ಬೆಂಗಳೂರಿಗೆ ಬಂದ ಪ್ರಜ್ವಲ್‌!

| Published : May 31 2024, 02:15 AM IST / Updated: May 31 2024, 04:28 AM IST

prajwal revanna

ಸಾರಾಂಶ

ಜರ್ಮನಿಯಿಂದ ಹೊರಟು ಬೆಂಗ್ಳೂರಿಗೆ ಬಂದ ರೇಪ್‌ ಆರೋಪಿ ಸಂಸದ ಪ್ರಜ್ವಲ್‌, 1 ತಿಂಗಳು ಸತಾಯಿಸಿ ಆಗಮನ ಮಾಡಿದ್ದಾರೆ. ಏರ್‌ಪೋರ್ಟ್‌ನಲ್ಲೇ ಸಿಐಡಿ ತೆಕ್ಕೆಗೆ ತೆಗೆದುಕೊಂಡಿದೆ.

  ಬೆಂಗಳೂರು :  ಲೈಂಗಿಕ ದೌರ್ಜನ್ಯ ಆರೋಪ ಹೊತ್ತು ವಿದೇಶದಲ್ಲಿದ್ದ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ 34 ದಿನಗಳ ಅಜ್ಞಾತವಾಸಕ್ಕೆ ಶುಕ್ರವಾರ ಅಂತಿಮ ತೆರೆ ಬೀಳಲಿದ್ದು, ದೇವನಹ‍ಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ)ಕ್ಕೆ ತಡರಾತ್ರಿ ಅವರು ಬಂದಿಳಿದಿದ್ದಾರೆ.

ಗುರುವಾರ ಮಧ್ಯಾಹ್ನ 3.30ಕ್ಕೆ ಜರ್ಮನಿಯ ಮ್ಯೂನಿಕ್‌ ನಗರದಿಂದ ಬೆಂಗಳೂರಿಗೆ ಹೊರಟ ವಿಮಾನದಲ್ಲಿ ಪ್ರಜ್ವಲ್ ಪ್ರಯಾಣಿಸಿದ್ದು, ಕೆಐಎಗೆ ರಾತ್ರಿ 12.30ಕ್ಕೆ ವಿಮಾನ ಬಂದಿಳಿದಿದೆ.

ವಿಮಾನ ನಿಲ್ದಾಣದಲ್ಲೇ ಪ್ರಜ್ವಲ್ ಅವರನ್ನು ವಿಶೇಷ ತನಿಖಾ ದಳ (ಎಸ್‌ಐಟಿ) ವಶಕ್ಕೆ ಪಡೆಯಲು ಸಿದ್ಧತೆ ನಡೆಸಿದೆ. ನ್ಯಾಯಾಲಯದ ಮುಂದೆ ಶುಕ್ರವಾರ ಹಾಜರುಪಡಿಸಿ ಅವರನ್ನು ಬಂಧನಕ್ಕೊಳಪಡಿಸುವ ಸಾಧ್ಯತೆಗಳಿವೆ. ಈಗಾಗಲೇ ಪ್ರಜ್ವಲ್‌ ವಿರುದ್ಧ ಲುಕ್‌ಔಟ್‌ ನೋಟಿಸ್ ಹಾಗೂ ಬಂಧನ ವಾರಟ್ ಜಾರಿಯಲ್ಲಿವೆ. ಹೀಗಾಗಿ ಅವರನ್ನು ಎಸ್‌ಐಟಿ ವಶಕ್ಕೆ ಪಡೆಯಲಿದೆ ಎಂದು ತಿಳಿದುಬಂದಿದೆ.

ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಆರೋಪಗಳು ಕೇಳಿ ಬಂದ ಬಳಿಕ ಏ.26 ರಂದು ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಿ ರಾತ್ರಿಯೇ ಜರ್ಮನ್‌ ದೇಶಕ್ಕೆ ಪ್ರಜ್ವಲ್ ತೆರಳಿದ್ದರು. ಅಂದಿನಿಂದ ಸಾರ್ವಜನಿಕವಾಗಿ ಕಾಣಿಸಿಕೊಳ್ಳದೆ ವಿದೇಶದಲ್ಲೇ ಅಜ್ಞಾತವಾಗಿದ್ದರು.

ಪೆನ್‌ಡ್ರೈವ್ ತಂದ ಸಂಕಷ್ಟ:

ರಾಜ್ಯದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆಯ ಮತದಾನಕ್ಕೆ ಮೂರು ದಿನಗಳಿರುವಾಗ ಪ್ರಜ್ವಲ್ ರೇವಣ್ಣ ಅವರಿಗೆ ಸಂಬಂಧಿಸಿದ್ದು ಎನ್ನಲಾದ ಅಶ್ಲೀಲ ವಿಡಿಯೋಗಳು ತುಂಬಿದ್ದ ಪೆನ್‌ಡ್ರೈವ್ ಬಹಿರಂಗವಾಗಿ ಸಾರ್ವಜನಿಕ ವಲಯದಲ್ಲಿ ಸಂಚಲನ ಮೂಡಿಸಿತ್ತು. ಈ ಕೃತ್ಯದ ಬಗ್ಗೆ ಜನಾಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಎಚ್ಚೆತ್ತ ಸರ್ಕಾರ, ಲೈಂಗಿಕ ಹಗರಣದ ತನಿಖೆಗೆ ಏ.27ರಂದು ಎಸ್‌ಐಟಿ ರಚಿಸಿತ್ತು. ಆದರೆ ಪ್ರಜ್ವಲ್‌ ಮತದಾನ ಮಾಡಿ ಏಪ್ರಿಲ್‌ 26 ರಂದು ತಮ್ಮ ರಾಜತಾಂತ್ರಿಕ ಪಾಸ್‌ ಪೋರ್ಟ್ ಬಳಸಿಕೊಂಡು ಜರ್ಮನಿಯ ಮ್ಯೂನಿಕ್‌ ನಗರಕ್ಕೆ ಹೋಗಿದ್ದರು. ಇದಾದ ನಂತರ ಅವರ ವಿರುದ್ಧ ಮೂರು ಅತ್ಯಾಚಾರ ಪ್ರಕರಣಗಳು ದಾಖಲಾದವು.

ಈ ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ಅವರಿಗೆ ಎಸ್‌ಐಟಿ ನೋಟಿಸ್ ನೀಡಿತ್ತು. ಇದಕ್ಕೆ ತಮ್ಮ ವಕೀಲರ ಮೂಲಕ ಪ್ರತಿಕ್ರಿಯಿಸಿ 7 ದಿನ ಕಾಲಾವಕಾಶವನ್ನು ಪ್ರಜ್ವಲ್ ಕೋರಿದ್ದರು. ಆದರೆ ಈ ಸಮಯದೊಳಗೆ ಅವರು ಸ್ವದೇಶಕ್ಕೆ ಮರಳಲಿಲ್ಲ. ಈ ಬೆಳವಣಿಗೆ ಬಳಿಕ ನ್ಯಾಯಾಲಯವು ಸಂಸದರ ವಿರುದ್ಧ ಬಂಧನ ವಾರಂಟ್ ಜಾರಿಗೊಳಿಸಿತ್ತು.

ಈ ವಾರಂಟ್ ಹಿನ್ನೆಲೆಯಲ್ಲಿ ಪ್ರಜ್ವಲ್ ಅವರು ಹೊಂದಿದ್ದ ರಾಜತಾಂತ್ರಿಕ ಪಾಸ್ ಪೋರ್ಟ್‌ ರದ್ದತಿಗೆ ವಿದೇಶಾಂಗ ಇಲಾಖೆಗೆ ಪತ್ರ ಬರೆಯಿತು. ಈ ಪಾಸ್ ಪೋರ್ಟ್ ಕಳೆದುಕೊಳ್ಳುವ ಭೀತಿಗೊಳಗಾದ ಅವರು ಸ್ವದೇಶಕ್ಕೆ ಮರಳಲು ಮುಂದಾದರು. ಅಂತೆಯೇ ಪ್ರಜ್ವಲ್‌ ಅವರು ವಿದೇಶದ ಅಜ್ಞಾತ ಸ್ಥಳದಿಂದಲೇ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿ, ಮೇ.31 ರಂದು ಶುಕ್ರವಾರ 10 ಗಂಟೆಗೆ ಎಸ್‌ಐಟಿ ಮುಂದೆ ವಿಚಾರಣೆಗೆ ಹಾಜರಾಗುವುದಾಗಿ ಹೇಳಿದ್ದರು. ಅದರಂತೆ ತನಿಖೆ ಎದುರಿಸಲು ಗುರುವಾರ ಮಧ್ಯಾಹ್ನ ಜರ್ಮನಿಯಿಂದ ಅವರು ವಿಮಾನವೇರಿದ್ದಾರೆ ಎಂದು ತಿಳಿದು ಬಂದಿದೆ.

ಕೆಐಎನಲ್ಲಿ ಎಸ್‌ಐಟಿ ತಂಡ

ಸ್ವದೇಶಕ್ಕೆ ಆಗಮಿಸುವುದು ಖಚಿತವಾದ ಕೂಡಲೇ ಎಚ್ಚೆತ್ತ ಎಸ್‌ಐಟಿ, ಪ್ರಜ್ವಲ್‌ ಅವರನ್ನು ಕೆಐಎನಲ್ಲೇ ವಶಕ್ಕೆ ಪಡೆಯಲು ಸಿದ್ಧತೆ ನಡೆಸಿದೆ. ಈ ಸಂಬಂಧ ಕೆಐಎಗೆ 8 ಅಧಿಕಾರಿಗಳ ತಂಡ ಕಾದಿದ್ದು, ತಡರಾತ್ರಿ ಸಂಸದರನ್ನು ವಶಕ್ಕೆ ಪಡೆಯುವ ಸಾಧ್ಯತೆಗಳಿವೆ.ರಾತ್ರಿ 2 ಗಂಟೆಗೆ ಹೊರಕ್ಕೆ

ಜರ್ಮನಿಯಿಂದ ಆಗಮಿಸುವ ವಿಮಾನದಲ್ಲಿ ರಾತ್ರಿ 12.40 ಗಂಟೆಗೆ ಬೆಂಗಳೂರು ಏರ್‌ಪೋರ್ಟ್‌ಗೆ ಪ್ರಜ್ವಲ್ ಬಂದಿಳಿದಿದ್ದಾರೆ. ನಂತರ ಲುಕ್‌ ಔಟ್ ಹಾಗೂ ಬಂಧನ ವಾರಂಟ್ ಜಾರಿ ಹಿನ್ನೆಲೆಯಲ್ಲಿ ಅವರನ್ನು ಕೆಐಎ ವಲಸೆ ವಿಭಾಗದ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸಲಿದ್ದಾರೆ. ನಂತರ ತಾವು ವಶಕ್ಕೆ ಪಡೆದ ಬಗ್ಗೆ ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿದ ನಂತರ ಎಸ್‌ಐಟಿಗೆ ಪ್ರಜ್ವಲ್ ಅವರನ್ನು ಸುಪರ್ದಿಗೆ ನೀಡಬಹುದು. ಈ ಪ್ರಕ್ರಿಯೆ ಮುಗಿಸಿ ಕೆಐಎನಿಂದ ರಾತ್ರಿ 2 ಗಂಟೆ ಸುಮಾರಿಗೆ ಪ್ರಜ್ವಲ್ ಹೊರ ಬರಬಹುದು ಎಂದು ಮೂಲಗಳು ಹೇಳಿವೆ.