ಸಾರಾಂಶ
ಕನ್ನಡಪ್ರಭ ವಾರ್ತೆ ರಾಯಚೂರು
ಪ್ರಜ್ವಲ್ ರೇವಣ್ಣ ಅವರ ಪೆನ್‌ಡ್ರೈವ್ ಪ್ರಕರಣದ ನಂತರ ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಬರಲು ಹೆದರುತ್ತಿದ್ದಾರೆ ಎಂದು ಎಐಸಿಸಿ ಮುಖಂಡ ರಾಹುಲ್ ಗಾಂಧಿ ಆರೋಪಿಸಿದರು.ಸ್ಥಳೀಯ ವಾಲ್ಕಾಟ್ ಮೈದಾನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾಂಗ್ರೆಸ್ ಪ್ರಜಾಧ್ವನಿ 2 ಸಮಾವೇಶದಲ್ಲಿ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣ ಕುಟುಂಬವು ಮಾಡಿದ ದ್ರೋಹ, ದೌರ್ಜನ್ಯ, ಅತ್ಯಾಚಾರದ ಬಗ್ಗೆ ಸಂತ್ರಸ್ತ ಮಹಿಳೆಯರು ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ. ಈ ಕುರಿತು ಅವರಿಗೆ ಮಂಚಿತವಾಗಿಯೇ ಮಾಹಿತಿಯಿದ್ದರು ಸಹ ಅವರು ತುಟಿ ಬಿಚ್ಚಿಲ್ಲ. ಈ ಮೂಲಕ ಇಡೀ ದೇಶದ ಮಹಿಳೆಯರಿಗೆ ಅವಮಾನ ಮಾಡಿದ್ದಾರೆ ಎಂದರು.
ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಪ್ರಜ್ವಲ್ ರೇವಣ್ಣ ರಕ್ಷಣೆಗೆ ನಿಂತಿದ್ದಾರೆ. ವಿದೇಶಕ್ಕೆ ಹೋಗಲು ಸಹಕರಿಸಿದ್ದಾರೆ. ಯಾವಾಗ ಪ್ರಕರಣ ಹೊರ ಬರುತ್ತಿದ್ದಂತೆ ರಾಜ್ಯಕ್ಕೆ ಬರಲು ಮೋದಿ ಎದುರುತ್ತಿದ್ದು ಅದಕ್ಕಾಗಿಯೇ ಅವರ ಎಲ್ಲ ಸಭೆ, ಸಮಾರಂಭಗಳು ರದ್ದುಗೊಂಡಿವೆ. ದೇಶದ ಪ್ರತಿಯೊಬ್ಬ ಮಹಿಳೆಗೂ ಮೋದಿ ಉತ್ತರ ನೀಡಬೇಕು. ಪ್ರಧಾನಿ ಹಾಗೂ ಗೃಹ ಸಚಿವರು ಕರ್ನಾಟಕಕ್ಕೆ ಬಂದು ಪ್ರಜ್ವಲ್ ರೇವಣ್ಣನ ಬಗ್ಗೆ ಜನರಿಗೆ ಉತ್ತರ ನೀಡಬೇಕು ಎಂದು ಆಗ್ರಹಿಸಿದರು.ಮೋದಿ ಮೌನದ ರೂಢಿ:
ಪ್ರಧಾನಮಂತ್ರಿ ನರೇಂದ್ರ ಮೋದಿ ಮೌನವನ್ನು ರೂಢಿಸಿಕೊಂಡಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿದಂತೆ ಪಕ್ಷದ ನಾಯಕರು ಪದೇ ಪದೆ ಸಂವಿಧಾನ ಬದಲಿಸುವ, ರದ್ದು ಪಡಿಸುವ ಹೇಳಿಕೆಗಳನ್ನು ನೀಡುತ್ತಿದ್ದರೂ ಈ ಕುರಿತು ಒಂದೇ ಒಂದು ಮಾತನಾಡುತ್ತಿಲ್ಲ. ಮೋದಿಯವರು ಕೇವಲ 25 ಜನರ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಆ ಜನರಿಗೆ 16 ಲಕ್ಷ ಕೋಟಿ ಸಾಲಮನ್ನಾ ಮಾಡಿದ್ದು, ದೇಶದ ರೈತರು ಹಾಗೂ ನಿರುದ್ಯೋಗಿಗಳ ಕುರಿತು ಮಾತನಾಡುವುದಿಲ್ಲ ಎಂದು ಟೀಕಿಸಿದರು.ನಿಜ ರಾಜಕಾರಣ ಶುರು: ಬಿಜೆಪಿ ದೇಶದ ಸಂವಿಧಾನವನ್ನು ಬದಲಿಸುತ್ತೇವೆ, ರದ್ದು ಮಾಡುತ್ತೇವೆ ಎಂದು ಹೇಳುತ್ತಾರೆ. ಕಾಂಗ್ರೆಸ್ ಆ ಸಂವಿಧಾನವನ್ನು ಉಳಿಸುವ ಕೆಲಸ ಮಾಡುತ್ತದೆ. ಸಮಸಮಾಜ ನಿರ್ಮಾಣ, ನಿಜವಾದ ಸಮುದಾಯಕ್ಕೆ ಮೀಸಲಾತಿ ಹಂಚಿಕೆ, ಉದ್ಯೋಗದಲ್ಲಿ ಮಹಿಳೆಯರಿಗೆ ಮೀಸಲು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದವರ ಅಭಿವೃದ್ಧಿಗೆ ಅಗತ್ಯವಾದ ಅಂಶಗಳನ್ನು ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಸೇರಿಸಿದೆ ಎಂದರು.
ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಜಾತಿ ಜನಗಣತಿ ಮಾಡಿಸಿ, ದೇಶದ ಸಂಪತ್ತಿನಲ್ಲಿ ಯಾವ ಯಾವ ಜಾತಿಯವರ ಆಸ್ತಿ ಎಷ್ಟಿದೆ ಎಂಬುವುದನ್ನ ಬಯಲಿಗೆ ತರುತ್ತೇವೆ. ಜೊತೆಗೆ ದಲಿತರಿಗೆ, ಹಿಂದುಳಿದ ವರ್ಗ ಮತ್ತು ಆದಿವಾಸಿ ಜನಾಂಗದವರಿಗೆ ತಮ್ಮ ಆಸ್ತಿ ಎಷ್ಟಿದೆ ಎಂಬುವುದು ಗೊತ್ತಾಗಲಿದೆ. ಜಾತಿಗಣತಿ ನಿಮ್ಮ ಕೈ ಸೇರಿದ ಆ ಮೇಲೆ ದೇಶದಲ್ಲಿ ನಿಜವಾದ ರಾಜಕಾರಣ ಶುರುವಾಗಲಿದೆ ಎಂದು ಹೇಳಿದರು.ಸಮಾರಂಭದಲ್ಲಿ ಸಚಿವ ಎನ್.ಎಸ್.ಬೋಸರಾಜು ಸ್ವಾಗತಿಸಿದರು. ಎಐಸಿಸಿ ಪ್ರಧಾನ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಶಾಸಕರಾದ ಹಂಪನಗೌಡ ಬಾದರ್ಲಿ, ಜಿ.ಹಂಪಯ್ಯ ನಾಯಕ, ಬಸನಗೌಡ ದದ್ದಲ್, ಆರ್.ಬಸನಗೌಡ ತುರ್ವಿಹಾಳ, ಹಿರಿಯ ತನ್ವೀರ್ ಶೇಠ್, ಶರತ್ ಬಚ್ಚೇಗೌಡ, ವಿನಯಕುಮಾರ ಸೊರಕೆ, ಆರ್‌ಡಿಎ ಅಧ್ಯಕ್ಷ ರಾಜಶೇಖರ ರಾಮಸ್ವಾಮಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಎ. ವಸಂತ ಕುಮಾರ ಸೇರಿ ಪಕ್ಷದ ಮುಖಂಡರು, ಕಾರ್ಯಕರ್ತರು, ಸಾರ್ವಜನಿಕರು ಪಾಲ್ಗೊಂಡಿದ್ದರು.
;Resize=(128,128))
;Resize=(128,128))
;Resize=(128,128))