ಸಾರಾಂಶ
- ವಿದ್ಯಾರ್ಥಿ ಭವನದಿಂದ ಆರೈಕೆ ಆಸ್ಪತ್ರೆವರೆಗೆ ಒತ್ತುವರಿ ತೆರವಿಗೆ ಸೂಚನೆ । ಬೆಳ್ಳಂಬೆಳಗ್ಗೆ ಡಿಸಿ ನಗರ ಪ್ರದಕ್ಷಿಣೆ
- ಹದಡಿ ರಸ್ತೆ, ಕೆಟಿಜೆ ನಗರ, ಡಿಡಿಪಿಐ ಕಚೇರಿ, ಹಳೇ ಕೋರ್ಟ್ ರಸ್ತೆ, ಹೈಸ್ಕೂಲ್ ಮೈದಾನ ರೌಂಡ್ಸ್ । ಅಧಿಕಾರಿಗಳ ಸಾಥ್- - -
ಕನ್ನಡಪ್ರಭ ವಾರ್ತೆ ದಾವಣಗೆರೆಗುಂಡಿ ಬಿದ್ದ ರಸ್ತೆಗಳು, ಸಿಮೆಂಟ್ ರಸ್ತೆಗಳ ಮಧ್ಯೆಯ ಬಿರುಕುಗಳ ದುರಸ್ತಿ ಅಗತ್ಯ ಕ್ರಮ ಕೈಗೊಳ್ಳುವಂತೆ ಪದೇಪದೇ ಸೂಚಿಸಿದ್ದರೂ ಕಿವಿಗೊಡದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ಬಗ್ಗೆ ಬೆಳ್ಳಂಬೆಳಗ್ಗೆಯೇ ಜಿಲ್ಲಾಧಿಕಾರಿ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಎಸ್.ನಿಜಲಿಂಗಪ್ಪ ಬಡಾವಣೆಯ ತಮ್ಮ ನಿವಾಸದಿಂದ ಬೈಸಿಕಲ್ ಏರಿ ವಿದ್ಯಾರ್ಥಿ ಭವನಕ್ಕೆ ಒಬ್ಬಂಟಿಯಾಗಿ ಬಂದ ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ಸ್ಥಳದಲ್ಲಿ ಹಾಜರಿದ್ದ ಪಾಲಿಕೆ ಆಯುಕ್ತೆ ರೇಣುಕಾ ಸೇರಿದಂತೆ ಎಂಜಿನಿಯರ್, ಪರಿಸರ ಅಭಿಯಂತರರು, ಆರೋಗ್ಯ ಅಧಿಕಾರಿಗಳ ಸಮೇತ ಹದಡಿ ರಸ್ತೆ, ಕೆಟಿಜೆ ನಗರ, ಡಿಡಿಪಿಐ ಕಚೇರಿ, ಹಳೇ ಕೋರ್ಟ್ ರಸ್ತೆ, ಹೈಸ್ಕೂಲ್ ಮೈದಾನದ ಎದುರು ನಗರ ಪ್ರದಕ್ಷಿಣೆ ಕೈಗೊಂಡರು.ವಿದ್ಯಾರ್ಥಿ ಭವನದಿಂದ ಆರೈಕೆ ಆಸ್ಪತ್ರೆ ಪಕ್ಕದ ಪೆಟ್ರೋಲ್ ಬಂಕ್‌ವರೆಗೂ ಮಳೆನೀರು ಬಂದರೆ ಚರಂಡಿ ಸೇರದಂತೆ ಕಾಮಗಾರಿ ಕೈಗೊಂಡ ಗುತ್ತಿಗೆದಾರರು, ಎಂಜಿನಿಯರ್‌ಗಳ ಕಾರ್ಯವೈಖರಿ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಮಳೆನೀರು ರಸ್ತೆಯಲ್ಲಿ ನಿಲ್ಲದಂತೆ ರಸ್ತೆ ಪಕ್ಕದ ಚರಂಡಿ ನೀರು ಸೇರುವಂತೆ ತಕ್ಷಣವೇ ಸೂಕ್ತ ವ್ಯವಸ್ಥೆ ಮಾಡಿಸಲು ಖಡಕ್ ಸೂಚನೆ ನೀಡಿದರು.
ದಾವಣಗೆರೆ- ಚನ್ನಗಿರಿ ಹೆದ್ದಾರಿಯಾದ ಹದಡಿ ರಸ್ತೆಯ ಇಕ್ಕೆಲಗಳಲ್ಲಿ ಮಾಂಸಾಹಾರಿ ಹೋಟೆಲ್, ಬಾರ್ ನಿಂದಾಗಿ, ಹಗಲು-ರಾತ್ರಿ ವಾಹನ ನಿಲುಗಡೆಯಿಂದಾಗಿ ವಾಹನ ಸವಾರರು, ಪಾದಚಾರಿಗಳು, ವಿಶೇಷವಾಗಿ ಮಕ್ಕಳು, ವಿದ್ಯಾರ್ಥಿನಿಯರು, ಮಹಿಳೆಯರಿಗೆ ತೊಂದರೆ ಆಗುತ್ತಿರುವ ದೂರುಗಳು ಕೇಳಿಬಂದಿದ್ದವು. ಈ ಹಿನ್ನೆಲೆ ನಗರ ಡಿವೈಎಸ್ಪಿ ಶರಣ ಬಸವೇಶ್ವರ ಜೊತೆಗೆ ಮಾತನಾಡಿದ ಡಿಸಿ, ಸಂಚಾರಿ ಪೊಲೀಸರಿಂದ ಸೂಕ್ತ ನಿಗಾ ವಹಿಸಲು ಕ್ರಮ ಕೈಗೊಳ್ಳುವುದಾಗಿ ಹೇಳಿದರು.ಹದಡಿ ರಸ್ತೆಯ ಇಕ್ಕೆಲದಲ್ಲಿ ತಳ್ಳುಗಾಡಿಯನ್ನು ರಸ್ತೆಗೆ ನಿಲ್ಲಿಸಿಕೊಂಡಿದ್ದವರು, ಪ್ಲಾಸ್ಟಿಕ್ ಚೀಲಗಳನ್ನು ಬಳಸುತ್ತಿದ್ದವರಿಗೂ ಎಚ್ಚರಿಕೆ ನೀಡಿದರು. ₹100, ₹200 ದುಡಿದು ಜೀವನ ಮಾಡುವವರು ನೀವು. ನಿಮಗೆ ದಂಡ ಹಾಕುವುದು ದೊಡ್ಡದಲ್ಲ. ನೀವೂ ಸಹ ಪ್ಲಾಸ್ಟಿಕ್‌ನಲ್ಲಿ ಹೂವು ಇತರೆ ವಸ್ತುಗಳನ್ನು ನೀಡುವುದನ್ನು ಬಿಡಬೇಕು.
ವಿದ್ಯಾರ್ಥಿ ಭವನದಿಂದ ಆರೈಕೆ ಆಸ್ಪತ್ರೆವರೆಗೆ ಇತರೆ ಅಂಗಡಿ, ಕಚೇರಿ, ನಾನ್ ವೆಜ್ ಹೋಟೆಲ್‌ಗಳ ಫುಟ್‌ಪಾತ್ ಒತ್ತುವರಿ ತೆರವು, ಕೆಟಿಜೆ ನಗರ 12ನೇ ಕ್ರಾಸ್ ಜಿಲ್ಲಾ ಖಜಾನೆ ಕಟ್ಟಡ, ಎದುರಿನ ಕಟ್ಟಡ ರಸ್ತೆಗೆ ಒತ್ತುವರಿ ಮಾಡಿದ ಜಾಗ ತೆರವು ಮಾಡಿಸಿ, ಶೀಘ್ರ ವರದಿ ನೀಡಲು ಪಾಲಿಕೆ ಎಂಜಿನಿಯರ್‌ಗಳಿಗೆ ಸೂಚಿಸಿದರು.ಅನಂತರ ಕೆಟಿಜೆ ನಗರ 16ನೇ ಕ್ರಾಸ್‌ನ ಹರ್ಷ ಬಾರ್ ಪಕ್ಕದಲ್ಲಿ ಅನೇಕ ತಿಂಗಳಿನಿಂದ ನಿಂತಿರುವ ವಾಹನವನ್ನು ತಕ್ಷಣ ತೆರವು ಮಾಡಿಸಲು, ಮಾಂಸದಂಗಡಿಗಳ ಮುಂದೆ ವಾಹನ ನಿಲ್ಲಿಸದಂತೆ ಸೂಚಿಸಿದರು. ಬಾಪೂಜಿ ಆಸ್ಪತ್ರೆ ಭಾಗದಿಂದ ಬರುವ ರಾಜ ಕಾಲುವೆ ಒತ್ತುವರಿ ಮಾಡಿ, ನಿರ್ಮಾಣ ಕಾಮಗಾರಿ ನಡೆಸಿದ್ದನ್ನು ಗಮನಿಸಿದ ಡಿಸಿ, ಕಟ್ಟಡ ಮಾಲೀಕರಿಗೆ ನೋಟಿಸ್ ಜಾರಿ ಮಾಡಿ, ಒತ್ತುವರಿ ತೆರವುಗೊಳಿಸಲು ಪಾಲಿಕೆ ಆಯುಕ್ತರು, ಎಂಜಿನಿಯರ್‌ಗಳಿಗೆ ಆದೇಶಿಸಿದರು.
ಅಲ್ಲಿಂದ ಕೆಟಿಜೆ ನಗರ 16ನೇ ಕ್ರಾಸ್‌ನಿಂದ 3ನೇ ಮೇನ್‌ನ 14-15ನೇ ಕ್ರಾಸ್ ಮತ್ತು 13-12ನೇ ಕ್ರಾಸ್‌ನ ಎರಡೂ ಕಡೆ ಕಸದ ರಾಶಿ ಇದ್ದುದನ್ನು ಆಗಷ್ಟೇ ಪಾಲಿಕೆ ಪೌರ ಕಾರ್ಮಿಕರು ಸ್ವಚ್ಛ ಮಾಡಿದ್ದನ್ನು ಗಮನಿಸಿ, ಸ್ಥಳೀಯ ನಿವಾಸದ ಕಾರ್ತಿಕ್ ಆನಂದರಾಜ್ ಇತರರಿಗೆ ನಾವು ಬಂದಾಗ ನೀವು ದೂರುವುದಲ್ಲ. ಸ್ವಚ್ಚತೆ ಕಾಪಾಡುವಲ್ಲಿ ನಮ್ಮಷ್ಟೇ ಜವಾಬ್ಧಾರಿ ಸಾರ್ವಜನಿಕರದೂ ಆಗಿರುತ್ತದೆ ಎಂದು ತಿಳಿಸಿದರು. ಅದೇ ವೇಳೆ ವೃದ್ಧೆಯೊಂದರು ಸತ್ತ ಇಲಿ ಬಿಸಾಡಿಹೋಗಿದ್ದ ಮನೆಗೆ ತೆರಳಿದ ಡಿಸಿ ಗಂಗಾಧರ ಸ್ವಾಮಿ, ನಿಮ್ಮನೆ ಬಾಗಿಲಿಗೆ ಕಸದ ಗಾಡಿ ಬಂದರೂ ಅದಕ್ಕೆ ಕಸ ಹಾಕುವುದಕ್ಕೆ ನಿಮಗೇನು ಅಡ್ಡಿ ಎಂದು ಪ್ರಶ್ನಿಸಿ, ಎಚ್ಚರಿಕೆ ನೀಡಿದರು. ಹಿಂಡು ಬೀದಿನಾಯಿಗಳ ಸಮಸ್ಯೆಯೂ ಡಿಸಿ ಗಮನಕ್ಕೆ ಬಂದಿತು.ಪಾಲಿಕೆ ಆಯುಕ್ತೆ ರೇಣುಕಾ, ಅಧೀಕ್ಷಕ ಅಭಿಯಂತರ ಚೌಹಾಣ್, ಇಇ ಉದಯಕುಮಾರ, ಎಇಇ ಸಿ.ಎಂ.ಸಚಿನಕುಮಾರ, ಜಲಸಿರಿ ಯೋಜನೆ ಎಇಇ ಸೋಮಶೇಖರ, ಎ.ಇ.ಗಳಾದ ದರ್ಶನ್, ಆನಂದಪ್ಪ, ಆರೋಗ್ಯ ನಿರೀಕ್ಷಕರಾದ ಮದನ್ ಕುಮಾರ, ಮಾರುತಿ, ಸ್ಥಳೀಯ ನಿವಾಸಿ ಪಿ.ಎನ್. ಜಗದೀಶ ಕುಮಾರ ಪಿಸೆ ಇತರರು ಇದ್ದರು.
- - -(ಬಾಕ್ಸ್)
* ಕಟ್ಟಡಗಳ ಅವಶೇಷ: ನೋಟಿಸ್‌ಗೆ ಡಿಸಿ ಸೂಚನೆ- ಹೈಸ್ಕೂಲ್ ಫೀಲ್ಡ್ ಎದುರಿನ ವಾಹನ ದಟ್ಟಣೆ ನಿವಾರಿಸಲು ಕ್ರಮ ದಾವಣಗೆರೆ: ನಗರದ ವಿದ್ಯಾರ್ಥಿ ಭವನ ಪಕ್ಕದಿಂದ ಅಂಬೇಡ್ಕರ್ ವೃತ್ತದವರೆಗೆ, ಕೆ.ಟಿ.ಜೆ. ನಗರ 4ನೇ ಕ್ರಾಸ್ ಹಿಂಭಾಗದ ಮಸೀದಿ ರಸ್ತೆಯ ಖಾಲಿ ನಿವೇಶನ, ಕಟ್ಟಡಗಳ ಅವಶೇಷ ವಿಲೇವಾರಿ ಮಾಡದ ಕಟ್ಟಡ, ಜಾಗದ ಮಾಲೀಕರಿಗೆ ನೋಟಿಸ್ ಜಾರಿ ಮಾಡಲು ಜಿಲ್ಲಾಧಿಕಾರಿ ಸೂಚಿಸಿದರು.
ನಗರದ ಅಂಬೇಡ್ಕರ್ ವೃತ್ತದಲ್ಲಿ ಗುಂಡಿ ಬಿದ್ದ ರಸ್ತೆ ಕಂಡು ಕೆಂಡಾಮಂಡಲರಾದ ಡಿಸಿ ಅವರು, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಏನು ಮಾಡುತ್ತಿದ್ದಾರೆ? ಹದಡಿ ರಸ್ತೆಯ ಗುಂಡಿಗಳ ಮುಚ್ಚಿ ವರದಿ ನೀಡುವಂತೆ ಇಲಾಖೆಗೆ ನೋಟಿಸ್ ನೀಡಿ, ನಾನೇ ಸಹಿ ಮಾಡುತ್ತೇನೆ ಎಂದು ಕಿಡಿಕಾರಿದರು.ಅಲ್ಲಿಂದ ಹಳೇ ಕೋರ್ಟ್ ರಸ್ತೆಯ ಸಿಮೆಂಟ್ ರಸ್ತೆ ಮಧ್ಯೆಯೂ ಗುಂಡಿಗಳು ಇರುವುದನ್ನು ಗಮನಿಸಿ, ಅಲ್ಲಿ ಡಾಂಬರ್ ಹಾಕಿಸಲು ಸೂಚನೆ ನೀಡಿದರು. ಅನಂತರ ಹೈಸ್ಕೂಲ್ ಮೈದಾನದ ಎದುರು ಹರಿಹರ, ರಾಣೆಬೆನ್ನೂರು ಕಡೆ ಸಾಗುವ ಬಸ್‌ಗಳ ನಿಲುಗಡೆಗೆ ಕ್ರಮ ಕೈಗೊಳ್ಳಿ. ಶ್ರೀ ಬೀರಲಿಂಗೇಶ್ವರ ದೇವಸ್ಥಾನ ಸಮಿತಿಯವರಿಗೆ ಕರೆಸಿ, ಅಲ್ಲಿರುವ ಸಣ್ಣಪುಟ್ಟ ವ್ಯಾಪಾರಸ್ಥರು ರಸ್ತೆಗೆ ಅಡ್ಡ ಇಟ್ಟಿರುವ ವಸ್ತುಗಳನ್ನು ತೆರವು ಮಾಡಿಸಿ. ಇಲ್ಲಿ ಸಾಲಾಗಿ 10 ಬಸ್ ನಿಂತರೂ ವಾಹನ ದಟ್ಟಣೆ ಆಗುವುದಿಲ್ಲ. ಅಷ್ಟು ವ್ಯವಸ್ಥಿತವಾಗಿ ಬಸ್ ನಿಲುಗಡೆಗೆ ವ್ಯವಸ್ಥೆ ಮಾಡಿ ಎಂದು ಆದೇಶ ನೀಡಿದರು.
ಅದೇ ಬಸ್ ಸ್ಟಾಪ್ ಬದಿ ಸಾಲು ಸಾಲಾಗಿ ನಿಂತಿದ್ದ ದ್ವಿಚಕ್ರ ವಾಹನಗಳ ಬಗ್ಗೆ ವಿಚಾರಿಸಿದಾಗ, ಅವುಗಳೆಲ್ಲ ಬೇರೆ ಊರಿಗೆ ಕೆಲಸ, ಕಾರ್ಯದ ನಿಮಿತ್ತ ಹೋಗುವವರು ನಿಲ್ಲಿಸಿ ತೆರಳಿರುವ ವಾಹನಗಳೆಂಬ ವಿಚಾರ ಡಿಸಿ ಗಮನಕ್ಕೆ ಬಂದಿತು. ದೇವಸ್ಥಾನ ಸಮಿತಿ ಜೊತೆ ಮಾತನಾಡಿ, ಇಂತಹ ವಾಹನಗಳಿಗೆ ಮೈದಾನದ ಒಳಗಡೆಗೆ ನಿಲುಗಡೆ ಮಾಡಿ, ನಿರ್ದಿಷ್ಟ ಶುಲ್ಕ ಸಂಗ್ರಹಿಸಲು ಹೇಳಿ. ಇದರಿಂದ ಬಡವರ ಜೀವನಕ್ಕೂ ಆಧಾರವಾಗುತ್ತದೆ. ಹೈಸ್ಕೂಲ್ ಮೈದಾನದ ಎದುರಿನ ಟ್ರಾಫಿಕ್ ಸಮಸ್ಯೆಯೂ ನಿವಾರಣೆಯಾಗುತ್ತದೆ ಎಂದು ಡಿಸಿ ಗಂಗಾಧರ ಸ್ವಾಮಿ ತಾಕೀತು ಮಾಡಿದರು.- - -
-(ಫೋಟೋ ಬರಲಿವೆ).