ಸುಂಟಿಕೊಪ್ಪ ಹೋಬಳಿ ಮಟ್ಟದ ಪ್ರಜಾ ಸೇವೆ ಅಭಿಯಾನದ ಅಂಗವಾಗಿ ಕೊಡಗರಹಳ್ಳಿ ಗ್ರಾಮದ ನೇತಾಜಿ ಸಮುದಾಯ ಭವನದಲ್ಲಿ ಸುಂಟಿಕೊಪ್ಪ ಹೋಬಳಿಗೆ ಸೇರಿದ 8 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕರ ಅಹವಾಲು

ಸುಂಟಿಕೊಪ್ಪ: ಪ್ರಜಾ ಸೇವೆ ಅಭಿಯಾನದಲ್ಲಿ ಕೇವಲ ಅರ್ಜಿಗಳನ್ನು ಮಾತ್ರ ತೆಗೆದುಕೊಳ್ಳದೆ ಅರ್ಜಿಗಳಲ್ಲಿರುವ ಸಮಸ್ಯೆ ಮತ್ತು ಬೇಡಿಕೆಗಳಿಗೆ ಕಾಲಮಿತಿಯೊಳಗೆ ಪರಿಹಾರವನ್ನು ಕಲ್ಪಿಸುವುದೇ ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ಗುರಿ ಎಂದು ಶಾಸಕ ಡಾ.ಮಂತರ್‌ಗೌಡ ಹೇಳಿದರು.

ಶನಿವಾರ ಸುಂಟಿಕೊಪ್ಪ ಹೋಬಳಿ ಮಟ್ಟದ ಪ್ರಜಾ ಸೇವೆ ಅಭಿಯಾನದ ಅಂಗವಾಗಿ ಕೊಡಗರಹಳ್ಳಿ ಗ್ರಾಮದ ನೇತಾಜಿ ಸಮುದಾಯ ಭವನದಲ್ಲಿ ಸುಂಟಿಕೊಪ್ಪ ಹೋಬಳಿಗೆ ಸೇರಿದ 8 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ ಅವರು ಮಾತನಾಡಿದರು.

ಮುಖ್ಯ ಮಂತ್ರಿ ಅವರ ಆಶಯದಂತೆ ಜನರ ಬಳಿಗೆ ಸರ್ಕಾರ ಹೋಗಬೇಕೆಂದು ಯೋಜನೆ ಜಾರಿಗೊಳಿಸಿದ್ದು, ಇಂದಿನ ಸಭೆಯಲ್ಲಿ 60ರಿಂದ 70 ಕ್ಕೂ ಮಿಕ್ಕಿ ಅರ್ಜಿಗಳು ಬಂದಿದ್ದು ಕಂದಾಯ ಇಲಾಖೆ, ಅರಣ್ಯ ಇಲಾಖೆ, ರಸ್ತೆ ಸಮಸ್ಯೆ, ಶಿಕ್ಷಣ, ಆರೋಗ್ಯ ,ಸೂರು ಸೇರಿದಂತೆ ಹಲವು ಬೇಡಿಕೆಗಳ ಅರ್ಜಿಗಳು ಸಲ್ಲಿಕೆಯಾಗಿದ್ದವು ಎಲ್ಲವನ್ನೂ ಪರಿಶೀಲಿಸಿ ಕಾನೂನಿನ ಚೌಕಟ್ಟಿನಲ್ಲಿ ಪರಿಹಾರ ಒದಗಿಸಲಾಗುವುದೆಂದು ನುಡಿದರು. ಜೊತೆಗೆ ಜಿಲ್ಲೆಯ 5 ತಾಲೂಕುಗಳು ಬರಪೀಡಿತ ಎಂದು ಘೋಷಣೆಯಾಗಿದ್ದು, ಕುಡಿಯುವ ನೀರಿನ ಪೂರೈಕೆ ಕುರಿತು ತಹಶೀಲ್ದಾರ್‌ ನೇತೃತ್ವದಲ್ಲಿ ಕ್ಷಿಪ್ರ ಕಾರ್ಯ ಪಡೆ ತಂಡವನ್ನು ರಚಿಸಬೇಕಾಗಿದೆ. ಈ ನಿಟ್ಟಿನಲ್ಲಿ ತಹಸೀಲ್ದಾರ್‌ಗಳು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಕೊಳವೆ ಬಾವಿ ಇತರ ಮೂಲಗಳಿಂದ ಕುಡಿಯುವ ನೀರನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುವುದಾಗಿ ಭರವಸೆ ನೀಡಿದರು.

ಶಾಸಕ ಮಂತರ್‌ಗೌಡ ಅವರು ಸರದಿ ಪ್ರಕಾರ ಅರ್ಜಿದಾರರನ್ನು ಕರೆದು ಸಂಬಂಧಿಸಿದ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಮೇಲಾಧಿಕಾರಿಗಳ ಸಮುಖದಲ್ಲಿ ಆಹವಾಲು ಆಲಿಸಿ ಕಾಲಮಿತಿಯೊಳಗೆ ಪರಿಹಾರ ಕಲ್ಪಿಸಿಕೊಡುವಂತೆ ಸೂಚನೆ ನೀಡಿದರು.

ವೃದ್ಧರು ಸರ್ಕಾರದ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳಿಂದ ಪಲಾನುಭವಿ ಪಟ್ಟಿ ತಾಂತ್ರಿಕ ಲೋಪದೋಷಗಳನ್ನು ಸರಿಪಡಿಸಿಕೊಳ್ಳುವ ನಿಟ್ಟಿನಲ್ಲಿ ಶಾಸಕರಲ್ಲಿ ತಮ್ಮ ಆಳಲನ್ನು ತೋಡಿಕೊಂಡರು.

ವೃದ್ಧರು ಸೂರಿಗಾಗಿ ಅರ್ಜಿಯನ್ನು ಸಲ್ಲಿಸಿದ್ದು ಸೂರು ದೊರೆಯದೆ ಇರುವ ಬಗ್ಗೆ ಶಾಸಕರ ಗಮನಕ್ಕೆ ಬಂದ ಮೇರೆಗೆ ಬದಲಿ ವ್ಯವಸ್ಥೆಯಾಡಿಯಲ್ಲಿ ಸೂರು ಕಾರ್ಯಕ್ಕೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮೇಲಾಧಿಕಾರಿಗಳು ಗಮನಹರಿಸುವಂತೆ ಸೂಚಿಸಿದರು. ಜಿಲ್ಲಾ ಉಪವಿಭಾಗಾಧಿಕಾರಿ ನೀತಿನ್‌ ಚೆಕ್ತಿ, ಕುಶಾಲನಗರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ವಿ.ಪಿ.ಶಶಿಧರ್‌, ಕುಶಾಲನಗರ ತಾಲೂಕು ಪ್ರಭಾರ ತಹಸೀಲ್ದಾರ್‌ ಕೃಷ್ಣ ಮೂರ್ತಿ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಕೆ.ಪಿ.ಅಪ್ಪಣ್ಣ, ಸಹಾಯಕ ಅರಣ್ಯ ಸಂರಕ್ಷಾಣಾಧಿಕಾರಿ ನವೀನ್‌ ಕುಮಾರ್‌, ಆರ್‌ಎಫ್‌ಒ ರಕ್ಷಿತ್‌, ತಾಲೂಕು ಮಟ್ಟದ ಅಧಿಕಾರಿಗಳು, 16 ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು.ಆರೋಗ್ಯ ಶಿಬಿರ: ಇದೇ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ವತಿಯಿಂದ ರಕ್ತದೋತ್ತಡ ಮತ್ತು ರಕ್ತದಲ್ಲಿ ಸಕ್ಕರೆಯ ಪ್ರಮಾಣ ಪರೀಕ್ಷಿಸುವ ಶಿಬಿರವನ್ನು ಅಯೋಜಿಸಲಾಯಿತು. ಸಾರ್ವಜನಿಕರಿಗೆ ಬೇಕಾದ ದಾಖಲಾತಿಗಳ ತಿದ್ದುಪಡಿ ಜನನ ಮತ್ತು ಮರಣ ಸೇರಿದಂತೆ ಇತರೆ ಅರ್ಜಿಗಳನ್ನು ವಿಲೆವಾರಿ ಮಾಡುವ ಸಂದರ್ಭ ಗ್ರಾಮವನ್‌ ವತಿಯಿಂದ ಒದಗಿಸುವ ಸಕಾಲ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿ.ಜಿ.ಲೋಕೇಶ್‌ ಪ್ರಾರ್ಥಿಸಿ, ಕೊಡಗರಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವೀಶ್‌ ಸ್ವಾಗತಿಸಿದರು, ಕೊಡಗರಹಳ್ಳಿ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ರವೀಶ್‌ ವಂದಿಸಿದರು.