ಮಹದೇವಪ್ಪ ಎಂ. ಸ್ವಾಮಿ
ಶಿರಹಟ್ಟಿ: ₹೧ ಲಕ್ಷ ವಿದ್ಯುತ್ ಬಾಕಿ ಬಿಲ್ ಪಾವತಿಸದ ಹಿನ್ನೆಲೆ ಹೆಸ್ಕಾಂ ಪಟ್ಟಣದ ಪ್ರವಾಸಿ ಮಂದಿರದ ವಿದ್ಯುತ್ ಸಂಪರ್ಕವನ್ನು ಬುಧವಾರ ಕಡಿತಗೊಳಿಸಿದೆ.ವಿದ್ಯುತ್ ಸಂಪರ್ಕ ಕಡಿತದಿಂದಾಗಿ ಪ್ರವಾಸಿ ಮಂದಿರ ನಿರ್ವಹಣಾ ಸಿಬ್ಬಂದಿ ಕುಟುಂಬ ಕತ್ತಲಲ್ಲೇ ಕಾಲ ಕಳೆಯುವಂತಾಗಿದೆ. ಅಲ್ಲದೇ ಪ್ರವಾಸಿ ಮಂದಿರದಲ್ಲಿ ತಂಗಲು ಬರುವ ಜನರು ಇಲ್ಲಿ ವಿದ್ಯುತ್ ಸಂಪರ್ಕ ಇಲ್ಲದ ಮಾಹಿತಿ ತಿಳಿದು ಖಾಸಗಿ ವಸತಿಗೃಹಗಳತ್ತ ಮುಖ ಮಾಡುತ್ತಿದ್ದಾರೆ. ಸುಮಾರು ೭ ತಿಂಗಳಿನಿಂದ ವಿದ್ಯುತ್ ಬಿಲ್ ಪಾವತಿಸಿಲ್ಲ. ಈ ಬಗ್ಗೆ ಹೆಸ್ಕಾಂ ವತಿಯಿಂದ ಸುಮಾರು ಬಾರಿ ನೋಟಿಸ್ ನೀಡಿದರೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸ್ಪಂದಿಸಿಲ್ಲ.2025ರ ಆಗಸ್ಟ್‌ದಿಂದ ಇಲ್ಲಿಯವರೆಗೂ ಪಟ್ಟಣದ ಪ್ರವಾಸಿ ಮಂದಿರದ ವಿದ್ಯುತ್ ಬಿಲ್ ಪಾವತಿಸದೇ ಇರುವ ಕಾರಣ ಸಂಪರ್ಕ ಕಡಿತಗೊಳಿಸಿದ್ದು, ಸಧ್ಯ ಪ್ರವಾಸಿ ಮಂದಿರ ವಿದ್ಯುತ್ ಇಲ್ಲದೇ ಕತ್ತಲೆ ಕೋಣೆಯಾಗಿದೆ. ಲಕ್ಷಾಂತರ ರು. ಹಣ ಖರ್ಚು ಮಾಡಿ ಇತ್ತೀಚೆಗೆ ಪ್ರವಾಸಿ ಮಂದಿರ ಪ್ರವಾಸಿ ಮಂದಿರ ದುರಸ್ತಿಗೊಳಿಸಿದ್ದು, ಸಧ್ಯ ವಿದ್ಯುತ್ ಇಲ್ಲದೇ ಹಾಳು ಕೊಂಪೆಯಾಗಿ ಕಾಣುತ್ತಿದೆ.
ವಿದ್ಯುತ್ ಬಾಕಿ ಬಿಲ್‌ಗಳನ್ನು ನಿರ್ದಿಷ್ಟ ದಿನಾಂಕದೊಳಗೆ ಪಾವತಿಸಬೇಕೆಂಬ ನಿಯಮವಿದ್ದರೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಇದನ್ನು ಪಾಲಿಸಿಲ್ಲ. ರಿಮೈಂಡರ್, ನೋಟಿಸ್ ನೀಡಿದ ನಂತರವೂ ಪಾವತಿ ಮಾಡಿಲ್ಲ. ವಿಶ್ರಾಂತಿಗೆಂದು ಪ್ರವಾಸಿಮಂದಿರಕ್ಕೆ ಬರುವ ಗಣ್ಯ ವ್ಯಕ್ತಿಗಳು, ರಾಜಕೀಯ ಮುಖಂಡರು, ಅಧಿಕಾರಿಗಳ ನಡೆ ಬಗ್ಗೆ ಹಿಡಿಶಾಪ ಹಾಕುತ್ತಾ ಪ್ರವಾಸಿ ಮಂದಿರದ ಸ್ಥಿತಿ ನೋಡಿ ಮರಳಿ ಹೋಗುತ್ತಿದ್ದಾರೆ. ಪ್ರವಾಸಿ ಮಂದಿರದ ಸಧ್ಯ ೭ ತಿಂಗಳ ಬಿಲ್ ಪಾವತಿಸದೇ ಇರುವುದರಿಂದ ಕನಿಷ್ಠ ₹೧ ಲಕ್ಷ ಬಾಕಿ ಉಳಿದಿರುವ ಬಗ್ಗೆ ಮಾಹಿತಿ ಇದೆ. ಹೆಸ್ಕಾಂ ಇಲಾಖೆ ಮಾಹಿತಿ ಪ್ರಕಾರ ಶೇ. ೧ರಿಂದ ೧.೫ರ ವರೆಗೆ ಬಾಕಿ ಮೊತ್ತದ ಮೇಲೆ ಬಡ್ಡಿ ವಿಧಿಸಲಾಗುತ್ತಿದ್ದು, ಎಷ್ಟು ದಿನ ತಡವಾಗುತ್ತದೆಯೋ ಅದಕ್ಕೆ ಅನುಗುಣವಾಗಿ ಬಡ್ಡಿ ದರ ಕೂಡ ಹೆಚ್ಚಾಗುತ್ತಿದೆ. ಇದನ್ನು ಅರಿಯದ ಲೋಕೋಪಯೋಗಿ ಇಲಾಖೆ ಎಇಇ ಹಾಗೂ ಸಿಬ್ಬಂದಿಯವರು ಬೇಜವಾಬ್ದಾರಿ ತೋರಿದ್ದು, ಸಧ್ಯ ಪ್ರವಾಸಿ ಮಂದಿರಕ್ಕೆ ಬರುವ ಗಣ್ಯವ್ಯಕ್ತಿಗಳಿಗೆ ಇದು ನುಂಗಲಾರದ ತುತ್ತಾಗಿ ಪರಿಣಮಿಸಿದೆ.ಪ್ರವಾಸಿ ಮಂದಿರಕ್ಕೆ ಬರುವ ರಾಜಕೀಯ ಧುರೀಣರು ಸರ್ಕಾರಿ ಕಟ್ಟಡದ ವಿದ್ಯುತ್ ಬಿಲ್ ಪಾವತಿಸದೇ ಇರುವ ರಾಜ್ಯ ಸರ್ಕಾರ ಸಂಪೂರ್ಣ ದಿವಾಳಿಯಾಗಿದೆ ಎಂದು ಕಿಡಿಕಾರುತ್ತಿದ್ದಾರೆ.ಕಡಿತ ಅನಿವಾರ್ಯ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕಳೆದ ೨೦೨೫ರ ಆಗಸ್ಟ್‌ದಿಂದ ₹೧ ಲಕ್ಷಕ್ಕೂ ಹೆಚ್ಚು ಬಾಕಿ ಇರುವ ವಿದ್ಯುತ್ ಬಿಲ್ ಪಾವತಿಸದೇ ಇರುವುದರಿಂದ ಹೆಸ್ಕಾಂ ಇಲಾಖೆ ಸಿಬ್ಬಂದಿ ಬುಧವಾರ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ. ೨- ೩ ಬಾರಿ ನೋಟಿಸ್ ನೀಡಿದರೂ ಬಿಲ್ ಪಾವತಿಸದೇ ಇರುವುದರಿಂದ ಕಡಿತಗೊಳಿಸಿವುದು ಅನಿವಾರ್ಯವಾಗಿದೆ ಎಂದು ಶಿರಹಟ್ಟಿ ಹೆಸ್ಕಾಂ ಶಾಖಾಧಿಕಾರಿ ಬಸವರಾಜ ಬಿ. ತಿಳಿಸಿದರು.