ಯಾರ್ಥಿನಿಯರಿಗೆ ಗ್ರಾಮೀಣ ಕ್ರೀಡೆಯಾದ ನೀರು ಹೊರುವ ಆಟ, ಮಡಿಕೆ ಹೊಡೆಯುವ ಆಟ, ಗೋಣಿಚೀಲದ ಓಟ, ಕೈ ಗಮ್ಮತ್ತು, ಮೂರು ಕಾಲು ಓಟ, ಹಗ್ಗ-ಜಗ್ಗಾಟ, ರಂಗೋಲಿ ಸ್ಪರ್ಧೆ, ಕುಂಟ ಪಿಲ್ಲೆ, ಸೊಬಾನೆ ಪದ ಹಾಡುಗಾರಿಕೆ ಸ್ಪರ್ಧೆ, ಕಸದಿಂದ ರಸವತ್ತಾದ ವಸ್ತುಗಳನ್ನು ಮಾಡುವ ಆಟ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಹಾಸನ

ನಗರದ ಎಂ.ಜಿ. ರಸ್ತೆ ಬಳಿ ಇರುವ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಾಂಸ್ಕೃತಿಕ ವೇದಿಕೆಯಿಂದ ಕಾಲೇಜಿನ ವಿದ್ಯಾರ್ಥಿನಿಯರಿಗೆ ನಡೆದ ಗ್ರಾಮೀಣ ಕಲರವದಲ್ಲಿ ಉರಿ ಬಿಸಿಲ ಬೇಗೆಯನ್ನೂ ಲೆಕ್ಕಿಸದ ವಿದ್ಯಾರ್ಥಿನಿಯರು ತಲೆ ಮತ್ತು ಸೊಂಟದ ಮೇಲೆ ನೀರು ತುಂಬಿದ ಕೊಡ ಹೊತ್ತು ಓಡಿದರೆ, ಮತ್ತೊಂದೆಡೆ ಹಗ್ಗ-ಜಗ್ಗಾಟಕ್ಕೆ ನಿಂತು ಬಲಾಬಲ ಪ್ರದರ್ಶಿಸುವ ಮೂಲಕ ನಾವು ಎಲ್ಲದಕ್ಕೂ ಸೈ ಎಂದು ಹುಬ್ಬೇರಿಸುವಂತೆ ಮಾಡಿದರು.

ವರ್ಷಪೂರ್ತಿ ಪಾಠ- ಪ್ರವಚನದಲ್ಲಿ ಮಗ್ನರಾಗಿದ್ದ ವಿದ್ಯಾರ್ಥಿನಿಯರಿಗೆ ಗ್ರಾಮೀಣ ಕ್ರೀಡೆಯಾದ ನೀರು ಹೊರುವ ಆಟ, ಮಡಿಕೆ ಹೊಡೆಯುವ ಆಟ, ಗೋಣಿಚೀಲದ ಓಟ, ಕೈ ಗಮ್ಮತ್ತು, ಮೂರು ಕಾಲು ಓಟ, ಹಗ್ಗ-ಜಗ್ಗಾಟ, ರಂಗೋಲಿ ಸ್ಪರ್ಧೆ, ಕುಂಟ ಪಿಲ್ಲೆ, ಸೊಬಾನೆ ಪದ ಹಾಡುಗಾರಿಕೆ ಸ್ಪರ್ಧೆ, ಕಸದಿಂದ ರಸವತ್ತಾದ ವಸ್ತುಗಳನ್ನು ಮಾಡುವ ಆಟ ನಡೆಸಲಾಯಿತು. ವಿದ್ಯಾರ್ಥಿನಿಯರು ತಲೆ ಮತ್ತು ಸೊಂಟದ ಮೇಲೆ ನೀರು ತುಂಬಿದ ಕೊಡ ಹೊತ್ತು ಸರಾಗವಾಗಿ ಓಡುತ್ತಿದ್ದರೆ ಇತ್ತ ಸ್ನೇಹಿತೆಯರು ಶಿಳ್ಳೆ ಮತ್ತು ಚಪ್ಪಾಳೆ ಹೊಡೆಯುವ ಮೂಲಕ ಪ್ರೊತ್ಸಾಹಿಸಿದರು. ಮೂರು ಕಾಲಿನ ಓಟವಂತೂ ನೋಡುಗರ ಮೈ ಜುಮ್ಮೆನ್ನುವಂತಿತ್ತು, ಹಾಗೆಯೇ ಗೊಣಿಚೀಲದ ಓಟದಲ್ಲಿ ವಿದ್ಯಾರ್ಥಿನಿಯರು ಕಪ್ಪೆಗಳಂತೆ ಕುಪ್ಪಳಿಸಿ ಸಂತಸಪಟ್ಟರು. ಇನ್ನು ಹಗ್ಗ-ಜಗ್ಗಾಟದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿನಿಯರ ತಂಡಗಳು ತಮ್ಮ ಬಲಾಬಲವನ್ನು ಪ್ರದರ್ಶಿಸುವ ಮೂಲಕ ಕ್ರೀಡಾಕೂಟಕ್ಕೆ ಶಕ್ತಿಯನ್ನು ತುಂಬಿದರು. ಅತ್ತ ಕುಂಟೆಪಿಳ್ಳಿ ಸ್ಪರ್ಧೆಗೆ ಭಾಗವಹಿಸಲು ವಿದ್ಯಾರ್ಥಿನಿಯರು ಮುಗಿಬಿದಿದ್ದರು. ಬಾಲ್ಯದ ಆಟಗಳನ್ನು ಆಡಲು ವಿದ್ಯಾರ್ಥಿನಿಯರು ಸಾಲುಗಟ್ಟಿ ನಿಂತಿದ್ದು, ಎಲ್ಲರ ಗಮನ ಸೆಳೆಯಿತು. ಕೈ ಗಮ್ಮತ್ತು ಸ್ಪರ್ಧೆಯಲ್ಲೂ ಕೂಡ ವಿದ್ಯಾರ್ಥಿನಿಯರು ನಾವೇನು ಪುರುಷರಿಗಿಂತ ಕಮ್ಮಿ ಇಲ್ಲ ಎಂಬಂತೆ ಉತ್ತಮ ಪ್ರದರ್ಶನ ನೀಡಿದರು.

ವಿದ್ಯಾರ್ಥಿನಿಯರಲ್ಲಿ ಕ್ಯಾಂಟೀನ್ ಡೇ ಖುಷಿ:

ಕಾಲೇಜಿನಲ್ಲಿ ವಿದ್ಯಾರ್ಥಿಗಳು ಕ್ಯಾಂಟೀನ್ ಡೇನಲ್ಲಿ ರಾಗಿ ಅಂಬಲಿ, ಮಸಾಲೆ ಮಜ್ಜಿಗೆ, ಮೊಳಕೆ ಕಾಳುಗಳು, ಚುರುಮುರಿ, ಪಾನಿಪುರಿ, ಬಗೆಬಗೆಯ ಹಣ್ಣುಗಳು, ಬಿರಿಯಾನಿಯನ್ನು ಸಿದ್ಧಪಡಿಸಿ ಮಾರಾಟ ಮಾಡಿ ತಿಂಡಿ ಪ್ರಿಯರನ್ನು ತಮ್ಮತ್ತ ಸೆಳೆದರು. ಇದಕ್ಕೂ ಮೊದಲು ಕಾಲೇಜಿನ ಪ್ರಾಂಶುಪಾಲರು ಡಾ.ಕೆ.ಜಿ. ಕವಿತ ’ಗ್ರಾಮೀಣ ಕ್ರೀಡೆ’ ಹಾಗೂ ’ಕ್ಯಾಂಟಿನ್ ಡೇ’ ಗೆ ಚಾಲನೆ ನೀಡಿದ ನಂತರ ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿದರು.

ಇತ್ತೀಚೆಗೆ ಯುವಪೀಳಿಗೆಯಲ್ಲಿ ಮೊಬೈಲ್ ವ್ಯಾಮೋಹ ಹೆಚ್ಚಾಗಿ ಗ್ರಾಮೀಣ ಕ್ರೀಡೆಗಳಲ್ಲಿ ಆಸಕ್ತಿ ಕಡಿಮೆಯಾಗುತ್ತಿದೆ, ಹೀಗಾಗಿ ಅವರಲ್ಲಿ ಆಸಕ್ತಿ ಹೆಚ್ಚಿಸುವ ಸಲುವಾಗಿ ’ಗ್ರಾಮೀಣ ಕ್ರೀಡೆ’ ಹಾಗೂ ’ಕ್ಯಾಂಟಿನ್ ಡೇ’ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಕಾಲೇಜಿನಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ವಿದ್ಯಾರ್ಥಿಗಳು ಪ್ರತಿ ಕ್ರೀಡಾಕೂಟದಲ್ಲಿಯೂ ಭಾಗವಹಿಸುವ ಮೂಲಕ ಗ್ರಾಮೀಣ ಕಲರವಕ್ಕೆ ಮೆರಗು ತರಬೇಕು ಎಂದರು.

ಸಾಂಸ್ಕೃತಿಕ ವೇದಿಕೆ ಸಂಚಾಲಕ ಎಚ್.ಎನ್.ಹರೀಶ್ ಮಾತನಾಡಿ, ಗ್ರಾಮೀಣ ಭಾಗದ ಕ್ರೀಡೆಗಳಿಗೆ ಉತ್ತೇಜನ ನೀಡುವ ಸಲುವಾಗಿ ಗ್ರಾಮೀಣ ಕಲರವ ಹಮ್ಮಿಕೊಳ್ಳಲಾಗಿದೆ. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಾದ ಗ್ರಾಮೀಣ ಕ್ರೀಡೆಗಳು ವಿಶೇಷವಾಗಿವೆ. ಪ್ರತಿ ವರ್ಷ ನಡೆಸುವ ಈ ಗ್ರಾಮೀಣ ಕಲರವಕ್ಕೆ ಸಮಿತಿಯೂ ಮೆಚ್ಚುಗೆಯನ್ನು ವ್ಯಕ್ತಪಡಿಸಿದೆ ಎಂದು ಹೇಳಿದರು.

ಕಾಲೇಜಿನ ವಿದ್ಯಾರ್ಥಿನಿ ಸೋನಾ ಮಾತನಾಡಿ, ಯಾವಾಗಲೂ ಪಾಠ- ಪ್ರವಚನಗಳಲ್ಲಿ ಕಳೆಯುವ ನಮಗೆ ಇಂತಹ ಗ್ರಾಮೀಣ ಆಟೋಟಗಳು ಏರ್ಪಡಿಸಿರುವುದು ಸ್ಪೂರ್ತಿ ಹೆಚ್ಚಿಸುತ್ತದೆ. ಗ್ರಾಮೀಣ ಕ್ರೀಡೆಗಳು ನಶಿಸಿ ಹೊಗದೇ ಮುಂದಿನ ಪೀಳಿಗೆಗೂ ಉಳಿಯುವಂತೆ ಮಾಡುವಲ್ಲಿ ನಮ್ಮ ಸರಕಾರಿ ಮಹಿಳಾ ಕಾಲೇಜಿನ ಸಹಕಾರ ಸಂತೋಷ ತಂದಿದೆ ಎಂದರು.

ಗ್ರಾಮೀಣ ಕಲರವದಲ್ಲಿ ಕಾಲೇಜಿನ ಎಲ್ಲಾ ವಿಭಾಗದ ಪ್ರಾಧ್ಯಾಪಕರು, ಬೋಧಕೇತರ ವರ್ಗ ಹಾಗೂ ವಿದ್ಯಾರ್ಥಿನಿಯರು ಭಾಗವಹಿಸಿ ಯಶಸ್ವಿಗೊಳಿಸಿದರು.--