ಪ್ರಜ್ವಲ್ ರೇವಣ್ಣ ಪ್ರಕರಣ ಸಿಬಿಐಗೆ ವಹಿಸಿ

| Published : May 04 2024, 12:32 AM IST

ಸಾರಾಂಶ

ರಾಮನಗರ: ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಪ್ರಜ್ವಲ್ ರೇವಣ್ಣ ಪ್ರಭಾವಿ ವ್ಯಕ್ತಿಯಾಗಿದ್ದು, ರಾಜ್ಯ ಪೊಲೀಸರ ತನಿಖೆಯಿಂದ ಪೂರ್ಣ ಸತ್ಯಾಂಶ ಹೊರಬರುವುದಿಲ್ಲ. ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಬಿಎಸ್‌ಪಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ನಾಗೇಶ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ರಾಮನಗರ: ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಪ್ರಜ್ವಲ್ ರೇವಣ್ಣ ಪ್ರಭಾವಿ ವ್ಯಕ್ತಿಯಾಗಿದ್ದು, ರಾಜ್ಯ ಪೊಲೀಸರ ತನಿಖೆಯಿಂದ ಪೂರ್ಣ ಸತ್ಯಾಂಶ ಹೊರಬರುವುದಿಲ್ಲ. ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಬಿಎಸ್‌ಪಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ನಾಗೇಶ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಭಾವಿ ವ್ಯಕ್ತಿಗಳಿಂದ ತನಿಖೆ ದಿಕ್ಕು ತಪ್ಪುವ ಸಾಧ್ಯತೆ ಇದ್ದು, ಸರ್ಕಾರ ತಪ್ಪಿತಸ್ಥರ ವಿರುದ್ಧ ಮೀನಾಮೇಷ ಎಣಿಸದೆ ಕ್ರಮ ಕೈಗೊಳ್ಳಬೇಕು. ಸಂತ್ರಸ್ಥರಿಗೆ ನ್ಯಾಯ ಒದಗಿಸಿಕೊಡಬೇಕು ಎಂದರು.

ಲೈಂಗಿಕ ದೌರ್ಜನ್ಯ ಬಯಲಾಗುತ್ತಿದ್ದಂತೆ ತಲೆಮರೆಸಿಕೊಳ್ಳಲು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಸಹಕಾರ ಪಡೆದು ಜೆಡಿಎಸ್ ನಾಯಕರು ಆತನನ್ನು ವಿದೇಶಕ್ಕೆ ಕಳಿಸಿ ತಕ್ಷಣಕ್ಕೆ ಕಾನೂನಿನ ಕೈಗಳಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡಿದ್ದಾರೆ. ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಕುಮಾರ ಸ್ವಾಮಿ ಅವರು ಈ ಹಗರಣವುಳ್ಳ ಪೆನ್ ಡ್ರೈವ್‌ಗಳನ್ನು ಬಹಿರಂಗ ಮಾಡಿರುವುದು ಯಾಕೆ? ಹಂಚಿರುವುದು ಯಾರು?” ಎಂದು ಕೇಳುವುದರ ಮೂಲಕ, ಪ್ರಜ್ವಲ್ ರೇವಣ್ಣನು ಲಂಪಟತನ ಮಾಡಿರುವುದು ನಿಜವೆಂದು ಒಪ್ಪಿಕೊಂಡಿದ್ದಾರೆ. ಜತೆಗೆ ತನಿಖೆಯ ದಿಕ್ಕನ್ನು ಬದಲಾಯಿಸಲು ಯತ್ನಿಸಿದ್ದಾರೆ ಎಂದು ಆರೋಪಿಸಿದರು.

ಪಕ್ಷದಿಂದ ಸದಸ್ಯನನ್ನು ಅಮಾನತ್ತು ಮಾಡುವುದು ದೊಡ್ಡ ಶಿಕ್ಷೆಯೇ?. ಆತನನ್ನು ಪಕ್ಷದಿಂದ ಉಚ್ಚಾಟಿಸಿ, ಕಾನೂನಿನ ಪ್ರಕಾರ ಆತನನ್ನು ವಿದೇಶದಿಂದ ಕರೆಕಳಿಸಿ ತನಿಖೆಗೆ ಒಪ್ಪಿಸಿದ್ದರೆ ಗೌಡರ ಕುಟುಂಬದ ನ್ಯಾಯ ಪ್ರಜ್ಞೆಯನ್ನು ಮೆಚ್ಚಬಹುದಿತ್ತು. ಆದರೆ ಆತನನ್ನು ಅಮಾನತ್ತು ಮಾಡುವ ಮೂಲಕ ಕಣ್ಣೆರೆಸುವ ನಾಟಕ ಆಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿದ್ಧರಾಮಯ್ಯನ ಸರ್ಕಾರವು ಈ ಪ್ರಕರಣವನ್ನು ಎಸ್‌ಐಟಿ ಗೆ ಒಪ್ಪಿಸಿದ್ದು ಸರಿ. ಆದರೆ ತನಿಖೆಯು ನಿಸ್ಪಕ್ಷಪಾತವಾಗಿ ನಡೆಯುವಂತೆಯೂ, ಯಾವುದೇ ಕಾರಣಕ್ಕೂ ಸಾಕ್ಷ್ಯಗಳು ನಾಶವಾಗದಂತೆಯೂ ನೋಡಿಕೊಳ್ಳಬೇಕಿದೆ. ಕಾನೂನಿನ ಮುಂದೆ ಎಷ್ಟೇ ದೊಡ್ಡ ವ್ಯಕ್ತಿಯಾದರೂ ತಲೆ ತಗ್ಗಿಸಿ, ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸಲೇಬೇಕೆಂಬುದನ್ನು ನಿರೂಪಿಸಬೇಕಾದದ್ದು ಸರ್ಕಾರದ ಜವಾಬ್ದಾರಿ ಎಂದು ಹೇಳಿದರು.

ರಾಮನಗರದ ಶಾಸಕ ಇಕ್ಬಾಲ್ ಹುಸೇನ್ ನಡೆಯ ಬಗ್ಗೆಯೂ ತನಿಖೆ ಆಗಬೇಕು. ಶಾಸಕರು ಪವಿತ್ರವಾದ ಕುರಾನ್ ಓದುತ್ತಾರೆ. ವಿಡಿಯೋ ಬಗ್ಗೆ ಮೊದಲು ಶಾಸಕರು ಒಪ್ಪಿಕೊಳ್ಳುತ್ತಾರೆ. ಇವರಿಂದಲೂ ಇಂತಹ ಕೃತ್ಯವನ್ನು ನಿರೀಕ್ಷಿಸಿರಲಿಲ್ಲ. ಅಲ್ಲದೇ ಅದಕ್ಕೆ ತಂದೆ ಮಗಳ ಸಂಬಂಧವನ್ನು ಕಲ್ಪಿಸುತ್ತಾರೆ. ಈ ಮೂಲಕ ಸಮಾಜದಲ್ಲಿ ತಂದೆ ಮಗಳ ನಡುವಿನ ಪವಿತ್ರವಾದ ಸಂಬಂಧಕ್ಕೆ ಧಕ್ಕೆ ತಂದಿದ್ದಾರೆ. ಎಸ್‌ಐಟಿ ಇವರ ವಿರುದ್ಧ ತನಿಖೆ ನಡೆಸಬೇಕು. ಮಹಿಳಾ ಆಯೋಗವು ಯುವತಿಗೆ ರಕ್ಷಣೆ ನೀಡಿ ಸತ್ಯಾಂಶವನ್ನು ಹೊರತರಬೇಕು ಎಂದು ಒತ್ತಾಯಿಸಿದರು.

ಬಿಎಸ್ಪಿ ಪ್ರಧಾನ ಕಾರ್ಯದರ್ಶಿ ಅನ್ನದಾನಪ್ಪ ಮಾತನಾಡಿ, ಎರಡು ವರ್ಷಗಳ ಹಿಂದೆ, ಪ್ರಗತಿಪರ ಸ್ವಾಮೀಜಿ ಎಂಬ ಹೆಸರು ಗಳಿಸಿದ್ದ ಚಿತ್ರದುರ್ಗದ ಮುರುಘರಾಜೇಂದ್ರ ಮಠದ ಶಿವಮೂರ್ತಿ ಶರಣರು ತಮ್ಮ ಮಠದ ವಿದ್ಯಾರ್ಥಿ ನಿಲಯದ ಮುಗ್ಧ ಹೆಣ್ಣುಮಕ್ಕಳನ್ನು ತಮ್ಮ ಕಾಮಕೇಳಿಕ ದುರ್ಬಳಕೆ ಮಾಡಿಕೊಂಡಿದ್ದು, ಕೆಲವರನ್ನು ನಾಪತ್ತೆ ಮಾಡಿದ್ದು ಮತ್ತು ಇಬ್ಬರು ಮಕ್ಕಳನ್ನು ಕೊಲೆ ಮಾಡಿದ ಹಗರಣವು ನಾಡಿನ ಸಭ್ಯಸ್ಥರೆಲ್ಲರೂ ತಲೆತಗ್ಗಿಸುವಂತೆ ಮಾಡಿತ್ತು. ಇದೀಗ ನಾಡಿನ ಅತ್ಯಂತ ಹಿರಿಯ ರಾಜಕಾರಣಿ ಮತ್ತು ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ ಹಾಸನ ಲೋಕಸಭಾ ಕ್ಷೇತ್ರದ ಸಂಸದ ಪ್ರಜ್ವಲ್ ರೇವಣ್ಣ ಮತ್ತು ಆತನ ತಂದೆ ರೇವಣ್ಣರು ಹಲವಾರು ಅಮಾಯಕ ಹೆಣ್ಣು ಮಕ್ಕಳ ವಿರುದ್ಧ ನಡೆಸಿರುವ ಲೈಂಗಿಕ ದೌರ್ಜನ್ಯವು ನಾಡಿಮ ಮಾನವನ್ನು ಹರಾಜು ಹಾಕಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಬಿಎಸ್ಪಿ ಮುಖಂಡರಾದ ಪಾರ್ವತಮ್ಮ, ಮುರುಗೇಶ್, ದೇವರಾಜು, ಉಮೇಶ್ ಸೇರಿದಂತೆ ಇತರರಿದ್ದರು.

3ಕೆಆರ್ ಎಂಎನ್ 1.ಜೆಪಿಜಿ

ಬಿಎಸ್‌ಪಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ನಾಗೇಶ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.