ಸಾರಾಂಶ
ಬೆಂಗಳೂರು ; ಲೋಕಸಭೆ ಚುನಾವಣೋತ್ತರ ಸಮೀಕ್ಷೆಯ ಫಲಿತಾಂಶಗಳನ್ನು ಸಂಪೂರ್ಣ ತಳ್ಳಿ ಹಾಕಿದ್ದೇವೆ. ರಾಹುಲ್ ಗಾಂಧಿ ಹೇಳಿದಂತೆ ಇದು ನರೇಂದ್ರ ಮೋದಿ ಮಾಧ್ಯಮ ಸಮೀಕ್ಷೆ. ನಮ್ಮ ಪ್ರಕಾರ ನಾವು ರಾಜ್ಯದಲ್ಲಿ ಕನಿಷ್ಠ 15 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವಿಧಾನಸೌಧದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಚುನಾವಣೋತ್ತರ ಸಮೀಕ್ಷೆಗಳು ವಾಸ್ತವ ಅಲ್ಲ ಎಂಬುದನ್ನು ಈಗಾಗಲೇ ಸ್ಪಷ್ಟಪಡಿಸಿದ್ದೇವೆ. ಕಳೆದ ವಿಧಾನಸಭೆ ಚುನಾವಣೆಯಲ್ಲೂ ಕರ್ನಾಟಕದಲ್ಲಿ ಅತಂತ್ರ ಫಲಿತಾಂಶ ಬರಲಿದೆ ಎಂದಿದ್ದರು. ಬಳಿಕ ಫಲಿತಾಂಶ ಏನಾಯಿತು ಎಂಬುದು ಎಲ್ಲರ ಕಣ್ಣ ಮುಂದಿದೆ ಎಂದು ಹೇಳಿದರು. ಈಗಾಗಲೇ ರಾಹುಲ್‌ಗಾಂಧಿ ಅವರು ಚುನಾವಣೋತ್ತರ ಸಮೀಕ್ಷೆಯ ಬಗ್ಗೆ ಪ್ರತಿಕ್ರಿಯೆ ನೀಡಿ ಇದು ನರೇಂದ್ರ ಮೋದಿ ಮಾಧ್ಯಮ ಸಮೀಕ್ಷೆ. ಹೀಗಾಗಿ ಇದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ನನ್ನ ಪ್ರಕಾರವೂ ರಾಜ್ಯದಲ್ಲಿ ನಾವು ಕನಿಷ್ಠ 15 ಸ್ಥಾನಗಳನ್ನು ಗೆಲ್ಲುತ್ತೇವೆ. ಹೀಗಾಗಿ ಸಮೀಕ್ಷೆ ವರದಿಗಳನ್ನು ನಾವು ಸಂಪೂರ್ಣ ತಳ್ಳಿಹಾಕುತ್ತೇವೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಚುನಾವಣೋತ್ತರ ಸಮೀಕ್ಷೆ ಸುಳ್ಳಾಗಲಿದೆ: ಡಿಕೆಶಿ
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿ, ಚುನಾವಣೋತ್ತರ ಸಮೀಕ್ಷೆಗಳು ಸುಳ್ಳಾಗಲಿದ್ದು ಎನ್‌ಡಿಎ ಅಧಿಕಾರ ಕಳೆದುಕೊಂಡು ಇಂಡಿಯಾ ಒಕ್ಕೂಟ ಸರ್ಕಾರ ರಚನೆ ಮಾಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನರೇಂದ್ರ ಮೋದಿ ಅವರ ನೂರು ದಿನಗಳ ಕಾರ್ಯಕ್ರಮ ರಾಜಕೀಯ ತಂತ್ರದ ಭಾಗವಷ್ಟೇ. ಜನರ ಮನಸ್ಥಿತಿಯನ್ನು ಸಜ್ಜು ಮಾಡುವ ವ್ಯಾಖ್ಯಾನ ಬಿಟ್ಟರೆ ಇದರಲ್ಲಿ ಬೇರೆನೂ ಇಲ್ಲ. ನಾವು ಸಹ ರಾಜಕೀಯ ತಂತ್ರ ಹೊಂದಿದ್ದೇವೆ. ಪ್ರತಿಯೊಂದು ಪಕ್ಷವು ಒಂದೊಂದು ತಂತ್ರ ಅನುಸರಿಸುತ್ತವೆ. ಆದರೆ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ ಎಂದು ಹೇಳಿದರು.