ಸಾರಾಂಶ
ತೀರ್ಥಹಳ್ಳಿ: ಮುಖ್ಯ ರಸ್ತೆ, ವಾಣಿಜ್ಯ ಕೇಂದ್ರ, ಜನಸಂದಣಿ ಪ್ರದೇಶಗಳನ್ನು ಒಳಗೊಂಡಂತೆ ಪೊಲೀಸ್ ವ್ಯವಸ್ಥೆಗೆ ಅಗತ್ಯವಾದ ಸಿಸಿಟಿವಿ ಅಳವಡಿಕೆಗೆ ಪಟ್ಟಣ ಪಂಚಾಯಿತಿ ಸಿದ್ಧತೆ ನಡೆಸಿದೆ. ಅದಕ್ಕಾಗಿ ಈಗಾಗಲೇ 10 ಲಕ್ಷ ರು. ಮೀಸಲಿಟ್ಟಿದ್ದು ದಾನಿಗಳ ಸಹಾಯ ಕೇಳಲಾಗುವುದು ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷ ಟಿ.ರಹಮತ್ ಉಲ್ಲಾ ಅಸಾದಿ ತಿಳಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದಾಜು 3 ಕೋಟಿ ರು. ಹೆಚ್ಚಿನ ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಸರ್ಕಾರದಿಂದ ಅನುಮತಿ ದೊರೆತಿದೆ. ನೀರಿನ ತೆರಿಗೆ ನಿಧಿಯಲ್ಲಿ 1.20 ಕೋಟಿ ರು., ಉದ್ಯಮ ನಿಧಿಯಿಂದ ₹80 ಲಕ್ಷ ರು. ಬಳಕೆಗೆ ಸರ್ಕಾರ ಅನುಮೋದನೆ ನೀಡಿದೆ. ಉಳಿದಂತೆ 4 ಲಕ್ಷ ರು. ಮೀನು ಮಾರುಕಟ್ಟೆ ಸ್ವಚ್ಛತೆ, 21 ಲಕ್ಷ ರು. ಶಾಂತವೇರಿ ಗೋಪಾಲಗೌಡ ರಂಗಮಂದಿರ, 19 ಲಕ್ಷ ರು. ಅಂಬೇಡ್ಕರ್ ಭವನದ ಮೇಲ್ಛಾವಣಿ ಕಾಮಗಾರಿಗಳು ನಡೆಯುತ್ತಿವೆ ಎಂದು ಮಾಹಿತಿ ನೀಡಿದರು.ಪೌರ ಕಾರ್ಮಿಕರಿಗೆ ವಿಮಾನದ ಅಧ್ಯಯನ ಪ್ರವಾಸಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುಮತಿ ದೊರೆತರೆ ಪೌರ ಕಾರ್ಮಿಕರನ್ನು ಪ್ರವಾಸಕ್ಕೆ ಕರೆದುಕೊಂಡು ಹೋದ ರಾಜ್ಯದ ಮೊದಲ ಸ್ಥಳೀಯ ಸಂಸ್ಥೆಯಾಗಿ ಗುರುತಾಗಲಿದೆ. ಜನಪ್ರತಿನಿಧಿಗಳಿಗೆ ಸಾಮಾನ್ಯವಾಗಿ ಅವಕಾಶ ಕಲ್ಪಿಸಲಾಗಿತ್ತು. ಪೌರ ಕಾರ್ಮಿಕರ ಪ್ರವಾಸ ಮೊದಲ ಪ್ರಯತ್ನ ಎಂದು ತಿಳಿಸಿದರು.ಪಟ್ಟಣ ಪಂಚಾಯಿತಿ ಕ್ಲೀನಿಕ್ ತೆರೆಯಲು ಸಿದ್ಧತೆ ನಡೆಯುತ್ತಿದೆ. ದಿನವೊಂದಕ್ಕೆ 30 ರೋಗಿಗಳಿಗೆ ಚಿಕಿತ್ಸೆಗೆ ಅವಕಾಶ ಕಲ್ಪಿಸಲಾಗುವುದು. ಹೊನಲು ಬೆಳಕಿನ ವಾಲಿಬಾಲ್ ಕೋರ್ಟ್ ನಿರ್ಮಾಣಕ್ಕೆ ಚಿಂತನೆ ನಡೆದಿದೆ. ದಸರಾ ಸಂಭ್ರಮಾಚರಣೆಯೊಳಗೆ ಮಿರ್ಜಾ ಇಸ್ಮಾಯಿಲ್ ನಿರ್ಮಿಸಿದ ಕುಶಾವತಿಯ ವಿಜಯ ಮಂಟಪ ನವೀಕರಣ ಆಗಲಿದೆ ಎಂದರು.ತುಂಗಾ ನದಿಯ ದಂಡೆಯ ಮೇಲೆ ಜೋಪಡಿಯೊಳಗೆ ವಾಸಿಸುವ 23 ಜನರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಲಾಗಿದೆ. ಅವರೆಲ್ಲರಿಗೂ ಹೊರಬೈಲಿನಲ್ಲಿ ನಿವೇಶನ ಹಂಚಿಕೆ ಮಾಡಲಾಗುತ್ತಿದೆ. ವಸತಿ, ಮನೆ ಇಲ್ಲದವರಿಗೆ ಆಶ್ರಯ ಯೋಜನೆಯಡಿ ನಿವೇಶನ ಹಂಚಿಕೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕಿತ್ತನಗದ್ದೆಯಲ್ಲಿ 15 ಎಕರೆ ಪ್ರದೇಶವನ್ನು ಆಶ್ರಯ ಯೋಜನೆಗೆ ಒದಗಿಸಲು ಕೋರಲಾಗಿದೆ. ವೈದ್ಯ ನಾರಾಯಣಸ್ವಾಮಿ ಹೆಸರಿನಲ್ಲಿ ಸಭಾಂಗಣ ತೆರೆಯಲಾಗಿದೆ ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷೆ ಗೀತಾರಮೇಶ್ ಇದ್ದರು.