ಪ್ರತಿದಿನ ಯೋಗ ಅಭ್ಯಾಸ ಮಾಡುವುದರಿಂದ ಮನಸ್ಸಿನಲ್ಲಿ ಸಕಾರಾತ್ಮಕ ಚಿಂತನೆಗಳು ಮೂಡಲಿವೆ.

ಕಾರವಾರದಲ್ಲಿ 12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಉದ್ಘಾಟಿಸಿದ ಡಿಸಿ

ಕನ್ನಡಪ್ರಭ ವಾರ್ತೆ ಕಾರವಾರ

ಪ್ರತಿದಿನ ಯೋಗ ಅಭ್ಯಾಸ ಮಾಡುವುದರಿಂದ ಮನಸ್ಸಿನಲ್ಲಿ ಸಕಾರಾತ್ಮಕ ಚಿಂತನೆಗಳು ಮೂಡಲಿವೆ ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ಹೇಳಿದರು.

ಜಿಲ್ಲಾಡಳಿತ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಪೊಲೀಸ್ ಕಲ್ಯಾಣ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ 12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ಈಚಿನ ದಿನಗಳಲ್ಲಿ ತಂತ್ರಜ್ಞಾನ ಬೆಳೆದಂತೆ ದೈಹಿಕ ಶ್ರಮ ಕಡಿಮೆಯಾಗಿದ್ದು, ಆರೋಗ್ಯದ ಕಡೆಗೆ ನಿರ್ಲಕ್ಷ್ಯ ವಹಿಸಲಾಗುತ್ತಿದೆ. ಆಧುನಿಕ ಜೀವನಶೈಲಿಯಿಂದಾಗಿ ಸಣ್ಣ ಮಕ್ಕಳಲ್ಲೂ ತೀವ್ರ ಒತ್ತಡ, ಖಿನ್ನತೆ ಹಾಗೂ ವಿದ್ಯಾರ್ಥಿಗಳಲ್ಲಿ ಆತ್ಮಹತ್ಯೆಯಂತಹ ನಕಾರಾತ್ಮಕ ಪ್ರವೃತ್ತಿಗಳು ಕಂಡುಬರುತ್ತಿವೆ ಎಂದರು.

ನಮ್ಮ ಹಿರಿಯರು ಪ್ರತಿದಿನ ದೈಹಿಕ ಶ್ರಮದ ಚಟುವಟಿಕೆಯನ್ನು ಮಾಡುತ್ತಿದ್ದರಿಂದ ಸಹಜವಾಗಿ ಅವರಲ್ಲಿ ಆರೋಗ್ಯ ವೃದ್ಧಿಯಾಗಿತ್ತು. ಆದರೆ ಪ್ರಸ್ತುತ ಆಧುನಿಕ ಜೀವನ ಶೈಲಿಯಿಂದಾಗಿ ದೈಹಿಕ ಶ್ರಮದ ಚಟುವಟಿಕೆ ಕಡಿಮೆಯಾಗಿದ್ದು, ಮಾನಸಿಕ ಒತ್ತಡ ಅಧಿಕವಾಗಿದೆ. ಯೋಗ ಮತ್ತು ಕ್ರೀಡೆಯಿಂದಾಗಿ ಒತ್ತಡ ರಹಿತ ಆರೋಗ್ಯ ಪೂರ್ಣ ಜೀವನ ನಡೆಸಲು ಸಾಧ್ಯವಾಗಲಿದ್ದು, ಇದಕ್ಕಾಗಿ ಪ್ರತಿದಿನ ಸಮಯ ಮೀಸಲಿಟ್ಟುಕೊಂಡು ಅಭ್ಯಾಸ ಮಾಡಬೇಕು. ಯೋಗವು ನಮ್ಮ ದೇಶವು ಇಡೀ ಜಗತ್ತಿಗೆ ನೀಡಿರುವ ಅತ್ಯಂತ ಅಮೂಲ್ಯವಾದ ಮತ್ತು ಮಹತ್ತರವಾದ ಜಾಗತಿಕ ಕೊಡುಗೆಯಾಗಿದೆ ಎಂದರು.

ಈ ವರ್ಷದ ಯೋಗ ದಿನದ ಮುಖ್ಯ ಧ್ಯೇಯವಾಕ್ಯವಾದ ಆರೋಗ್ಯಕರ ವೃದ್ದಾಪ್ಯಕ್ಕಾಗಿ ಯೋಗ ಇದು ಪ್ರಸ್ತುತ ಜೀವನಶೈಲಿಗೆ ಅತ್ಯಂತ ಸೂಕ್ತವಾಗಿದೆ. ಯಾವುದೇ ವಯಸ್ಸಿನ ಮಿತಿಯಿಲ್ಲದೆ ಪ್ರತಿಯೊಬ್ಬರೂ ಸರಳ ಯೋಗಗಳನ್ನು ಪ್ರತಿದಿನ ಮಾಡಬಹುದಾಗಿದ್ದು, ಇದು ವೃದಾಪ್ಯದಲ್ಲಿ ಆರೋಗ್ಯವಾಗಿರಲು ಸಹಕಾರಿಯಾಗಲಿದ್ದು, ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡಬೇಕು ಎಂದರು.

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂಕ ಪಡೆದು, ಕೇಂದ್ರ ಸರ್ಕಾರ ಮತ್ತು ಜಪಾನ್ ಸರ್ಕಾರದ ಸುಕುರ ಸ್ಟೂಡೆಂಟ್ ಎಕ್ಸ್‌ಚೇಂಜ್‌ ಕಾರ್ಯಕ್ರಮದ ಅಡಿಯಲ್ಲಿ ಜಪಾನ್ ಪ್ರವಾಸ ಕೈಗೊಂಡಿದ್ದ ವಿದ್ಯಾರ್ಥಿ ಆಕಾಶ್ ಹರಿಕಂತ್ರ ಅವರನ್ನು ಜಿಲ್ಲಾಡಳಿತದಿಂದ ಸನ್ಮಾನಿಸಲಾಯಿತು.

ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ದಿಲೀಷ್ ಶಶಿ, ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶಂಕರ ರಾವ್, ಜಿಲ್ಲಾ ಆಯುಷ್ ಅಧಿಕಾರಿ ಡಾ. ಪ್ರವೀಣ್, ಹಿರಿಯ ಆರ್ಯುವೇದ ವೈದ್ಯ ಡಾ. ಜಗದೀಶ್ ಯಾಜಿ, ಆಯುಷ್ ಇಲಾಖೆಯ ಆಡಳಿತಾಧಿಕಾರಿ ಸಂಜೀವ್ ಕುಮಾರ್, ಎನ್‌ಸಿಸಿ ಕಮಾಂಡೆಂಟ್ ಸುದರ್ಶನ್ ಸಿಂಗ್, ಸ್ಕೌಟ್ಸ್ ಮತ್ತು ಗೈಡ್ಸ್‌ನ ಡಾ. ಗಣೇಶ್ ಬಿಷ್ಠಣ್ಣನವರ್, ರೋಟರಿ ಅಧ್ಯಕ್ಷೆ ಶಿವಾನಿ ರೇವಣಕರ್, ರೆಡ್‌ಕ್ರಾಸ್ ಸಂಸ್ಥೆಯ ವಿ.ಎಂ. ಹೆಗಡೆ, ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ಕವಿತಾ, ಪತಂಜಲಿ ಅಧ್ಯಕ್ಷೆ ಸುಮಾ ನಾಯಕ್ ಮತ್ತಿತರರು ಇದ್ದರು.

ಸಾಮೂಹಿಕ ಯೋಗಾಭ್ಯಾಸ ಮತ್ತು ಪ್ರಾಣಾಯಾಮ ನಡೆಯಿತು. ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ಧ್ಯಾನ, ಶಾಂತಿ ಮಂತ್ರ ಕಾರ್ಯಕ್ರಮ, ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಯೋಗ ನೃತ್ಯ ಪ್ರದರ್ಶನ ನಡೆಯಿತು. ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.