ಸಾರಾಂಶ
ಕಾಂಗ್ರೆಸ್ ಸರ್ಕಾರದಿಂದ ಕತ್ತಲೆ ಭಾಗ್ಯ: ಸಂಸದ ಡಾ.ಸಿದ್ದೇಶ್ವರ, ಕಾಂಗ್ರೆಸ್ ನಾಯಕರಿಗೆ ರಾಜ್ಯವೇ ಎಟಿಎಂ: ಎನ್.ರವಿಕುಮಾರ
ಕನ್ನಡಪ್ರಭ ವಾರ್ತೆ ದಾವಣಗೆರೆರಾಜ್ಯದಲ್ಲಿ ನಗರ, ಗ್ರಾಮೀಣ ಪ್ರದೇಶಗಳಿಗೆ ಸಮರ್ಪಕ ವಿದ್ಯುತ್ ಪೂರೈಸದೇ, ಕತ್ತಲೆ ಭಾಗ್ಯವನ್ನು ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದೆಯೆಂದು ಆರೋಪಿಸಿ ಬಿಜೆಪಿ ಜಿಲ್ಲಾ ಘಟಕದಿಂದ ನಗರದ ಬೆಸ್ಕಾಂ ಅಧೀಕ್ಷಕ ಅಭಿಯಂತರರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಯಿತು.
ನಗರದ ಕೆಬಿ ಬಡಾವಣೆಯ ಬಿಜೆಪಿ ಕಚೇರಿಯಿಂದ ಪಕ್ಷದ ಜಿಲ್ಲಾ ನಾಯಕರು, ಮುಖಂಡರು, ಪದಾಧಿಕಾರಿಗಳ ನೇತೃತ್ವದಲ್ಲಿ ರಾಜ್ಯ ಸರ್ಕಾರದ ಆಡಳಿತ ವೈಫಲ್ಯ, ಸಮರ್ಪಕ ವಿದ್ಯುತ್ ಪೂರೈಸದ ಸರ್ಕಾರದ ವಿರುದ್ಧ ಘೋಷಣೆಗಳ ಕೂಗಿ ಇಲ್ಲಿನ ವಿದ್ಯಾರ್ಥಿ ಭವನ ಸಮೀಪದ ಬೆಸ್ಕಾಂ ಕಚೇರಿಗೆ ಪ್ರತಿಭಟನಾಕಾರರು ಮುತ್ತಿಗೆ ಹಾಕಿದರು.ಭದ್ರಾ ನೀರು ಬಿಡದೇ ರೈತರಿಗೆ ನಷ್ಟ:
ಈ ವೇಳೆ ಮಾತನಾಡಿದ ಸಂಸದ ಡಾ.ಜಿ.ಎಂ.ಸಿದ್ದೇಶ್ವರ, ರಾಜ್ಯದ ರೈತರು, ಜನರಿಗೆ ಸಮರ್ಪಕ ವಿದ್ಯುತ್ ಪೂರೈಸುವಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ. 6ನೇ ಭಾಗ್ಯವಾಗಿ ಕತ್ತಲೆ ಭಾಗ್ಯವನ್ನು ಜನರಿಗೆ ನೀಡುತ್ತಿದೆ. ಭದ್ರಾ ನಾಲೆಯಲ್ಲಿ ನೀರು ನಿಲ್ಲಿಸುವುದಿಲ್ಲ. ಮುಂಚಿನ 100 ದಿನಗಳ ಭರವಸೆಯಂತೆ ನೀರು ಬಿಡುವುದಾಗಿ ಡಿಸಿಎಂ ಡಿ.ಕೆ.ಶಿವಕುಮಾರ, ಶಿವಮೊಗ್ಗ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಭರವಸೆ ನೀಡಿದ್ದರು. ಆದರೆ, ಸರ್ಕಾರದಿಂದ ಯಾವುದೇ ಆದೇಶ ಬಂದಿಲ್ಲ. ಇದರ ಮರ್ಮ ಏನೆಂಬುದೇ ಗೊತ್ತಾಗುತ್ತಿಲ್ಲ. ಭದ್ರಾ ನಾಲೆಗಳಿಗೆ ನೀರು ಕೊಡದಿದ್ದರೆ ರೈತರಿಗೆ ಆಗುವ ನಷ್ಟ ಸರ್ಕಾರವೇ ಭರಿಸಬೇಕು ಎಂದು ಎಚ್ಚರಿಸಿದರು.ಕಾಂಗ್ರೆಸ್ 5 ಗ್ಯಾರಂಟಿ ಭರವಸೆ ನೀಡಿ, ಅಧಿಕಾರಕ್ಕೆ ಬಂದಿದೆ. ಆದರೆ, ಯಾರಿಗೂ ಗ್ಯಾರಂಟಿ ಯೋಜನೆ ತಲುಪಿಸುತ್ತಿಲ್ಲ. ಸರ್ಕಾರದ ಬೊಕ್ಕಸವೇ ಖಾಲಿಯಾಗಿದೆ. ಇದು ಶೇ.80 ಕಮಿಷನ್‌ನ ಭ್ರಷ್ಟ ಸರ್ಕಾರ. ಸರಿಯಾದ ಆಡಳಿತ ನೀಡುವ ಕೆಲಸ ಮಾಡಲಿಲ್ಲವೆಂದರೆ ರಾಜೀನಾಮೆ ಕೊಟ್ಟು, ಅಧಿಕಾರದಿಂದ ಕೆಳಗಿಳಿಯಲಿ ಎಂದು ತಾಕೀತು ಮಾಡಿದರು.
ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ ಮಾತನಾಡಿ, ಒಬ್ಬ ಕಳ್ಳ, ಮತ್ತೊಬ್ಬ ಮಳ್ಳ ಎಂಬಂತಿದೆ ಕಾಂಗ್ರೆಸ್ ಸರ್ಕಾರ. ಅವ್ಯಾಹತ ಕಮಿಷನ್ ದಂಧೆ ನಡೆದಿದ್ದು, ಇತ್ತೀಚೆಗೆ ನಡೆದ ಐಟಿ ದಾಳಿಗಳೇ ಸಾಕ್ಷಿ. ರಾಜ್ಯದ ಜನರಿಗೆ ಕತ್ತಲೆ ಭಾಗ್ಯ ಕರುಣಿಸಿದ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ ಸೇರಿ ಸಚಿವರು, ಶಾಸಕರಿಗೆ ಮಾತ್ರ 24 ಗಂಟೆ ವಿದ್ಯುತ್ ಸಿಗುತ್ತದೆ. ಎಟಿಎಂ ಯಂತ್ರದಂತೆ ದೆಹಲಿ ನಾಯಕರಿಗೆ ಹಣ ವಸೂಲಿ ಮಾಡಬೇಕೆಂಬ ಕಾರಣಕ್ಕಾಗಿ ಕಾಂಗ್ರೆಸ್‌ನ ಸಚಿವರು, ಶಾಸಕರಿಗೆ 24 ಗಂಟೆ ಕರೆ ನೀಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.ಕರ್ನಾಟಕದಿಂದ ಸಂಗ್ರಹವಾದ ಹಣವನ್ನು ಪಂಚ ರಾಜ್ಯಗಳ ಚುನಾವಣೆಗೆ ಫಂಡಿಂಗ್ ಮಾಡಲಾಗುತ್ತಿದೆ. ಗ್ಯಾರಂಟಿ ಯೋಜನೆಯಲ್ಲಿ 1.28 ಕೋಟಿ ಮಹಿಳೆಯರಿಗೆ ಬರಬೇಕಾದ ಹಣ ಕೇವಲ 50 ಲಕ್ಷ ಜನರಿಗೆ ಮಾತ್ರ ನೀಡಲಾಗುತ್ತಿದೆ. ಯೋಜನೆ ಹಣ ಲೂಟಿ ಮಾಡಲಾಗುತ್ತಿದೆ. ಈ ಸರ್ಕಾರದ ದಂಧೆಯ ಹಣ ಅಂಬಿಕಾಪತಿ ಮನೆಯಲ್ಲಿ ಸಿಕ್ಕಿದೆ. ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ ರಾಜೀನಾಮೆ ನೀಡಲಿ ಎಂದು ತಾಕೀತು ಮಾಡಿದರು.
ಹರಿಹರ ಶಾಸಕ ಬಿ.ಪಿ.ಹರೀಶ ಮಾತನಾಡಿ, 5 ಗ್ಯಾರಂಟಿ ಭರವಸೆ ನೀಡಿ, ಇಡೀ ರಾಜ್ಯವನ್ನು ಕತ್ತಲೆ ಕೂಪಕ್ಕೆ ಕಾಂಗ್ರೆಸ್ ಸರ್ಕಾರ ತಳ್ಳಿದೆ. ರೈತರಿಗೆ ಅನ್ಯಾಯವಾಗುತ್ತಿದ್ದರೂ ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ. ವಿದ್ಯುತ್ ಇಲ್ಲದೇ ರೈತರು ಪರದಾಡುವಂತಾಗಿದೆ. ಯಾವುದೇ ಗ್ಯಾರಂಟಿ ಸಮರ್ಪಕವಾಗಿ ರಾಜ್ಯದ ಮಹಿಳೆಯರಿಗೆ ತಲುಪಿಲ್ಲ. ಇಂತಹ ಅನ್ಯಾಯದ ಸರ್ಕಾರ ಕಿತ್ತೊಗೆಯುವವರೆಗೂ ನಾವ್ಯಾರು ವಿಶ್ರಮಿಸಬಾರದು ಎಂದು ಮನವಿ ಮಾಡಿದರು.ಬೆಸ್ಕಾಂ ಅಧೀಕ್ಷಕ ಅಭಿಯಂತರ ದಿವಾಕರ್ ಮಾತನಾಡಿ, ಮಂಗಳವಾರದಿಂದ 5 ತಾಸು ವಿದ್ಯುತ್ ಪೂರೈಸಲು ಸರ್ಕಾರದಿಂದ ಆದೇಶ ಬಂದಿದ್ದು, ಅದರಂತೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಮಾಜಿ ಸಚಿವ ಎಸ್.ಎ.ರವೀಂದ್ರನಾಥ, ವಿಪ ಮಾಜಿ ಮುಖ್ಯ ಸಚೇತಕ ಡಾ.ಎ.ಎಚ್.ಶಿವಯೋಗಿಸ್ವಾಮಿ, ಮಾಜಿ ಶಾಸಕರಾದ ಎಸ್.ವಿ.ರಾಮಚಂದ್ರ, ಪ್ರೊ.ಎನ್.ಲಿಂಗಣ್ಣ, ಯಶವಂತರಾವ್ ಜಾಧವ್, ಎಸ್.ಎಂ.ವೀರೇಶ ಹನಗವಾಡಿ, ಬಿ.ಎಸ್.ಜಗದೀಶ, ಟಿ.ಶ್ರೀನಿವಾಸ ದಾಸಕರಿಯಪ್ಪ, ನಾಗರಾಜ ಲೋಕಿಕೆರೆ, ಎ.ವೈ.ಪ್ರಕಾಶ, ರಾಜನಹಳ್ಳಿ ಶಿವಕುಮಾರ, ಎನ್.ರಾಜಶೇಖರ, ಪಿ.ಸಿ.ಶ್ರೀನಿವಾಸ ಭಟ್, ಕೊಂಡಜ್ಜಿ ಜಯಪ್ರಕಾಶ, ಎಸ್.ಟಿ.ವೀರೇಶ, ಬಾತಿ ವೀರೇಶ ದೊಗ್ಗಳ್ಳಿ, ಬಿ.ಜಿ.ಅಜಯಕುಮಾರ, ಯಶೋಧಾ ಯೋಗೇಶ, ಬಿ.ಎಂ.ಸತೀಶ ಕೊಳೇನಹಳ್ಳಿ, ಜಿ.ಎಸ್.ಶ್ಯಾಮ, ಕೆ.ಎಂ.ವೀರೇಶ, ಶಿವನಗೌಡ ಪಾಟೀಲ್, ಟಿಂಕರ್ ಮಂಜಣ್ಣ, ಮಂಜುಳಾ ಮಹೇಶ, ರೇಖಾ ಸುರೇಶ, ಗಾಯತ್ರಿಬಾಯಿ, ಶಾಂತಾ ದೊರೆ, ಗುರುನಾಥ, ಎಚ್.ಎನ್.ಶಿವಕುಮಾರ, ಶಿವರಾಜ ಪಾಟೀಲ, ಪ್ರಭು ಕಲ್ಬುರ್ಗಿ, ಆರ್.ಶಿವಾನಂದ, ಕೆ.ಪ್ರಸನ್ನ, ಪಿ.ಎಸ್.ಬಸವರಾಜ, ಶಂಕರಗೌಡ ಬಿರಾದಾರ ಇತರರಿದ್ದರು.........................
ಸಿದ್ದರಾಮಯ್ಯ, ಶಿವಕುಮಾರಂತಹ ೨೦ ಮಂದಿ ಬಂದರೂ ನರೇಂದ್ರ ಮೋದಿಯವರ ಅಲ್ಲಾಡಿಸಲು ಸಾಧ್ಯವಿಲ್ಲ. ಇಡೀ ವಿಶ್ವವೇ ಮೋದಿಯವರ ಕೊಂಡಾಡುತ್ತಿದ್ದರೆ, ಕಾಂಗ್ರೆಸ್ ಮಾತ್ರ ಮೋದಿಯ ವಿರೋಧಿಸುತ್ತಿದೆ. ಇದು ಕಾಂಗ್ರೆಸ್ಸಿಗರ ಮನಸ್ಥಿತಿ.ಎನ್.ರವಿಕುಮಾರ, ವಿಧಾನ ಪರಿಷತ್ ಸದಸ್ಯ
........................ಪ್ರತಿ ಗ್ಯಾರಂಟಿ ಯೋಜನೆಯಲ್ಲೂ ಕಾಂಗ್ರೆಸ್ ಸರ್ಕಾರ ಕಮಿಷನ್ ಕೇಳುತ್ತಿದೆ. ಎಲ್ಲಿ ನೋಡಿದರಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಪಂಚರಾಜ್ಯಗಳ ಚುನಾವಣೆ ಘೋಷಿಸಿದ್ದು, ರಾಜ್ಯದಿಂದ ಹಣ ಪೂರೈಕೆಯಾಗುತ್ತಿದೆ. ಬೆಸ್ಕಾಂ ಅಧಿಕಾರಿಗಳು ಸಮರ್ಪಕವಾಗಿ ವಿದ್ಯುತ್ ಪೂರೈಸದಿದ್ದರೆ, ಬೆಸ್ಕಾಂ ಕಚೇರಿ ಎದುರು ನಿರಂತರ ಹೋರಾಟ ನಡೆಸಬೇಕಾದೀತು.
ಎಸ್.ಎಂ.ವೀರೇಶ ಹನಗವಾಡಿ, ಬಿಜೆಪಿ ಜಿಲ್ಲಾಧ್ಯಕ್ಷ .............