ಸಾರಾಂಶ
ಕಾಯಕ ಪ್ರಜ್ಞೆ, ಭಕ್ತಿಗೆ ಹೆಸರುವಾಸಿಯಾದವರು ಕುಂಬಾರ ಸಮಾಜದವರು ಎಂದು ಶಾಸಕ ಡಾ.ಎಂ.ಚಂದ್ರಪ್ಪ ಹೇಳಿದರು.
ಹೊಳಲ್ಕೆರೆ: ಕಾಯಕ ಪ್ರಜ್ಞೆ, ಭಕ್ತಿಗೆ ಹೆಸರುವಾಸಿಯಾದವರು ಕುಂಬಾರ ಸಮಾಜದವರು ಎಂದು ಶಾಸಕ ಡಾ.ಎಂ.ಚಂದ್ರಪ್ಪ ಹೇಳಿದರು.
ತಾಲೂಕು ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಇಂತಹ ಮಹನೀಯರ ಜಯಂತಿ ಸರ್ಕಾರದಿಂದ ಆಚರಿಸುತ್ತಿರುವುದು ಅರ್ಥಪೂರ್ಣ. ಸರ್ವಜ್ಞನ ಒಂದೊಂದು ವಚನ ಕೂಡ ಸಮಾಜಕ್ಕೆ ಬೆಳಕು ಚೆಲ್ಲುವಂತಿದೆ. ನಮ್ಮ ನಾಡಿಗಷ್ಟೆ ಅಲ್ಲ. ಇಡಿ ದೇಶಕ್ಕೆ ಸರ್ವಜ್ಞ ಹೆಸರುವಾಸಿ. ಕರ್ನಾಟಕದಲ್ಲಿ ತಿರುವಳ್ಳವರ್ ಪ್ರತಿಮೆಯನ್ನು ನಿರ್ಮಿಸುವಂತೆ ತಮಿಳುನಾಡು ತಿಳಿಸಿದಾಗ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸರ್ವಜ್ಞನ ಪ್ರತಿಮೆ ತಮಿಳುನಾಡಿನಲ್ಲಿ ಪ್ರತಿಷ್ಠಾಪಿಸುವಂತೆ ಹೇಳಿದ್ದರು. ಅದರಂತೆ ಅಲ್ಲಿ ಬೃಹತ್ ಪ್ರತಿಮೆ ನಿರ್ಮಾಣವಾಗಿದೆ ಎಂದು ನೆನಪಿಸಿಕೊಂಡರು.ಮಾನವೀಯತೆ, ಮನುಷ್ಯತ್ವಕ್ಕೆ ಹೆಸರುವಾಸಿಯಾಗಿರುವ ಕುಂಬಾರ ಸಮಾಜ ಯಾರಿಗೂ ಅನ್ಯಾಯ, ಕೆಟ್ಟದ್ದು ಮಾಡುವುದಿಲ್ಲ. ಚುನಾವಣೆಯಲ್ಲಿ ನನಗೆ ಎಲ್ಲಾ ರೀತಿ ಸಹಕಾರ ನೀಡಿದ್ದೀರಿ. ನಿಮ್ಮ ಋಣ ನನ್ನ ಮೇಲಿದೆ. ಸಮುದಾಯ ಭವನ ನಿರ್ಮಾಣಕ್ಕೆ 20 ಲಕ್ಷ ರು. ಕೇಳಿದ್ದೀರಿ. ಇಷ್ಟು ಹಣ ಸಾಕಾಗುವುದಿಲ್ಲ. 50 ಲಕ್ಷ ರು. ಮಂಜೂರು ಮಾಡಿಸುತ್ತೇನೆ. ವಿಶಾಲವಾದ ಸಮುದಾಯ ಭವನ ಹಾಗೂ ವಾಣಿಜ್ಯ ಮಳಿಗೆ ನಿರ್ಮಾಣ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಕುಂಬಾರ ಜನಾಂಗದವರು ವಾಸಿಸುತ್ತಿದ್ದ ಕರಿ ಹಂಚಿನ ಮನೆಗಳನ್ನು ಕೆಡವಿ 120 ಮನೆ ಕಟ್ಟಿಸಿಕೊಟ್ಟಿದ್ದೇನೆ. ಗಂಗಾ ಕಲ್ಯಾಣ ಯೋಜನೆಯಡಿ ನಿಮ್ಮ ಜಮೀನುಗಳಲ್ಲಿ ಕೊಳವೆಬಾವಿ ಕೊರೆಸಿ ಪಂಪ್, ಮೋಟಾರ್, ಟಿ.ಸಿ. ಹಾಕಿಸಿಕೊಡುತ್ತೇನೆ ಎಂದೂ ಅವರು ಈ ಸಂದರ್ಭದಲ್ಲಿ ಆಶ್ವಾಸನೆ ನೀಡಿದರು.ಕುಂಬಾರ ಸಮಾಜದ ಅಧ್ಯಕ್ಷ ರುದ್ರಪ್ಪ, ತಹಸೀಲ್ದಾರ್ ಬೀಬಿ ಫಾತಿಮ, ತಾಪಂ ಕಾರ್ಯನಿರ್ವಹಣಾಧಿಕಾರಿ ಶಿವಪ್ರಕಾಶ್, ಪುರುಸಭೆ ಸದಸ್ಯರಾದ ಮುರುಗೇಶ್, ನಾಗರತ್ನ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಲೋಕೇಶ್, ಡಿ.ಸಿ.ಮೋಹನ್, ಕುಂಬಾರ ಸಮಾಜದ ಮುಖಂಡ ವೇದಮೂರ್ತಿ, ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.