ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಕಾಂಗ್ರೆಸ್ ಪಕ್ಷದಿಂದ ಪೋಸ್ಟರ್ ಅಭಿಯಾನ

| Published : Feb 12 2024, 01:35 AM IST

ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಕಾಂಗ್ರೆಸ್ ಪಕ್ಷದಿಂದ ಪೋಸ್ಟರ್ ಅಭಿಯಾನ
Share this Article
  • FB
  • TW
  • Linkdin
  • Email

ಸಾರಾಂಶ

ಗೋ ಬ್ಯಾಕ್ ಗೋ ಬ್ಯಾಕ್ ಅಮಿತ್ ಶಾ, ಕನ್ನಡಿಗರ ವಿರೋಧಿ ಮೋದಿ, ನಮ್ಮ ತೆರಿಗೆ- ನಮ್ಮ ಹಕ್ಕು, ಕರ್ನಾಟಕಕ್ಕೆ ಮಲತಾಯಿ ಧೋರಣೆ ನೀತಿ ಅನುಸರಿಸುತ್ತಿರುವ ಕೇಂದ್ರ ಸರ್ಕಾರಕ್ಕೆ ಧಿಕ್ಕಾರ ಮೊದಲಾದ ಘೋಷಣೆಗಳನ್ನು ಕೂಗಿ ಕಾಂಗ್ರೆಸ್‌ ಕಾರ್ಯಕರ್ತರು ಪೋಸ್ಟರ್‌ಗಳನ್ನು ಅಂಟಿಸಿದರು.

ಕನ್ನಡಪ್ರಭ ವಾರ್ತೆ ಮೈಸೂರು

ಬರ ನಿರ್ವಹಣೆಗೆ ಅನುದಾನ ನೀಡದೆ ಇರುವ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯತಕರ್ತರು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಭಾನುವಾರ ಪೋಸ್ಟರ್ ಅಭಿಯಾನ ಹಮ್ಮಿಕೊಂಡಿದ್ದರು.

ನಗರದ ಮೆಟ್ರೋಪೋಲ್ ವೃತ್ತದಲ್ಲಿರುವ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಪ್ರತಿಮೆಗೆ ಅವರು ಪುಷ್ಪನಮನ ಸಲ್ಲಿಸಿದರು. ಬಳಿಕ ಅವರು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೇ ಬರದಿಂದ ನಲುಗುತ್ತಿರುವ ನಾಡಿಗೆ ಬರಿಗೈಯಲ್ಲಿ ಬಂದಿರಾ ಸೇರಿದಂತೆ ವಿವಿಧ ಘೋಷಣೆಯುಳ್ಳ ಪೋಸ್ಟರ್‌ ಗಳನ್ನು ಮಹಾರಾಣಿ ಕಾಲೇಜಿನ ಕಾಂಪೌಂಡ್ ಗೋಡೆಗೆ ಅಂಟಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಇದೆ ಎಂಬ ಒಂದೇ ಕಾರಣಕ್ಕೆ ತೆರಿಗೆ ಹಣ, ಬರ ಪರಿಹಾರ, ಯೋಜನಾ ವೆಚ್ಚ ಹೀಗೆ ಸುಮಾರು 3,40,000 ಕೋಟಿ ರು. ಬಿಡುಗಡೆ ಮಾಡದೇ ರಾಜ್ಯಕ್ಕೆ ಮೋಸ ಮಾಡುತ್ತಿದ್ದೀರಾ ಎಂದು ಕೇಂದ್ರ ಸಚಿವ ಅಮಿತ್ ಶಾ ವಿರುದ್ಧ ಘೋಷಣೆಗಳನ್ನು ಕೂಗಿದರು.

ಈ ವೇಳೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪೋಸ್ಟರ್ ಗಳನ್ನು ವಶಪಡಿಸಿಕೊಂಡು ಜೀಪಿನಲ್ಲಿ ಇರಿಸಿದರು. ಇದನ್ನು ಖಂಡಿಸಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯ್ ಕುಮಾರ್, ಜೀಪಿನಲ್ಲಿರಿಸಿದ್ದ ಪೋಸ್ಟರ್‌ ಗಳನ್ನು ಪೊಲೀಸರಿಂದ ವಾಪಸ್ ಪಡೆದರು.

ನಂತರ ಗೋ ಬ್ಯಾಕ್ ಗೋ ಬ್ಯಾಕ್ ಅಮಿತ್ ಶಾ, ಕನ್ನಡಿಗರ ವಿರೋಧಿ ಮೋದಿ, ನಮ್ಮ ತೆರಿಗೆ- ನಮ್ಮ ಹಕ್ಕು, ಕರ್ನಾಟಕಕ್ಕೆ ಮಲತಾಯಿ ಧೋರಣೆ ನೀತಿ ಅನುಸರಿಸುತ್ತಿರುವ ಕೇಂದ್ರ ಸರ್ಕಾರಕ್ಕೆ ಧಿಕ್ಕಾರ ಮೊದಲಾದ ಘೋಷಣೆಗಳನ್ನು ಕೂಗಿ ಪೋಸ್ಟರ್‌ ಗಳನ್ನು ಅಂಟಿಸಿದರು. ಸರ್ಕಾರಿ ಜಾಗದಲ್ಲಿ ಪೋಸ್ಟರ್ ಅಂಟಿಸಿದರೆ ಮೊಕದ್ದಮೆ ದಾಖಲಿಸಬೇಕಾಗುತ್ತದೆ ಎಂದು ಪೊಲೀಸರು ಎಚ್ಚರಿಕೆ ನೀಡಿದರೂ ಕಾರ್ಯಕರ್ತರು ಅಂಟಿಸುವುದು ಮುಂದುವರೆಸಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯ್ ಕುಮಾರ್, ನಗರಾಧ್ಯಕ್ಷ ಆರ್.ಮೂರ್ತಿ, ಮಖಂಡರಾದ ಎಂ. ಶಿವಣ್ಣ, ಭಾಸ್ಕರ್ ಎಲ್. ಗೌಡ, ಬಿ.ಕೆ. ಪ್ರಕಾಶ್, ಪುಷ್ಪಲತಾ ಚಿಕ್ಕಣ್ಣ, ಮೋದಾಮಣಿ, ಎಂ.ಕೆ. ಅಶೋಕ, ಶ್ರೀಧರಗೌಡ, ಕೆ. ಮಹೇಶ್, ವೆಂಕಟೇಶ್, ನಟರಾಜ್ ಮೊದಲಾದವರು ಇದ್ದರು.ನಾವು ವೈಯಕ್ತಿಕವಾಗಿ ಅಮಿತ್ ಶಾ ಆಗಮನವನ್ನು ವಿರೋಧಿಸುತ್ತಿಲ್ಲ. ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯಗಳ ಬಗ್ಗೆ ಧ್ವನಿ ಎತ್ತುತ್ತಿದ್ದೇವೆ. ರಾಜ್ಯದ ಬೇಡಿಕೆಗೆ ಸ್ಪಂದಿಸದೆ ಬರೀ ಕೈಯಲ್ಲಿ ಬಂದಿದ್ದಾರೆ. ಕೇಂದ್ರ ಸರ್ಕಾರ ಕರ್ನಾಟಕದ ಯೋಜನೆಗಳ ಬಗ್ಗೆ ತಾರತಮ್ಯ ಮಾಡುತ್ತಿದೆ. ರಾಜ್ಯದಿಂದ 4.32 ಲಕ್ಷ ಕೋಟಿ ರು. ತೆರಿಗೆ ಸಂಗ್ರಹವಾಗುತ್ತಿದ್ದರೂ ಶೇ.20 ರಷ್ಟು ಪಾಲು ಕೊಡುತ್ತಿಲ್ಲ. ಕರ್ನಾಟಕದಲ್ಲಿ ಬರಗಾಲದಿಂದ ಜನರು ತತ್ತರಿಸಿದ್ದರೂ ಪರಿಹಾರ ಬಿಡುಗಡೆ ಮಾಡುತ್ತಿಲ್ಲ.

- ಡಾ.ಬಿ.ಜೆ. ವಿಜಯ್ ಕುಮಾರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ