ಪೊಲೀಸ್‌ ಕವಾಯತು ಮೈದಾನದಲ್ಲಿ 12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ । ಗಣ್ಯರಿಂದ ಸಾಮೂಹಿಕವಾಗಿ ಯೋಗ ಭಂಗಿಗಳ ಪ್ರದರ್ಶನ

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಜನರು ಪ್ರತಿನಿತ್ಯ 5-10 ನಿಮಿಷಗಳ ಕಾಲ ಯೋಗ, ಧ್ಯಾನ ಮಾಡುವ ಮೂಲಕ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಶ್ರೀರೂಪಾ ಸಲಹ ನೀಡಿದರು.

ಪೊಲೀಸ್‌ ಕವಾಯತು ಮೈದಾನದಲ್ಲಿ 12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.ಯೋಗ ದೈಹಿಕ ಮತ್ತು ಮನಸ್ಸಿನ ಆರೋಗ್ಯಕ್ಕೆ ನವಚೈತನ್ಯ ತುಂಬುವ ಮೂಲಕ ವ್ಯಕ್ತಿಯ ಸದೃಢತೆ, ವಿಕಸನಕ್ಕೆ ಪೂರಕ ಶಕ್ತಿ ಒದಗಿಸಲಿದೆ. ಮಾನಸಿಕ ಜಂಜಾಟ, ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಯೋಗ ಸಹಕಾರಿ. ಯೋಗ ದಿನದಂದು ಮಾತ್ರ ಯೋಗ ಮಾಡುವುದಲ್ಲ, ಮಕ್ಕಳು, ವಿದ್ಯಾರ್ಥಿಗಳು, ಸಾರ್ವಜನಿಕರು ಸೇರಿದಂತೆ ಎಲ್ಲರನ್ನು ಯೋಗಭ್ಯಾಸಕ್ಕೆ ಪ್ರೋತ್ಸಾಹಿಸಲು ಹಾಗೂ ಚಿಕ್ಕವರಿಂದ ವೃದ್ಧರವರೆಗೂ ಯೋಗದ ಜಾಗೃತಿ ಮೂಡಿಸಲು ಈ ಬಾರಿ ‘ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ’ ಘೋಷವಾಕ್ಯ ರೂಪಿಸಲಾಗಿದೆ ಎಂದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ಮುತ್ತುರಾಜ್ ಅವರು ಮಾತನಾಡಿ ಯೋಗಕ್ಕೆ ಸಾಕಷ್ಟು ಬಗೆಯ ಪರಿಕಲ್ಪನೆಗಳಿವೆ. ಪೂಜೆ ಮಾಡಿದರೆ ಅದು ಭಕ್ತಿಯೋಗ, ಭೌತಿಕವಾಗಿ ದೇಹ ದಂಡಿಸಿದರೆ ಅದು ಹಠಯೋಗ, ನಿಷ್ಠೆಯಿಂದ ಕಾಯಕ ಮಾಡಿದರೆ ಅದು ಕರ್ಮಯೋಗ, ಹೀಗೆ ದೈನಂದಿನ ಜೀವನದಲ್ಲಿ ನಾವು ಯೋಗಕ್ಕೆ ಶರಣಾಗಿದ್ದೇವೆ. ಮನುಷ್ಯ ಆರೋಗ್ಯಯುತ ಜೀವನ ನಡೆಸಲು ತೋಳ್ಬಲ, ಆತ್ಮಬಲ, ಮನೋಬಲ ಬೇಕು. ಇವುಗಳ ವೃದ್ಧಿಗೆ ಯೋಗ ಬೇಕೇಬೇಕು. ಮುಖ್ಯವಾಗಿ ವಿದ್ಯಾರ್ಥಿಗಳು ಓದಿನಲ್ಲಿ ಏಕಾಗ್ರತೆ ಸಾಧಿಸಲು ಯೋಗ ಅತ್ಯಂತ ಅವಶ್ಯಕವಾಗಿದೆ. ಯೋಗ ದೇಹವನ್ನು ಹಾಗೂ ಧ್ಯಾನ ಮನಸ್ಸನ್ನು ನಿಯಂತ್ರಿಸಲಿದೆ. ಪ್ರತಿಯೊಬ್ಬರು ಯೋಗದ ಮಹತ್ವ ಅರಿತು, ಇತರರಿಗೂ ತಿಳಿಸಬೇಕು ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ ಅವರು ಮಾತನಾಡಿದರು.


ವೇದಿಕೆ ಕಾರ್ಯಕ್ರಮದ ಬಳಿಕ ನಡೆದ ಸಾಮೂಹಿಕ ಯೋಗ ಪ್ರದರ್ಶನದಲ್ಲಿ ಮೈಸೂರಿನ ಆಯುಷ್ ಪ್ರಕೃತಿ ಚಿಕಿತ್ಸಾಲಯದ ವೈದ್ಯ ಡಾ. ಮನೋಜ್, ವಿದ್ಯಾರ್ಥಿಗಳಾದ ಗಗನ್, ರಜತ್ ವಿವಿಧ ಆಯಾಮದ ಯೋಗಭಂಗಿಗಳನ್ನು ಪ್ರದರ್ಶಿಸಿದರು. ಜಿಲ್ಲಾಧಿಕಾರಿ ಶ್ರೀರೂಪಾ ಸೇರಿದಂತೆ ಗಣ್ಯರು, ಅಧಿಕಾರಿಗಳು, ಶಾಲಾ ವಿದ್ಯಾರ್ಥಿಗಳು, ಸಂಘಸಂಸ್ಥೆ ಪದಾಧಿಕಾರಿಗಳು, ಸಾರ್ವಜನಿಕರು ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡರು.

--

21ಸಿಎಚ್ಎನ್‌10೧೨ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಜಿಲ್ಲಾಧಿಕಾರಿ ಶ್ರೀರೂಪಾ ಉದ್ಘಾಟಿಸಿದರು.

--

21ಸಿಎಚ್ಎನ್‌11 ಮತ್ತು 12

ಯೋಗ ದಿನಾಚರಣೆಯಂದು ಜಿಲ್ಲಾಧಿಕಾರಿ ಶ್ರೀರೂಪಾ, ಎಸ್ಪಿ ಮುತ್ತುರಾಜು, ಎಡಿಸಿ ಟಿ. ಜವರೇಗೌಡ ಸೇರಿ ಗಣ್ಯರು ಯೋಗ ಪ್ರದರ್ಶನ ಮಾಡಿದರು.