ಸರ್ಕಾರದ ವಿವಿಧ ಇಲಾಖೆಗಳ ಸೇವೆಗಳನ್ನು ಒಂದೇ ವೇದಿಕೆಯಡಿ ತಂದು ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುವ ಉದ್ದೇಶದಿಂದ ಪ್ರಜಾಸೇವೆ ಕಾರ್ಯಕ್ರಮ ರೂಪಿಸಲಾಗಿದೆ.

ನವಲಗುಂದ:

ಸರ್ಕಾರದ ವಿವಿಧ ಇಲಾಖೆಗಳ ಸೇವೆಗಳನ್ನು ಒಂದೇ ವೇದಿಕೆಯಡಿ ತಂದು ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುವ ಉದ್ದೇಶದಿಂದ ಪ್ರಜಾಸೇವೆ ಕಾರ್ಯಕ್ರಮ ರೂಪಿಸಲಾಗಿದೆ. ವಿವಿಧ ಇಲಾಖೆಗಳ ಕುಂದು-ಕೊರತೆಗಳಿಗೆ ಪ್ರತ್ಯೇಕವಾಗಿರುವ ಸಹಾಯವಾಣಿ ಸಂಖ್ಯೆಗಳನ್ನು ಒಗ್ಗೂಡಿಸಿ ಒಂದೇ ಸಹಾಯವಾಣಿ ಸಂಖ್ಯೆ ರೂಪಿಸುವ ಕುರಿತು ಸರ್ಕಾರ ಚಿಂತನೆ ನಡೆಸಿದೆ ಎಂದು ಸಚಿವ ಸಂತೋಷ ಲಾಡ್ ಹೇಳಿದರು.

ಇಲ್ಲಿನ ಮಾಡೆಲ್ ಹೈಸ್ಕೂಲ್‌ದಲ್ಲಿ ನವಲಗುಂದ ವಿಧಾನಸಭಾ ಕ್ಷೇತ್ರ ಪ್ರಜಾಸೇವಾ ಆಂದೋಲನ ಬಾಗಿಲಿಗೆ ಬಂತು ಸರ್ಕಾರ ಸೇವೆಗೆ ಇರಲಿ ಸಹಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸರ್ಕಾರದ ಯೋಜನೆ ಮತ್ತು ಇಲಾಖೆಗಳ ಸೇವೆಗಳು ಜನರಿಗೆ ಸುಲಭವಾಗಿ ದೊರೆಯಬೇಕು. ಸಾರ್ವಜನಿಕರು ಸಲ್ಲಿಸುವ ಅರ್ಜಿಗಳು ಕೇವಲ ಸ್ವೀಕರಿಸುವುದಕ್ಕೆ ಸೀಮಿತವಾಗಬಾರದು. ಅವುಗಳ ವಿಲೇವಾರಿಗೆ ಆದ್ಯತೆ ನೀಡಬೇಕು ಎಂದರು.ರೈತರಿಗೆ ತೇಗದ ಸಿರಿ ಯೋಜನೆಯ ಸೌಲಭ್ಯ:

ಅರಣ್ಯ ಇಲಾಖೆಯ ತೇಗದ ಸಿರಿ ಕಾರ್ಯಕ್ರಮದ ಕುರಿತು ರೈತರಿಗೆ ಮಾಹಿತಿ ನೀಡಿದ ಸಚಿವರು, ಇದು ಕರ್ನಾಟಕ ಮಾತ್ರವಲ್ಲದೆ ಇಡೀ ದೇಶದಲ್ಲಿಯೇ ಹೊಸ ರೀತಿಯ ಕಾರ್ಯಕ್ರಮವಾಗಿದೆ. ರೈತರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ತಮ್ಮ ಜಮೀನುಗಳನ್ನು ಹಸನು ಮಾಡಿಕೊಳ್ಳಲು ಉಚಿತವಾಗಿ ಟ್ರ‍್ಯಾಕ್ಟರ್‌ ಒದಗಿಸುವ ಕಾರ್ಯಕ್ರಮವನ್ನೂ ಮುಂದಿನ ದಿನಗಳಲ್ಲಿ ಆರಂಭಿಸಲಾಗುವುದು ಎಂದು ತಿಳಿಸಿದರು.

ಸ್ವೀಕೃತಗೊಂಡ ಅರ್ಜಿಗಳು:

ಪ್ರಜಾಸೇವೆ ಕಾರ್ಯಕ್ರಮದಲ್ಲಿ ಒಟ್ಟು 115 ಅರ್ಜಿಗಳು ಸ್ವೀಕೃತವಾಗಿದ್ದು, ಪಶುಪಾಲನೆ ಮತ್ತು ಪಶುಸಂಗೋಪನೆ ಇಲಾಖೆ 2, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ 3, ಮೂಲ ಸೌಲಭ್ಯ ಅಭಿವೃದ್ಧಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ 2, ಸಮಾಜ ಕಲ್ಯಾಣ ಇಲಾಖೆ 4. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ 4, ಇಂಧನ ಇಲಾಖೆ 4, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ 2, ವಸತಿ ಇಲಾಖೆ 12, ಕಾರ್ಮಿಕ ಇಲಾಖೆ 1, ಪ್ರಜಾಸೇವಾ ಇಲಾಖೆ 4, ಲೋಕೋಪಯೋಗಿ ಇಲಾಖೆ 3, ಕಂದಾಯ ಇಲಾಖೆ 36, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ 28, ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ 1, ನಗಾರಾಭಿವೃದ್ಧಿ ಇಲಾಖೆ 7, ಜಲ ಸಂಪನ್ಮೂಲ ಇಲಾಖೆ 2 ಸೇರಿ ಆರು ತಾಲೂಕುಗಳಲ್ಲಿ ಒಟ್ಟು 115 ಅರ್ಜಿಗಳು ಸ್ವೀಕೃತಗೊಂಡಿವೆ.

ಶಾಸಕ ಎನ್.ಎಚ್. ಕೋನರೆಡ್ಡಿ ಮಾತನಾಡಿ, ಜನರ ಸಮಸ್ಯೆಗಳನ್ನು ಪರಿಹರಿಸುವ ಉದ್ದೇಶದಿಂದ ‘ಪ್ರಜಾಸೇವೆ’ ಎಂಬ ಹೊಸ ಇಲಾಖೆಯನ್ನು ಆರಂಭಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಸಲ್ಲಿಸುವ ಅರ್ಜಿಗಳು ಕೇವಲ ಸ್ವೀಕೃತಿಗೊಂಡು ಮುಕ್ತಾಯವಾಗುವುದಿಲ್ಲ. ಅರ್ಜಿಗಳ ನೋಂದಣಿಯಿಂದ ಹಿಡಿದು ಸಮಸ್ಯೆಗೆ ಸೂಕ್ತ ಪರಿಹಾರ ದೊರೆಯುವವರೆಗೂ ನಿರಂತರವಾಗಿ ಕ್ರಮಕೈಗೊಳ್ಳಲಾಗುವುದು ಎಂದರು.

ಬೆಣ್ಣೆಹಳ್ಳ ಪರಿಶೀಲನೆ:

ಇದೇ ವೇಳೆ ಬೆಣ್ಣೆಹಳ್ಳದ ಕಾಮಗಾರಿಯನ್ನು ಸಚಿವ ಲಾಡ್ ಹಾಗೂ ಶಾಸಕ ಕೋನರೆಡ್ಡಿ ಅವರು ವೀಕ್ಷಿಸಿದರು. ಉಪವಿಭಾಗಾಧಿಕಾರಿ ಪ್ರಭಾವತಿ ಫಕೀರಪುರ ಸ್ವಾಗತಿಸಿದರು. ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಪ್ರಾಸ್ತಾವಿಕ ಮಾತನಾಡಿದರು. ಎಸ್ಪಿ ಗುಂಜನ್ ಆರ್ಯ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಅಜೀಜ್ ದೇಸಾಯಿ, ಜಿಲ್ಲಾ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಪರಶುರಾಮ ಎಫ್.ಕೆ., ಶಾಲಾ ಮತ್ತು ಶಿಕ್ಷಣ ಇಲಾಖೆ ಉಪನಿರ್ದೇಶಕ ಉಮೇಶ ಬೊಮ್ಮಕ್ಕನವರ, ಶಾಲಂ ಹುಸೇನ್, ತಹಸೀಲ್ದಾರ್‌ ಸುಧೀರ್ ಸಾಹುಕಾರ, ಶಾಂತಮ್ಮ ಗುಂಜಲ್, ಸದುಗೌಡ ಪಾಟೀಲ, ಸುಲೇಮಾನ್ ನಾಶಿಪುಡಿ ಇದ್ದರು.