ಸಾರಾಂಶ
ನಗರಸಭೆ ಸಭಾಂಗಣದಲ್ಲಿ ಬಿಡ್ ದಾರರ ಪ್ರತಿಭಟನೆ । ಮುಂದೂಡಿಕೆ ಕಮಿಷನರ್ ಏಕಪಕ್ಷೀಯ ತೀರ್ಮಾನವೆಂದ ಅಧ್ಯಕ್ಷೆಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಚಿತ್ರದುರ್ಗ ನಗರಸಭೆ ಸುಪರ್ದಿಯಲ್ಲಿರುವ 37 ಮಳಿಗೆ ಹರಾಜು ಪ್ರಕ್ರಿಯೆ ವಿಚಾರದಲ್ಲಿ ಮಂಗಳವಾರ ನಾಟಕೀಯ ಬೆಳವಣಿಗೆ ನಡೆದಿದ್ದು ಬಿಡ್ ದಾರರು ತೀವ್ರ ಆಕ್ರೋಶ ಹೊರ ಹಾಕಿದ ಪ್ರಸಂಗಕ್ಕೆ ನಗರಸಭೆ ಸಾಕ್ಷಿಯಾಯಿತು.37 ಮಳಿಗೆ ಹರಾಜಿಗೆ ಪತ್ರಿಕಾ ಪ್ರಕಟಣೆ ಹೊರಡಿಸಿ ಹರಾಜಿಗೆ ಫೆ.25ರ ಮಂಗಳವಾರ ಬೆಳಗ್ಗೆ 11 ಗಂಟೆಗೆ ದಿನಾಂಕ ನಿಗಧಿ ಮಾಡಲಾಗಿತ್ತು. ಅದರಂತೆ ಬಿಡ್ ದಾರರು ಇಎಂಡಿ ಮೊತ್ತ ಡಿಡಿ ಸಂಗಡ ನಗರಸಭೆಗೆ ಆಗಮಿಸಿದ್ದರು. ಅಧ್ಯಕ್ಷೆ ಸುಮಿತಾ, ಉಪಾಧ್ಯಕ್ಷೆ ಶ್ರೀದೇವಿ, ಸ್ಥಾಯಿ ಸಮಿತಿ ಅಧ್ಯಕ್ಷ ನಸ್ರುಲ್ಲಾ ಬಿಡ್ ನಡೆಸಲು ಸಭಾಂಗಣದಲ್ಲಿ ಆಸೀನರಾಗಿದ್ದರು. ಆದರೆ ಪೌರಾಯುಕ್ತೆ ರೇಣುಕಾ ಸೇರಿದಂತೆ ಯಾರೊಬ್ಬ ನಗರಸಭೆ ಸಿಬ್ಬಂದಿಯೂ ಇರಲಿಲ್ಲ.
ಪೌರಾಯುಕ್ತರ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಅಧ್ಯಕ್ಷೆ ಸುಮಿತಾ, ನಮ್ಮ ಗಮನಕ್ಕೆ ಬಾರದಂತೆ ಪೌರಾಯುಕ್ತರು ಹರಾಜು ಮುಂದೂಡಿದ್ದಾರೆ. ರಾತ್ರಿ 12.20ಕ್ಕೆ ವಾಟ್ಸಾಪ್ ನಲ್ಲಿ ಮುಂದೂಡಿದ ಪತ್ರ ಹಾಕಿದ್ದಾರೆ. ಹರಾಜು ನಡೆಸಲು ಬರುವಂತೆ ಕಾಲ್ ಮಾಡಿದರೂ ಕರೆ ಸ್ವೀಕರಿಸುತ್ತಿಲ್ಲವೆಂದು ದೂರಿದರು.ನಗರಸಭೆ ಗೋಡೆ ಮೇಲೆ ಹರಾಜು ಮುಂದೂಡಿದ ಪತ್ರ ಅಂಟಿಸಲಾಗಿದೆ. ಅದರಲ್ಲಿ ಪೌರಾಯುಕ್ತರ ಸಹಿ ಇಲ್ಲ. ಕಷ್ಟ ಪಟ್ಟು ಡಾಕ್ಯುಮೆಂಟ್ ರೆಡಿ ಮಾಡಿಕೊಂಡು ಬಂದಿದ್ದೇವೆ. ಈಗ ಹರಾಜು ರದ್ದು ಮಾಡಿದರೆ ಹೇಗೆ. ರಾತ್ರೋ ರಾತ್ರಿ ಮುಂದೂಡುವ ನಿರ್ಧಾರ ಕೈಗೊಳ್ಳುವ ಅಗತ್ಯವಾದರೂ ಏನಿತ್ತೆಂದು ಬಿಡ್ ದಾರರು ಅಧ್ಯಕ್ಷರನ್ನು ಪ್ರಶ್ನಿಸಿದರು. ಸರಿಸುಮಾರು ಒಂದು ಗಂಟೆಗಳ ಕಾಲ ಸಭಾಂಗಣದಲ್ಲಿ ಕುಳಿತಿದ್ದ ಅಧ್ಯಕ್ಷರು ನಂತರ ಅಲ್ಲಿಂದ ನಿರ್ಗಮಿಸಿದರು. ಬಿಡ್ ದಾರರು ಘೋಷಣೆ ಕೂಗಿ ಸಭಾಂಗಣದಿಂದ ಹೊರ ನಡೆದರು.