ಸಾರಾಂಶ
ಮಹಿಳೆಯರ ಖಾಸಗಿ ಮತ್ತು ಕೌಟುಂಬಿಕ ಬದುಕು ಛಿದ್ರವಾಗಿದೆ. ಕೆಲವರು ಆತ್ಮಹತ್ಯೆಗೂ ಪ್ರಯತ್ನಿಸಿರುವ ವರದಿಗಳಿವೆ.
ಬಳ್ಳಾರಿ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜ್ವಲ್ ರೇವಣ್ಣ ಮತ್ತು ಎಚ್.ಡಿ. ರೇವಣ್ಣ ಅವರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ (ಜೆಎಂಎಸ್) ಹಾಗೂ ಜನಪರ ಸಂಘಟನೆಗಳ ಒಕ್ಕೂಟದಿಂದ ನಗರದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.
ಮಹಿಳೆಯರ ಖಾಸಗಿ ಮತ್ತು ಕೌಟುಂಬಿಕ ಬದುಕು ಛಿದ್ರವಾಗಿದೆ. ಕೆಲವರು ಆತ್ಮಹತ್ಯೆಗೂ ಪ್ರಯತ್ನಿಸಿರುವ ವರದಿಗಳಿವೆ. ಯಾವ ಕ್ಷಣದಲ್ಲಿ ಯಾವಾಗ ಮತ್ತೊಂದು ಪೆನ್ ಡ್ರೈವ್ ಹೊರ ಬರುತ್ತದೆಯೋ, ಅದರಲ್ಲಿ ಯಾವ ಮಹಿಳೆಯ ಖಾಸಗಿ ಚಿತ್ರಗಳು ಮತ್ತು ದೃಶ್ಯಗಳು ಬಿತ್ತರ ಗೊಳ್ಳಲಿವೆಯೋ ಎಂಬ ಆತಂಕ ಮೂಡಿದೆ. ಪ್ರಕರಣದ ಪ್ರಮುಖ ಆರೋಪಿ ಪ್ರಜ್ವಲ್ ರೇವಣ್ಣ ವಿರುದ್ಧ ಪ್ರಕರಣ ದಾಖಲಾಗಿದ್ದು ಅದರಲ್ಲಿ ಮೊದಲ ಆರೋಪಿಯಾಗಿರುವ ಎಚ್.ಡಿ. ರೇವಣ್ಣ ಅವರನ್ನು ಕೂಡಲೇ ಬಂಧಿಸಿ ವಿಚಾರಣೆ ನಡೆಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಜಂಟಿ ಕಾರ್ಯದರ್ಶಿ ಜೆ.ಚಂದ್ರಕುಮಾರಿ, ಜಿಲ್ಲಾಧ್ಯಕ್ಷೆ ತರಂಗಿಣಿ, ಜಿಲ್ಲಾ ಪ್ರಮುಖರಾದ ಈರಮ್ಮ, ರುದ್ರಮ್ಮ, ಮಂಗಮ್ಮ, ಹೇಮಾವತಿ, ಓಂಕಾರಮ್ಮ, ಹಾಲಂಭಾವಿ, ದಲಿತ ಸಂಘಟನೆಯ ಹುಸೇನಪ್ಪ ತಳವಾರ, ರಘು, ಬಂಡಾಯ ಸಾಹಿತ್ಯ ಸಂಘಟನೆಯ ಪಿ.ಆರ್.ವೆಂಕಟೇಶ್, ಅಬ್ದುಲ್ ಹೈ ತೋರಣಗಲ್, ಸಿಐಟಿಯು ಜಿಲ್ಲಾಧ್ಯಕ್ಷ ಜೆ.ಸತ್ಯಬಾಬು, ಪ್ರಗತಿ ಸೇವಾ ಸಂಘದ ಬಸವರಾಜ್, ವಿಜಯಲಕ್ಷ್ಮಿ, ಹೊನ್ನೂರಲಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಮುಖ್ಯಮಂತ್ರಿಗೆ ಬರೆದ ಮನವಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಲಾಯಿತು.