ಸಾರಾಂಶ
-ಸುಕನ್ಯಾ ಸಮೃದ್ಧಿ ಹಣ ದುರ್ಬಳಕೆ: ಅಂಚೆ ನೌಕರನಿಗೆ ಶಿಕ್ಷೆ, ದಂಡ
------ಕನ್ನಡಪ್ರಭ ವಾರ್ತೆ ದಾವಣಗೆರೆ
ಸುಕನ್ಯಾ ಸಮೃದ್ಧಿ ಯೋಜನೆಯಡಿ ಸಾರ್ವಜನಿಕರಿಗೆ 1,08,500 ರು. ವಂಚಿಸಿ, ಅಧಿಕಾರ ದುರುಪಯೋಗ ಹಿನ್ನೆಲೆ ಆರೋಪಿ ಅಂಚೆ ಪಾಲಕನಿಗೆ 1 ವರ್ಷ 6 ತಿಂಗಳ ಕಾಲ ಕಠಿಣ ಕಾರಾಗೃಹ ಶಿಕ್ಷೆ, 10 ಸಾವಿರ ದಂಡ ವಿಧಿಸಿ ಚನ್ನಗಿರಿಯ ಪ್ರಧಾನ ಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ತೀರ್ಪು ನೀಡಿದೆ.ಚಿರಡೋಣಿ ಗ್ರಾಮದ ಅಂಚೆ ಪಾಲಕ ಕೆ.ಆರ್.ಶ್ರೀಕಾಂತ ಶಿಕ್ಷೆಗೆ ಗುರಿಯಾದ ಅಪರಾಧಿ. ಶಿವಮೊಗ್ಗದ ಪೂರ್ವ ವಿಭಾಗದ ಸಹಾಯಕ ಅಂಚೆ ಅಧೀಕ್ಷಕ ಡಿ.ಗಣೇಶ್ 24.9.2018ರಂದು ಚಿರಡೋಣಿ ಅಂಚೆ ಪಾಲಕ ಕೆ.ಆರ್.ಶ್ರೀಕಾಂತ ಸುಕನ್ಯಾ ಸಮೃದ್ಧಿ ಯೋಜನೆಯಡಿ ಸಾರ್ವಜನಿಕರು ಅಂಚೆ ಇಲಾಖೆ ಲೆಕ್ಕ ಶೀರ್ಷಿಕೆಗೆ ಜಮಾ ಮಾಡಲು ನೀಡಿದ್ದ 1,08,500 ರು. ಜಮಾ ಮಾಡದೇ, ಸ್ವಂತಕ್ಕೆ ಬಳಸಿಕೊಂಡಿದ್ದ ಬಗ್ಗೆ ದೂರು ನೀಡಿದ್ದರು.
ಯಶಸ್ವಿನಿ, ತಾಯಿ ರೂಪಾ ಖಾತೆಗೆ ಜಮಾ ಮಾಡಲು ನೀಡಿದ್ದ 64 ಸಾವಿರ ರು., ಸಿ.ಎಂ.ದೀಕ್ಷಾ, ತಂದೆ ವೀರಭದ್ರಯ್ಯ ಇವರ ಖಾತೆಗೆ ಜಮಾ ಮಾಡಲು ನೀಡಿದ್ದ 10,500 ರು., ಎಸ್.ಎಂ.ಮೇಘನಾ ತಂದೆ ಸಿದ್ದಲಿಂಗಯ್ಯ ನೀಡಿದ್ದ 15 ಸಾವಿರ ರು., ಎಂ.ಜಿ. ಸಹನಾ ತಂದೆ ಗೋಪಾಲರಾವ್ ನೀಡಿದ್ದ 19 ಸಾವಿರ ರು. ಈ ಎಲ್ಲರ ಖಾತೆಗಳಿಂದ ಒಟ್ಟು 1,08,500 ರು. ಮಾಸಿಕವಾಗಿ ಅಂಚೆ ಇಲಾಖೆ ಲೆಕ್ಕ ಶೀರ್ಷಿಕೆಗೆ ಜಮಾ ಮಾಡದೇ, ಸ್ವಂತಕ್ಕೆ ಬಳಸಿಕೊಂಡು ಮೋಸ ಮಾಡಿದ್ದ ಬಗ್ಗೆ ಬಸವಾಪಟ್ಟಣ ಪೊಲೀಸ್ ಠಾಣೆಗೆ ನೀಡಿದ್ದ ದೂರಿನಲ್ಲಿ ಕ್ರಮಕ್ಕೆ ಮನವಿ ಮಾಡಿದ್ದರು.ಬಸವಾಪಟ್ಟಣ ಪೊಲೀಸ್ ಉಪ ನಿರೀಕ್ಷಕಿ ಕಿಲೋವತಿ ಅವರು ಚಿರಡೋಣಿ ಅಂಚೆ ಪಾಲಕ ಕೆ.ಆರ್.ಶ್ರೀಕಾಂತನನ್ನು ತನಿಖೆಗೆ ಒಳಪಡಿಸಿದಾಗ ಅಪರಾಧ ದೃಢಪಟ್ಟಿದ್ದರಿಂದ ದೋಷಾರೋಪಣೆ ಪಟ್ಟಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ನ್ಯಾ. ಸಿದ್ದಲಿಂಗಯ್ಯ ಬಿ.ಗಂಗಾಧರ ಮಠ ಅವರು ಆರೋಪಿ ಕೆ.ಆರ್.ಶ್ರೀಕಾಂತ(31 ವರ್ಷ)ನಿಗೆ 1 ವರ್ಷ 6 ತಿಂಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 10 ಸಾವಿರ ದಂಡ ವಿಧಿಸಿ, ತೀರ್ಪು ನೀಡಿದರು. ಸರ್ಕಾರದ ಪರ ಸಹಾಯಕ ಸರ್ಕಾರಿ ಅಭಿಯೋಜಕ ಮಂಜವ್ವ ದಾಸರ್ ನ್ಯಾಯ ಮಂಡಿಸಿದ್ದರು. ತನಿಖಾಧಿಕಾರಿ ಕಾರ್ಯಕ್ಕೆ ಎಸ್ಪಿ ಉಮಾ ಪ್ರಶಾಂತ್ ಶ್ಲಾಘಿಸಿದ್ದಾರೆ.