ಗಜೇಂದ್ರಗಡ: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಹಾಗೂ ಎನ್.ಟಿ.ಎ. ರದ್ದು, ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಲು ಮತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಎಸ್‌ಎಫ್‌ಐ ಕೇಂದ್ರ ಸಮಿತಿಯ ಸೂಚನೆ ಮೇರೆಗೆ ರಾತ್ರಿ ಎಚ್ಚರವಿರಿ, ದೇಶವನ್ನು ಎಚ್ಚರಿಸಿ ಘೋಷಣೆಯೊಂದಿಗೆ ಪಟ್ಟಣದ ಕಾಲಕಾಲೇಶ್ವರ ವೃತ್ತದಲ್ಲಿ ನೂರಾರು ವಿದ್ಯಾರ್ಥಿಗಳು ಪಂಜಿನ ಮೆರವಣಿಗೆ ಹಾಗೂ ಅಹೋರಾತ್ರಿ ಧರಣಿ ನಡೆಸಿದ್ದರು.
ಪಟ್ಟಣದಲ್ಲಿ ಸಂಘಟನೆ ನೇತೃತ್ವದಲ್ಲಿ ಶನಿವಾರ ಬೆಳಗ್ಗೆ ನೂರಾರು ವಿದ್ಯಾರ್ಥಿಗಳು ಪಟ್ಟಣದ ವಿವಿಧ ಭಾಗಗಳಲ್ಲಿ ರ‍್ಯಾಲಿ ನಡೆಸಿ ಕಾಲಕಾಲೇಶ್ವರ ವೃತ್ತದಲ್ಲಿ ಬೃಹತ್ ಮಾನವ ಸರಪಳಿ ರಚಿಸಿ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟಿಸಿದರು.ಈ ವೇಳೆ ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಚಂದ್ರು ರಾಠೋಡ ಮಾತನಾಡಿ, ಕೇಂದ್ರದ ಮೋದಿ ಸರ್ಕಾರ ತನ್ನ ಸುದೀರ್ಘ ಆಡಳಿತ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಮಾರಕವಾಗಿರುವ ಶಿಕ್ಷಣದ ಕಾನೂನು ಜಾರಿಗೆ ಮಾಡಿ, ಹಲವು ಪ್ರಶ್ನೆಪತ್ರಿಕೆಗಳ ಸೋರಿಕೆ ಮೂಲಕ ವಿದ್ಯಾರ್ಥಿಗಳಿಗೆ ವಂಚನೆ ಮಾಡಿ ಮೋಸ ಮಾಡಿದೆ. ಕೇಂದ್ರ ಸರ್ಕಾರದ ನೀತಿ ಖಂಡಿಸಿ ದೆಹಲಿಯ ಜಂತರ್ ಮಂತರ್ ನಲ್ಲಿ ಬೃಹತ್ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳ ಮೇಲೆ ಕೇಂದ್ರದ ಬಿಜೆಪಿ ಸರ್ಕಾರ ಲಾಠಿ ಚಾರ್ಜ್ ಮಾಡಿಸಿದೆ. ಆದರೆ, ಲಾಠಿ ಚಾರ್ಜ್‌ನಿಂದ ಹೋರಾಟದಿಂದ ಹಿಂಜರಿದಿಲ್ಲ. ಅಲ್ಲದೆ ದೇಶವ್ಯಾಪಿ ಬೃಹತ್ ಪ್ರತಿಭಟನೆ ಕಂಡು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ. ಇದು ಹೋರಾಟಕ್ಕೆ ಸಿಕ್ಕ ಜಯವಾಗಿದೆ ಎಂದರು.
ನಂತರ ಕಾರ್ಮಿಕ ಸಂಘಟನೆಯ ಜಿಲ್ಲಾ ಮುಖಂಡರಾದ ಎಂ.ಎಸ್. ಹಡಪದ ಮಾತನಾಡಿದರು. ಪೀರು ರಾಠೋಡ ಹಾಗೂ ಅನಿಲ್ ಆರ್. ಮಾತನಾಡಿದರು, ಮುಹಮ್ಮದ್ ಇರ್ಷಾನ್, ಶರಣು ಮಾಟರಂಗಿ, ಮಹಾಂತೇಶ ಪೂಜಾರಿ, ಶಿವಬಸಯ್ಯ, ವಿನಾಯಕ, ಗುರುಕಿರಣ್, ಪ್ರವಿಣ್, ಮೆಹಬೂಬ್ ಹವಾಲ್ದಾರ್, ಕನಕರಾಯ ಹಾದಿಮನಿ, ರೇಣಪ್ಪ , ಆನಂದ, ತುಕಾರಾಮ, ಚನ್ನಪ್ಪ ಸೇರಿ ಇತರರು ಇದ್ದರು.