ಅಧಿಕಾರ, ರಾಜಕಾರಣ ಶಾಶ್ವತವಲ್ಲ

| Published : Dec 20 2023, 01:15 AM IST

ಸಾರಾಂಶ

ನಾನು ನಮ್ಮ ತಂದೆಯವರ ಕಾಲದಿಂದಲೂ ಅನೇಕ ಮುಖ್ಯಮಂತ್ರಿಗಳನ್ನು ನೋಡಿದ್ದೇನೆ. ಅನೇಕ ಮುಖ್ಯಮಂತ್ರಿಗಳೊಂದಿಗೆ ಕೆಲಸ ಮಾಡಿದ್ದೇನೆ. ಆ ಅನುಭವದಲ್ಲಿ ಹೇಳುವುದಾದರೆ, ಅಧಿಕಾರ, ರಾಜಕಾರಣ ಶಾಶ್ವತವಲ್ಲ. ಅಂತವರು ಜನರ ಮನಸ್ಸಿನಲ್ಲಿ ಉಳಿಯುವುದಿಲ್ಲ. ಹಾಗಾಗಿ ನಾನು ಜನಸಾಮಾನ್ಯರ ರಾಜಕಾರಣ ಮಾಡಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ, ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು.

ಕನ್ನಡಪ್ರಭ ವಾರ್ತೆ ಶಿಗ್ಗಾಂವಿ

ನಾನು ನಮ್ಮ ತಂದೆಯವರ ಕಾಲದಿಂದಲೂ ಅನೇಕ ಮುಖ್ಯಮಂತ್ರಿಗಳನ್ನು ನೋಡಿದ್ದೇನೆ. ಅನೇಕ ಮುಖ್ಯಮಂತ್ರಿಗಳೊಂದಿಗೆ ಕೆಲಸ ಮಾಡಿದ್ದೇನೆ. ಆ ಅನುಭವದಲ್ಲಿ ಹೇಳುವುದಾದರೆ, ಅಧಿಕಾರ, ರಾಜಕಾರಣ ಶಾಶ್ವತವಲ್ಲ. ಅಂತವರು ಜನರ ಮನಸ್ಸಿನಲ್ಲಿ ಉಳಿಯುವುದಿಲ್ಲ. ಹಾಗಾಗಿ ನಾನು ಜನಸಾಮಾನ್ಯರ ರಾಜಕಾರಣ ಮಾಡಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ, ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು.

ಹೃದಯ ಶಸ್ತ್ರಚಿಕಿತ್ಸೆಯ ಎರಡುವರೆ ತಿಂಗಳ ನಂತರ ಕ್ಷೇತ್ರಕ್ಕೆ ಮೊದಲ ಬಾರಿ ಭೇಟಿ ನೀಡಿದ ಅವರು, ಪಟ್ಟಣದ ಹೊರವಲಯದ ಸವಣೂರ ರಸ್ತೆಯಲ್ಲಿರುವ ತಮ್ಮ ಕಚೇರಿಯಲ್ಲಿ ನಡೆದ ಸಾರ್ವಜನಿಕರ ಅಹವಾಲು ಸ್ವೀಕಾರ ಸಭೆಯಲ್ಲಿ ಅವರು ಮಾತನಾಡಿದರು.

ಎರಡುವರೆ ತಿಂಗಳ ಹಿಂದೆ ಹೃದಯದ ಶಸ್ತ್ರಚಿಕಿತ್ಸೆ ಆಗಿದೆ. ಮಂಡಿ ನೋವಿನ ಸಮಸ್ಯೆಯಿಂದ ಆಪರೇಷನ್ ಮಾಡಿಸಿಬೇಕಿತ್ತು. ಆದರೆ ಮೊದಲು ಹೃದಯ ಚೆಕ್ ಮಾಡಿದಾಗ ಸ್ವಲ್ಪ ಸಮಸ್ಯೆಯಾಗಿದ್ದು ಕಂಡುಬಂದಿದ್ದರಿಂದ ಹೃದಯಕ್ಕೆ ತೊಂದರೆ ಆಗದಂತೆ ಸ್ಟಂಟ್ ಅಳವಡಿಸಲಾಗಿದೆ. ನನ್ನ ಹೃದಯ ಚಿಕಿತ್ಸೆ ಮಾಡಿದ ವೈದ್ಯರು ಹೆಚ್ಚಿಗೆ ಮಾತನಾಡದಂತೆ ಸೂಚಿಸಿದ್ದರು. ನೀವೇ ನನ್ನ ಹೃದಯವಾಗಿರುವುದರಿಂದ ಭಾವನೆಗಳು ತುಂಬಿ ಬಂದು ಮಾತನಾಡುವಂತೆ ಮಾಡುತ್ತಿವೆ ಎಂದು ತಿಳಿಸಿದರು.

ಆಪರೇಷನ್ ಯಶಸ್ವಿಯಾಗಿದ್ದು, ಶಿಗ್ಗಾಂವಿ ಜನಸ್ತೋಮದ ಆಶೀರ್ವಾದದಿಂದ ಬದುಕಿ ಬಂದಿದ್ದೇನೆ. ಎಲ್ಲಾದರೂ ಹೋದಾಗ ಹೃದಯಾಘಾತ ಆಗಿದ್ದರೆ, ಇರುತ್ತಿದ್ದೇನೋ ಅಥವಾ ಮೇಲೆ ಹೋಗುತ್ತಿದ್ದೇನೋ ಎಂಬುದು ಗೊತ್ತಿಲ್ಲ ಎಂದು ಭಾವುಕರಾದರು.

ನಮ್ಮ ಕ್ಷೇತ್ರದ ಜನರ ಜೊತೆಗೆ ಅನ್ಯೋನ್ಯ ಸಂಬಂಧ ಇದೆ. ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನ ಮಾಡಿದ್ದೇನೆ. ಕ್ಷೇತ್ರದಲ್ಲಿ ಒಂದೇ ಕುಟುಂಬ ಸದಸ್ಯರಾಗಿ ಜೀವನ ಮಾಡುತ್ತಿದ್ದೇವೆ. ಇದು ಕೊನೆಯ ಉಸಿರು ಇರುವವರಿಗೆ ಹೀಗೆ ಮುಂದುವರೆಯಲಿದೆ. ಮುಂದಿನ ಜನ್ಮ ಎನ್ನುವುದು ಏನಾದರೂ ಇದ್ದರೆ ಶಿಗ್ಗಾಂವಿ ಮತ್ತು ಸವಣೂರು ಮಣ್ಣಿನಲ್ಲಿ ಹುಟ್ಟುವ ಭಾಗ್ಯ ನೀಡು ಎಂದು ಭಗವಂತನಲ್ಲಿ ಪ್ರಾರ್ಥನೆ ಮಾಡುತ್ತೇನೆ. ಈ ಜನರ ನಡುವೆ ಬೆರೆತು ಬದುಕಿನ ಕಟ್ಟಿಕೊಳ್ಳುವ ಅವಕಾಶ ಮಾಡಲಿ. ನಾವು ಮಾತನಾಡಬಾರದು, ನಮ್ಮ ಕೆಲಸಗಳು ಮಾತನಾಡಬೇಕು ಎಂದರು.

ಈ ಸಂದರ್ಭದಲ್ಲಿ ಪಟ್ಟಣದ ಹಿರಿಯರಾದ ಸಣ್ಣಪ್ಪ ಬುಳ್ಳಕ್ಕನವರ, ಭರತ ಸೇವಾ ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ, ಪುರಸಭೆಯ ಮಾಜಿ ಅಧ್ಯಕ್ಷ ಶಿವಪ್ರಸಾದ ಸುರಗಿಮಠ ಸೇರಿದಂತೆ ಹಲವಾರು ಗಣ್ಯರು ಇದ್ದರು.

ಬಿಜೆಪಿ ತಾಲೂಕಾ ಅಧ್ಯಕ್ಷ ಶಿವಾನಂದ ಮ್ಯಾಗೇರಿ ಸ್ವಾಗತಿಸಿ, ನಿರೂಪಿಸಿದರು.

ಫಲಾನುಭವಿಗಳಿಗೆ ಸಾಮಗ್ರಿ ವಿತರಣೆ:

ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ಅಂಗವಿಕಲ ಫಲಾನುಭವಿಗಳಿಗೆ ೨೪ ಯಂತ್ರ ಚಾಲಿತ ದ್ವಿಚಕ್ರ ವಾಹನ, ಟಾಕಿಂಗ್ ಲ್ಯಾಪ್ ಟಾಪ್, ಹೊಲಿಗೆ ಯಂತ್ರಗಳನ್ನು ಫಲಾನುಭವಿಗಳಿಗೆ ವಿತರಿಸಲಾಯಿತು.