ಶ್ರಮಕ್ಕಿಂತ ಚಾಣಾಕ್ಷತನದಿಂದ ಅಭ್ಯಸಿಸಿ: ಡಾ.ಎಂ.ರವಿಪ್ರಸಾದ್ ಸಜ್ಜನ್

| Published : Feb 08 2024, 01:33 AM IST

ಶ್ರಮಕ್ಕಿಂತ ಚಾಣಾಕ್ಷತನದಿಂದ ಅಭ್ಯಸಿಸಿ: ಡಾ.ಎಂ.ರವಿಪ್ರಸಾದ್ ಸಜ್ಜನ್
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯಾರ್ಥಿಗಳು ಉದಾತ್ತ ಗುರಿ ಇಟ್ಟುಕೊಂಡು ಗುರುಗಳ ಮಾರ್ಗದರ್ಶನ ಪಡೆದು ಮನಸ್ಸಿನ ಏಕಾಗ್ರತೆ, ಆತ್ಮವಿಶ್ವಾಸ, ದೃಢಸಂಕಲ್ಪ, ಕಠಿಣ ಪರಿಶ್ರಮ, ಚಾಣಾಕ್ಷತನ ಹಾಗೂ ಚಾಕಚಕ್ಯತೆಯಿಂದ ಸತತ ಅಧ್ಯಯನದಿಂದ ಉನ್ನತ ಸಾಧನೆ ಮಾಡಬಹುದು.

ಕನ್ನಡಪ್ರಭ ವಾರ್ತೆ ಹಿರಿಯೂರು

ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಕಷ್ಟಪಟ್ಟು ಅಧ್ಯಯನ ಮಾಡಿದರೆ ಉಪಯೋಗವಿಲ್ಲ. ಅದಕ್ಕೆ ಬದಲಾಗಿ ಚಾಣಾಕ್ಷತನದಿಂದ ಹಾಗೂ ಚಾಕಚಕ್ಯತೆಯಿಂದ ಅಧ್ಯಯನ ಮಾಡಬೇಕು ಎಂದು ಮೆಮೊರಿ ಪವರ್‌ನಲ್ಲಿ ವಿಶ್ವದಾಖಲೆ ಮಾಡಿರುವ ಡಾ.ಎಂ. ರವಿಪ್ರಸಾದ್ ಸಜ್ಜನ್ ರವರು ಹೇಳಿದರು.

ನಗರದ ನೆಹರೂ ಮೈದಾನದಲ್ಲಿರುವ ಎ.ಕೃಷ್ಣಪ್ಪ ರೋಟರಿ ಸಭಾಂಗಣದಲ್ಲಿ ಬೆಂಗಳೂರಿನ ಮಾಸ್ಟರ್ ಮೈಂಡ್ ಪವರ್ ಸೀಕ್ರೆಟ್ಸ್ ಮತ್ತು ರೋಟರಿ ಕ್ಲಬ್ ಸಹಯೋಗದಲ್ಲಿ ನಡೆಯುತ್ತಿರುವ ಸೃಜನಾತ್ಮಕ ಸ್ಮರಣಶಕ್ತಿ ಮತ್ತು ವ್ಯಕ್ತಿತ್ವ ವಿಕಸನದ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಾನು ಉಪನ್ಯಾಸದಲ್ಲಿ ಮಂಡಿಸುವ ವಿಷಯಗಳೆಲ್ಲವೂ ವಿಜ್ಞಾನದ ಸಂಶೋಧನೆಗಳ ಆಧಾರದ ಮೇಲೆ ದೃಢಪಟ್ಟಿವೆ. ವಿದ್ಯಾರ್ಥಿಗಳು ಉದಾತ್ತ ಗುರಿ ಇಟ್ಟುಕೊಂಡು ಗುರುಗಳ ಮಾರ್ಗದರ್ಶನ ಪಡೆದು ಮನಸ್ಸಿನ ಏಕಾಗ್ರತೆ, ಆತ್ಮವಿಶ್ವಾಸ, ದೃಢಸಂಕಲ್ಪ, ಕಠಿಣ ಪರಿಶ್ರಮ, ಚಾಣಾಕ್ಷತನ ಹಾಗೂ ಚಾಕಚಕ್ಯತೆಯಿಂದ ಸತತ ಅಧ್ಯಯನದಿಂದ ಉನ್ನತ ಸಾಧನೆ ಮಾಡಬಹುದು. ಗುರಿ ಸಾಧಿಸುವಲ್ಲಿ ಏನೇ ಅಡೆತಡೆ, ತೊಡಕುಗಳು, ಕಷ್ಟಗಳು ಬಂದರೂ ಸಹ ಮುಂದಿಡುವ ಹೆಜ್ಜೆಯಿಂದ ಹಿಂದೆ ಸರಿಯಬಾರದು ಮತ್ತು ಎದೆಗುಂದಬಾರದು. ವಿದ್ಯಾರ್ಥಿ ಜೀವನದಲ್ಲಿ ಹಾಗೂ ಮುಂದಿನ ಜೀವನದಲ್ಲಿ ಧೈರ್ಯದಿಂದ ಮುನ್ನುಗ್ಗಬೇಕು. ವ್ಯಕ್ತಿಯು ಸಾಸಿವೆಯ ಕಾಳಿನಷ್ಟು ಆತ್ಮವಿಶ್ವಾಸ ಮತ್ತು ದೃಢ ಸಂಕಲ್ಪ ಹೊಂದಿದ್ದರೆ ಬೆಟ್ಟವನ್ನೂ ಸಹ ಅಲುಗಾಡಿಸಬಹುದು. ಮಾನವನ ಮೆದುಳಿನಲ್ಲಿ ಬಲ ಮತ್ತು ಎಡ ಮೆದುಳು ಎಂಬ ಎರಡು ಭಾಗಗಳಿದ್ದು ಇವುಗಳಲ್ಲಿ ಸಾಮಾನ್ಯ ಜನರು ಎಡ ಭಾಗದ ಮೆದುಳನ್ನು ಮಾತ್ರ ಉಪಯೋಗಿಸುತ್ತಾರೆ. ಆದರೆ ಅತ್ಯಂತ ಮೇಧಾವಿಗಳಾದ ಯಶಸ್ವಿ ವ್ಯಕ್ತಿಗಳು ಬಲ ಭಾಗದ ಮೆದುಳನ್ನು ಶೇ.2ರಷ್ಟು ಬಳಸುತ್ತಾರೆ. ಹಾಗಾಗಿಯೇ ಅವರು ಜೀವನದಲ್ಲಿ ಯಶಸ್ವಿ ವ್ಯಕ್ತಿಗಳಾಗಿದ್ದಾರೆ. ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯೂ ಹಾಗೂ ವ್ಯಕ್ತಿಯೂ ಸಹ ಎಡ ಭಾಗದ ಮೆದುಳಿನ ಜೊತೆಗೆ ಬಲ ಭಾಗದ ಮೆದುಳನ್ನೂ ಸಹ ಬಳಸಿಕೊಳ್ಳುವುದರ ಮೂಲಕ ಉನ್ನತ ಸಾಧನೆ ಯಶಸ್ವಿ ವ್ಯಕ್ತಿಗಳಾಗಬಹುದು ಎಂದು ಪ್ರತಿಪಾದಿಸಿದರು.

ಜಗತ್ತು ಕಂಡ ಅತ್ಯದ್ಭುತ ಮೇಧಾವಿ ಆಲ್ಬರ್ಟ್ ಐನ್‍ಸ್ಟೀನ್ ಅವರ ಮೆದುಳಿನ ಒಟ್ಟು ಶಕ್ತಿ ಸಾಮರ್ಥ್ಯ ಶೇ.7ರಷ್ಟು ಮಾತ್ರ ಬಳಸಿದ್ದಾರೆ ಹಾಗೂ ಮೇಧಾವಿಯಾಗಿದ್ದಾರೆ. ಆದರೆ ಜನಸಾಮಾನ್ಯರಾದ ನಾವು ನಮ್ಮ ಮೆದುಳಿನಲ್ಲಿ ಅಗಾಧ ಶಕ್ತಿ ಸಾಮರ್ಥ್ಯ ಇದ್ದರೂ ಸಹ ನಾವು ಆ ಮೆದುಳಿನ ಸಂಪೂರ್ಣ ಉಪಯೋಗ ಪಡೆಯುತ್ತಿಲ್ಲ. ಮನುಷ್ಯನ ಮೆದುಳಿನಲ್ಲಿ ಶಕ್ತಿ ಸಾಮರ್ಥ್ಯ ಎಷ್ಟಿದೆ ಎಂದರೆ ಪ್ರತಿಯೊಂದು ವಿಶ್ವವಿದ್ಯಾನಿಲಯದಿಂದ ಹತ್ತು ಪದವಿಗಳಂತೆ ಹತ್ತು ವಿಶ್ವವಿದ್ಯಾನಿಲಯಗಳಿಂದ ಒಟ್ಟು 100 ಡಿಗ್ರಿಗಳನ್ನು ಪಡೆದುಕೊಂಡರೂ ಸಹ ನಮ್ಮ ಮೆದುಳಿನ ಶಕ್ತಿ ಸಾಮರ್ಥ್ಯದಲ್ಲಿ ಕೇವಲ ಶೇ.10ರಷ್ಟು ಮಾತ್ರ ಬಳಸಿರುತ್ತೇವೆ. ಮೆದುಳಿನ ಉಳಿದ ಶೇ.90ರಷ್ಟು ಶಕ್ತಿ ಸಾಮರ್ಥ್ಯ ಬಳಸದೇ ಹಾಗೆಯೇ ಉಳಿಯುತ್ತದೆ ಎಂದರು.

ಈ ವೇಳೆ ರೋಟರಿ ಕ್ಲಬ್ ಅಧ್ಯಕ್ಷ ಡಿ.ದೇವರಾಜ ಮೂರ್ತಿ, ಕಾರ್ಯದರ್ಶಿ ಎಸ್.ಜೋಗಪ್ಪ, ಖಜಾಂಚಿ ಸಣ್ಣ ಭೀಮಣ್ಣ ಮತ್ತು ಪದಾಧಿಕಾರಿಗಳು ಹಾಗೂ ತಾಲೂಕಿನ ಶಾಲಾ ಕಾಲೇಜುಗಳ ವಿದ್ಯಾರ್ಥಿ ವಿದ್ಯಾರ್ಥಿನಿಯರು, ಪೋಷಕರು ಉಪಸ್ಥಿತರಿದ್ದರು.