ಪ್ರತಿ ವಿದ್ಯಾರ್ಥಿಗಳಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಜೀವನದಲ್ಲಿ ಒಂದು ಪ್ರಮುಖ ಮೆಟ್ಟಿಲು.ವಿದ್ಯಾರ್ಥಿಗಳು ಸದಾ ಸ್ಫೂರ್ತಿಯಿಂದ ಕಾಲ ಕಳೆಯಿರಿ
ಕಾರಟಗಿ: ಮಕ್ಕಳು ಜೀವನದಲ್ಲಿ ಸಾಧನೆ ಮಾಡಲು ಕಷ್ಟಪಡಬೇಕು, ಆದರೆ ಅಭ್ಯಾಸ ಮಾತ್ರ ಇಷ್ಟಪಟ್ಟು ಓದಿದರೆ ಮಾತ್ರ ನೆನಪಿನಲ್ಲಿ ಉಳಿಯುತ್ತದೆ. ಸದಾ ಸಕಾರಾತ್ಮಕವಾಗಿ ಚಿಂತನೆ ಮಾಡಿ ಎಂದು ಡಿಡಿಪಿಐ ಸೋಮಶೇಖರ ಗೌಡ ಹೇಳಿದರು.
ಇಲ್ಲಿನ ಕೆಪಿಎಸ್ ಶಾಲೆಗೆ ಗುರುವಾರ ಭೇಟಿ ನೀಡಿ ಎಸ್ಸೆಸ್ಸೆಲ್ಸಿ ಮಕ್ಕಳೊಂದಿಗೆ ಸಂವಾದ ನಡೆಸಿ ಮಾತನಾಡಿದರು.ಪ್ರತಿ ವಿದ್ಯಾರ್ಥಿಗಳಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಜೀವನದಲ್ಲಿ ಒಂದು ಪ್ರಮುಖ ಮೆಟ್ಟಿಲು.ವಿದ್ಯಾರ್ಥಿಗಳು ಸದಾ ಸ್ಫೂರ್ತಿಯಿಂದ ಕಾಲ ಕಳೆಯಿರಿ.ನಿಯಮಿತವಾಗಿ ಓದುವ ಅಭ್ಯಾಸ ಅಳವಡಿಸಿಕೊಳ್ಳಿ.ಉತ್ತಮ ಸಮಯ ನಿರ್ವಹಣೆ ಮತ್ತು ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ಗಂಭೀರವಾಗಿ ತೆಗೆದುಕೊಳ್ಳುವುದು ಮುಖ್ಯ. ಪ್ರತಿಯೊಂದು ವಿಷಯಕ್ಕೂ ಸಮಾಜ ಪ್ರಾಮುಖ್ಯತೆ ನೀಡಿ. ಕಠಿಣ ವಿಷಯಗಳ ಮೇಲೆ ಹೆಚ್ಚು ಗಮನ ಹರಿಸಿ ಪರೀಕ್ಷೆಯ ಸಮಯದಲ್ಲಿ ಪ್ರಶ್ನೆಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಿ. ಉತ್ತರಿಸಲು ಸುಲಭವಾಗುತ್ತದೆ ಎಂದು ಸಲಹೆ ನೀಡಿದರು.
ಶಾಲೆಯಲ್ಲಿ ನಿಗದಿತ ಪಾಠ, ಪರೀಕ್ಷೆ ತಯಾರಿ ಕುರಿತು ಮಕ್ಕಳಿಂದ ಮಾಹಿತಿ ಪಡೆದ ಡಿಡಿಪಿಐ ಅವರು, ಈ ಬಾರಿ ಕೊಪ್ಪಳ ಜಿಲ್ಲೆಯ ಮಕ್ಕಳು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯುವ ನಿರೀಕ್ಷೆ ಇದೆ. ಮಕ್ಕಳು ಈ ಬಾರಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಲು ಶಿಕ್ಷಣ ಇಲಾಖೆ ಹಲವು ವಿಷಯ ತಜ್ಞರನ್ನೊಳಗೊಂ ತಂಡ ರಚಿಸಿ ಹಲವಾರು ಪ್ರಯೋಗ ನಡೆಸಿದೆ. ಮಕ್ಕಳು ತಮ್ಮ ಶಿಕ್ಷಕರಿಂದ ಯಾವುದೇ ಸಮಸ್ಯೆ, ತೊಂದರೆ ಅರ್ಥವಾಗ ವಿಷಯಗಳ ಕುರಿತು ಹಿಂಜರಿಯದೆ ಪ್ರಶ್ನೆ ಮಾಡಿ ಕೇಳಿ ತಿಳಿದುಕೊಳ್ಳಿ ಎಂದು ಧೈರ್ಯ ತುಂಬಿದರು.ಮುಖ್ಯವಾಗಿ ಶಾಲೆ ಹಂತದಲ್ಲಿ ನಡೆಯುವ ಪೂರ್ವ ಸಿದ್ಧತಾ ಪರೀಕ್ಷೆ ತಪ್ಪಿಸಬೇಡಿ. ಇವುಗಳು ಮುಖ್ಯ ಪರೀಕ್ಷೆಗೆ ಉತ್ತಮ ತರಬೇತಿಯಾಗಿ ಕಾರ್ಯನಿರ್ವಹಿಸುತ್ತವೆ. ಜತೆಗೆ ಪೂರ್ವ ಪರೀಕ್ಷೆಗಳ ನಿಮ್ಮ ತಪ್ಪು ಗುರುತಿಸಿ ಸರಿಪಡಿಸಿಕೊಳ್ಳಲು ಸಹಾಯ ಮಾಡುತ್ತವೆ. ಪರೀಕ್ಷೆಯಲ್ಲಿ ಹೇಗೆ ಉತ್ತರಿಸಬೇಕು ಎನ್ನುವುದನ್ನು ಕಲಿಯಬಹುದು ಎಂದು ಮಕ್ಕಳಿಗೆ ತಿಳಿಹೇಳಿದರು.
ನೀವು ಓದುತ್ತಿರುವುದು ಕೇವಲ ಪರೀಕ್ಷೆಗಾಗಿ ಅಲ್ಲ.ನಿಮ್ಮ ಭವಿಷ್ಯದ ಕನಸು ನನಸು ಮಾಡಲು ಕಷ್ಟ ಪಟ್ಟು ಓದಿಸುತ್ತಿರುವ ನಿಮ್ಮ ಪಾಲಕರಿಗೆ ಸಮಾಜದಲ್ಲಿ ಉತ್ತಮ ಹೆಸರು ತರಲು ನಿಮಗೆ ಇದೊಂದು ಅವಕಾಶ. ನಿಮ್ಮ ಜೀವನದ ಗುರಿ ತಲುಪಲು ಎಸ್ಸೆಸ್ಸೆಲ್ಸಿ ಮೊದಲ ಮೆಟ್ಟಲು. ನಿಮ್ಮ ಗುರಿ ನಿಮಗೆ ಸ್ಪಷ್ಟವಾಗಿದ್ದರೆ ಓದುವುದು ಕಷ್ಟವಾಗುವುದಿಲ್ಲ. ಬದಲಿಗೆ ಖುಷಿಯಾಗುತ್ತದೆ. ಅದಕ್ಕಾಗಿ ಮಕ್ಕಳು ಕಷ್ಟಪಟ್ಟು ಓದುವ ಬದಲು ಇಷ್ಟಪಟ್ಟು ಓದಿ ಗುರಿ ಮುಟ್ಟಿ ಎಂದು ಡಿಡಿಪಿಐ ಸೋಮಶೇಖರ ಗೌಡ ಮಕ್ಕಳಿಗೆ ಹುರಿದುಂಬಿಸಿದರು.ಈ ವೇಳೆ ಕೆಪಿಎಸ್ ಪ್ರೌಢಶಾಲೆ ವಿಭಾಗದ ಮುಖ್ಯಗುರು ಶರಣಪ್ಪ ಸೋಮಲಾಪುರ, ವಿಷಯ ಶಿಕ್ಷಕರು ಮಕ್ಕಳು ಇದ್ದರು.