ನಗರದಲ್ಲಿ ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ಸಾಗಿಸುವ ವಾಹನಗಳಿಂದ ರಸ್ತೆಗೆ ಬೀಳುವ ಮಣ್ಣು, ಸಿಮೆಂಟ್, ಧೂಳು ಸೇರಿದಂತೆ ವಿವಿಧ ಮಾದರಿಯ ಕಸವನ್ನು ಪರಿಣಾಮಕಾರಿಯಾಗಿ, ತ್ವರಿತವಾಗಿ ಸ್ವಚ್ಛಗೊಳಿಸಲು ಯಾಂತ್ರೀಕೃತ ಕಸ ಗುಡಿಸುವ ಯಂತ್ರಗಳ ಪ್ರಾಯೋಗಿಕ ಪರೀಕ್ಷೆ ನಗರದ ವಿವಿಧ ರಸ್ತೆಗಳಲ್ಲಿ ಭರದಿಂದ ಸಾಗಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರದಲ್ಲಿ ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ಸಾಗಿಸುವ ವಾಹನಗಳಿಂದ ರಸ್ತೆಗೆ ಬೀಳುವ ಮಣ್ಣು, ಸಿಮೆಂಟ್, ಧೂಳು ಸೇರಿದಂತೆ ವಿವಿಧ ಮಾದರಿಯ ಕಸವನ್ನು ಪರಿಣಾಮಕಾರಿಯಾಗಿ, ತ್ವರಿತವಾಗಿ ಸ್ವಚ್ಛಗೊಳಿಸಲು ಯಾಂತ್ರೀಕೃತ ಕಸ ಗುಡಿಸುವ ಯಂತ್ರಗಳ ಪ್ರಾಯೋಗಿಕ ಪರೀಕ್ಷೆ ನಗರದ ವಿವಿಧ ರಸ್ತೆಗಳಲ್ಲಿ ಭರದಿಂದ ಸಾಗಿದೆ.5 ಪಾಲಿಕೆಗಳ ವ್ಯಾಪ್ತಿಯಲ್ಲಿ ಕಸ ಗುಡಿಸುವ ಯಂತ್ರಗಳ ಖರೀದಿಗೆ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ನಗರಕ್ಕೆ ಸೂಕ್ತ ಎನಿಸುವ ವಾಹನಗಳ ಖರೀದಿಸಲು ವಿವಿಧ ಕಂಪನಿಗಳ ಯಂತ್ರಗಳ ಪರೀಕ್ಷಾರ್ಥ ಸ್ವಚ್ಛತಾ ಕಾರ್ಯಕ್ಷಮತೆಯನ್ನು ಅಧಿಕಾರಿಗಳ ತಂಡಗಳು ಪರಿಶೀಲಿಸುತ್ತಿವೆ.
ಪೂರ್ವ ಪಾಲಿಕೆ ವ್ಯಾಪ್ತಿಯಲ್ಲಿ ಮುಖ್ಯ ರಸ್ತೆ ಮತ್ತು ಉಪ ಮುಖ್ಯ ರಸ್ತೆಗಳನ್ನು ಸ್ವಚ್ಛಗೊಳಿಸಲು 5 ಕಸ ಗುಡಿಸುವ ಯಂತ್ರಗಳನ್ನು ಖರೀದಿಸಲು ಟೆಂಡರ್ ಅಂತಿಮಗೊಳಿಸಲಾಗಿದೆ. ಖರೀದಿ ಅನುಮೋದನೆಗಾಗಿ ಸರ್ಕಾರಕ್ಕೆ ಕಡತ ಕಳುಹಿಸಿಕೊಡಲಾಗಿದೆ. ಪ್ರತಿ ಯಂತ್ರಕ್ಕೆ ಸುಮಾರು 1 ಕೋಟಿ ರು.ಗೂ ಹೆಚ್ಚು ದರವನ್ನು ಕಂಪನಿಗಳು ಬಿಡ್ ಮಾಡಿವೆ ಎಂದು ಪೂರ್ವ ನಗರ ಪಾಲಿಕೆ ಆಯುಕ್ತ ಡಿ.ಎಸ್. ರಮೇಶ್ ‘ಕನ್ನಡಪ್ರಭ’ಕ್ಕೆ ತಿಳಿಸಿದರು.ಪ್ರತಿ ನಿತ್ಯ ಸುಮಾರು 40 ಕಿ.ಮೀ ರಸ್ತೆ ಮಾರ್ಗದಲ್ಲಿ 2 ಬದಿಯಲ್ಲಿ ಈ ಯಂತ್ರಗಳು ಸ್ವಚ್ಛಗೊಳಿಸುತ್ತವೆ. 5 ಯಂತ್ರಗಳು 200 ಕಿ.ಮೀ ಮಾರ್ಗದಲ್ಲಿ ಕಸ ಗುಡಿಸುತ್ತವೆ. ಟ್ರಾಫಿಕ್ ದಟ್ಟಣೆ ಇಲ್ಲದಿದ್ದಾಗ ಕಾರ್ಯಾಚರಿಸುತ್ತವೆ. ನಗರದಲ್ಲಿ ಸರಕು ವಾಹನಗಳಿಂದ ಬೀಳುವ ಕಟ್ಟಡ ಸಾಮಗ್ರಿ ತ್ಯಾಜ್ಯ ಸೇರಿದಂತೆ ಇನ್ನಿತರ ಕಸವನ್ನು ಯಾಂತ್ರೀಕೃತ ಕಸ ಗುಡಿಸುವ ಯಂತ್ರಗಳು ಸ್ವಚ್ಛಗೊಳಿಸುತ್ತವೆ ಎಂದು ರಮೇಶ್ ತಿಳಿಸಿದರು.
ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿಯು ಸುಮಾರು 160 ಕಿ.ಮೀ ಉದ್ದದ ರಸ್ತೆಗಳನ್ನು ಸ್ವಚ್ಛಗೊಳಿಸಲು ಯಂತ್ರ ಖರೀದಿ ಪ್ರಕ್ರಿಯೆ ಪ್ರಗತಿಯಲ್ಲಿದೆ. ಗುರುವಾರ ಪರೀಕ್ಷೆಗೆ ಒಳಪಡಿಸಿರುವ ಸ್ವಚ್ಛತಾ ವಾಹನದಲ್ಲಿ ವಾಟರ್ ಜೆಟ್ ಕೂಡ ಲಭ್ಯವಿದ್ದು, ನೀರು ಬಳಸಿ ರಸ್ತೆ, ಫುಟ್‌ಪಾತ್‌ಗಳನ್ನು ಸ್ವಚ್ಛಗೊಳಿಸುವ ಸೌಲಭ್ಯ ಇದೆ. ಅಲ್ಲದೇ, ರಸ್ತೆ ವಿಭಜಕಗಳನ್ನು ಕೂಡ ವಾಟರ್ ಜೆಟ್ ಮೂಲಕ ಸ್ವಚ್ಛಗೊಳಿಸಬಹುದಾಗಿದೆ.ಕೆಲವೇ ದಿನಗಳಲ್ಲಿ ನಗರದಾದ್ಯಂತ ಸುಮಾರು 30 ಕಸ ಗುಡಿಸುವ ಯಂತ್ರಗಳು ನಗರ ರಸ್ತೆಗಳನ್ನು ಸ್ವಚ್ಛಗೊಳಿಸಲಿದೆ. ಈ ಮೊದಲು ಧೀರ್ಘಾವಧಿಗೆ ಯಂತ್ರಗಳನ್ನು ಬಾಡಿಗೆ ಪಡೆಯುವ ಉದ್ದೇಶವನ್ನು ಹೊಂದಲಾಗಿತ್ತು. ಆದರೆ, ದರ ನಿಗದಿ ವಿಚಾರವಾಗಿ ಸಾರ್ವಜನಿಕ ವಲಯದಲ್ಲಿ ಮತ್ತು ವಿರೋಧ ಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾದ ಕಾರಣ ಖರೀದಿಸಿ ನಿರ್ವಹಿಸಲು ತೀರ್ಮಾನಿಸಲಾಗಿದೆ.ರಸ್ತೆಗಳಲ್ಲಿ ಬಿದ್ದಿರುವ ಮಣ್ಣು, ಕಟ್ಟಡ ನಿರ್ಮಾಣ ಸಂಬಂಧಿಸಿದ ತ್ಯಾಜ್ಯದ ಮೇಲೆ ವಾಹನ ಸಂಚಾರದಿಂದ ಧೂಳು ಏಳುತ್ತದೆ. ಆದರೆ, ಯಾಂತ್ರೀಕೃತ ಕಸ ಗುಡಿಸುವ ಯಂತ್ರಗಳಿಂದ ನಿರಂತರ ಸ್ವಚ್ಛತೆಯಿಂದ ಈ ಸಮಸ್ಯೆ ಬಹುಮಟ್ಟಿಗೆ ಪರಿಹಾರವಾಗುವ ವಿಶ್ವಾಸವಿದೆ.
-ಡಿ.ಎಸ್.ರಮೇಶ್, ಪೂರ್ವ ಪಾಲಿಕೆ ಆಯುಕ್ತ