ಒಂದಕ್ಕಿಂತ ಹೆಚ್ಚು ಮತದಾರರ ಗುರುತಿನ ಚೀಟಿ ಹೊಂದುವ ಮೂಲಕ ಮತದಾನದ ಹಕ್ಕನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ಅನ್ಬುಮಣಿ, ಭಾರತೀಯ ಚುನಾವಣಾ ಆಯೋಗ ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.
ಮಡಿಕೇರಿ: ಒಂದಕ್ಕಿಂತ ಹೆಚ್ಚು ಮತದಾರರ ಗುರುತಿನ ಚೀಟಿ ಹೊಂದುವ ಮೂಲಕ ಮತದಾನದ ಹಕ್ಕನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ಅನ್ಬುಮಣಿ, ಭಾರತೀಯ ಚುನಾವಣಾ ಆಯೋಗ ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.ಮತದಾರರ ಗುರುತಿನ ಚೀಟಿ ವಿಶೇಷ ತೀವ್ರ ಪರಿಷ್ಕರಣೆ ಸಂದರ್ಭ ಆದಿಮಸಂಜಾತ ಕೊಡವ ಮತದಾರರನ್ನು ರಕ್ಷಿಸಲು ಮತ್ತು ಕೊಡವಲ್ಯಾಂಡ್‌ನಲ್ಲಿ ಹೊರಗಿನವರು ಹೊಂದಿರುವ ಒಂದಕ್ಕಿಂತ ಹೆಚ್ಚು ವೋಟರ್ ಐಡಿಗಳನ್ನು ರದ್ದುಗೊಳಿಸಲು ತುರ್ತು ಹಸ್ತಕ್ಷೇಪ ಮಾಡಬೇಕು ಎಂದು ಕೋರಿದ್ದಾರೆ.ಒಂದಕ್ಕಿಂತ ಹೆಚ್ಚು ವೋಟರ್ ಐಡಿ ಹೊಂದಿರುವವರ ಕಾರ್ಡ್ಗಳನ್ನು ಕಟ್ಟುನಿಟ್ಟಾಗಿ ರದ್ದುಗೊಳಿಸಬೇಕು ಮತ್ತು ಪ್ರಜಾಪ್ರತಿನಿಧಿ ಕಾಯ್ದೆ 1950ರ ಸೆಕ್ಷನ್ 31ರ ಅಡಿಯಲ್ಲಿ ಅಂತಹ ಅಪರಾಧಿಗಳ ವಿರುದ್ಧ ಕಠಿಣ ದಂಡನಾತ್ಮಕ ಕ್ರಮವನ್ನು ಕೈಗೊಳ್ಳಬೇಕು.ಕೊಡಗಿನ ಕಾನೂನುಬದ್ಧ ಆದಿಮಸಂಜಾತ ಮತದಾರರಾಗಿರುವ ಕೊಡವರನ್ನು ಮತದಾರರ ಪಟ್ಟಿಗೆ ಸೇರಿಸಲು ವಿಶೇಷ ಕಾಳಜಿ ವಹಿಸಬೇಕು. 2026ರ ಜೂನ್ 30 ರಿಂದ 2026ರ ಜುಲೈ 29 ರವರೆಗೆ ನಡೆಯುತ್ತಿರುವ ಈ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಎಲ್ಲಾ ಕೊಡವರು ಕಡ್ಡಾಯವಾಗಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಲು ಮತ್ತು ಗುರುತನ್ನು ಪರಿಶೀಲಿಸಿಕೊಳ್ಳಬೇಕು. ಏಕ-ಜನಾಂಗೀಯ, ಪ್ರಕೃತಿ ಆರಾಧಕರಾದ ಕೊಡವರು, ಕೊಡವಲ್ಯಾಂಡ್ (ಕೊಡಗು)ನ ಆದಿಮಸಂಜಾತರಾಗಿದ್ದರೆ. ಕೊಡಗನ್ನು ಹೊರತುಪಡಿಸಿ, ಕೊಡವರಿಗೆ ಕೊಡವಲ್ಯಾಂಡ್‌ನಿಂದ ಹೊರಗೆ ಯಾವುದೇ ಸಾಂಸ್ಕೃತಿಕ ಬೇರುಗಳಿಲ್ಲ. ಈ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ, ಚುನಾವಣಾ ಪಟ್ಟಿಯಲ್ಲಿ ಕೊಡವರ ಅನನ್ಯ ಗುರುತನ್ನು ಮರುಸ್ಥಾಪಿಸಬೇಕು.ಕೊಡವಲ್ಯಾಂಡ್‌ನಲ್ಲಿ ಆಶ್ರಯ ಪಡೆದಿರುವ ಹೊರಗಿನವರು ತಮ್ಮ ಹೆಸರಿನಲ್ಲಿ ಅಸಂಖ್ಯಾತ ವೋಟರ್ ಐಡಿಗಳನ್ನು ಹೊಂದಿದ್ದಾರೆ. ಅಂತಹ ಎಲ್ಲಾ ಕಾನೂನುಬಾಹಿರ ಐಡಿಗಳನ್ನು ರದ್ದುಗೊಳಿಸಬೇಕು. ಇದಕ್ಕೆ ಸಹಕರಿಸುತ್ತಿರುವ ಪಂಚಾಯತ್ ಪಿಡಿಒಗಳು ಹಾಗೂ ಸದಸ್ಯರನ್ನು ಐಪಿಸಿ ಮತ್ತು ಪ್ರಜಾಪ್ರತಿನಿಧಿ ಕಾಯ್ದೆಯಡಿ ಕ್ರಿಮಿನಲ್ ಶಿಕ್ಷೆಗೆ ಒಳಪಡಿಸಬೇಕು ಎಂದು ಎನ್.ಯು.ನಾಚಪ್ಪ ಒತ್ತಾಯಿಸಿದ್ದಾರೆ.
