ಪ್ರಜ್ವಲ್‌ ಅರೆಸ್ಟ್ ಆಗುತ್ತಿದ್ದಂತೆ ಧ್ವನಿ ಟೆಸ್ಟ್‌ಗೆ ಎಸ್‌ಐಟಿ ಸಿದ್ಧತೆ?

| Published : May 29 2024, 01:34 AM IST

ಪ್ರಜ್ವಲ್‌ ಅರೆಸ್ಟ್ ಆಗುತ್ತಿದ್ದಂತೆ ಧ್ವನಿ ಟೆಸ್ಟ್‌ಗೆ ಎಸ್‌ಐಟಿ ಸಿದ್ಧತೆ?
Share this Article
  • FB
  • TW
  • Linkdin
  • Email

ಸಾರಾಂಶ

ಲೈಂಗಿಕ ದೌರ್ಜನ್ಯ ಆರೋಪ ಹೊತ್ತಿರುವ ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಅವರಿಗೆ ಪೆನ್‌ಡ್ರೈವ್‌ನಲ್ಲಿ ತುಂಬಿದ್ದ ಅಶ್ಲೀಲ ವಿಡಿಯೋಗಳಲ್ಲಿದೆ ಎನ್ನಲಾದ ‘ಪುರುಷ ದನಿ’ಯೊಂದು ತೀವ್ರ ಸಂಕಷ್ಟ ತಂದೊಡ್ಡುವ ಸಾಧ್ಯತೆಗಳಿವೆ.

ಗಿರೀಶ್ ಮಾದೇನಹಳ್ಳಿ

ಕನ್ನಡಪ್ರಭ ವಾರ್ತೆ ಬೆಂಗಳೂರು

ಲೈಂಗಿಕ ದೌರ್ಜನ್ಯ ಆರೋಪ ಹೊತ್ತಿರುವ ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಅವರಿಗೆ ಪೆನ್‌ಡ್ರೈವ್‌ನಲ್ಲಿ ತುಂಬಿದ್ದ ಅಶ್ಲೀಲ ವಿಡಿಯೋಗಳಲ್ಲಿದೆ ಎನ್ನಲಾದ ‘ಪುರುಷ ದನಿ’ಯೊಂದು ತೀವ್ರ ಸಂಕಷ್ಟ ತಂದೊಡ್ಡುವ ಸಾಧ್ಯತೆಗಳಿವೆ.

ಲೈಂಗಿಕ ಹಗರಣದಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಬಂಧಿಸಿದರೆ ಧ್ವನಿ ಪರೀಕ್ಷೆ ನಡೆಸಲು ವಿಶೇಷ ತನಿಖಾ ದಳ (ಎಸ್‌ಐಟಿ) ಅಲೋಚಿಸಿದೆ. ಈ ಧ್ವನಿ ಪರೀಕ್ಷೆಯಲ್ಲಿ ಪೆನ್‌ ಡ್ರೈವ್‌ನಲ್ಲಿರುವ ಅಶ್ಲೀಲ ವಿಡಿಯೋಗಳಲ್ಲಿ ಕೇಳಿ ಬರುವ ಪುರುಷ ದನಿಗೆ ಹೋಲಿಕೆಯಾದರೆ ಸಂಸದರ ವಿರುದ್ಧದ ಅತ್ಯಾಚಾರ ಕೃತ್ಯಗಳ ರುಜುವಾತಿಗೆ ಎಸ್‌ಐಟಿಗೆ ಮಹತ್ವದ ವೈದ್ಯಕೀಯ ಸಾಕ್ಷ್ಯ ಲಭಿಸಿದಂತಾಗುತ್ತದೆ. ಈ ಹಿನ್ನೆಲೆಯಲ್ಲಿ ಸಂಸದರ ಧ್ವನಿ ಪರೀಕ್ಷೆ ಬಹುಮುಖ್ಯವಾಗಿದೆ ಎಂದು ಮೂಲಗಳು ಹೇಳಿವೆ.

ಲೋಕಸಭಾ ಚುನಾವಣೆ ಮತದಾನಕ್ಕೂ ಮುನ್ನ ಹಾಸನದಲ್ಲಿ ಸಂಸದ ಪ್ರಜ್ವಲ್‌ ರೇವಣ್ಣ ಅವರಿಗೆ ಸಂಬಂಧಿಸಿದೆ ಎನ್ನಲಾದ ಅಶ್ಲೀಲ ವಿಡಿಯೋಗಳಿರುವ ಪೆನ್‌ಡ್ರೈವ್ ಭಾರಿ ಸಂಚಲನ ಮೂಡಿಸಿತ್ತು. ಈ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆಗಿಳಿದ ಎಸ್‌ಐಟಿ, ಈಗ ಪೆನ್‌ಡ್ರೈವ್‌ಗಳಲ್ಲಿ ತುಂಬಿದೆ ಎನ್ನಲಾದ ಅಶ್ಲೀಲ ವಿಡಿಯೋಗಳನ್ನು ವಶಕ್ಕೆ ಪಡೆದು ಪರಿಶೀಲಿಸಿದೆ. ಆ ಪೆನ್‌ಡ್ರೈವ್ ಅನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಸಹ ಕಳುಹಿಸಿದೆ. ಈಗ ಎಫ್‌ಎಸ್‌ಎಲ್ ವರದಿಗೆ ಎಸ್‌ಐಟಿ ಕಾಯುತ್ತಿದೆ.

ಕೆಲ ವಿಡಿಯೋಗಳಲ್ಲಿ ಪುರುಷ ದನಿ:

ಪೆನ್‌ಡ್ರೈವ್‌ಗಳಲ್ಲಿದ್ದ ಕೆಲ ಅಶ್ಲೀಲ ವಿಡಿಯೋಗಳಲ್ಲಿ ಪುರುಷ ಧ್ವನಿಯೊಂದು ಕೇಳುತ್ತದೆ. ಕೆಲವು ಸಂತ್ರಸ್ತೆಯರ ಜತೆ ವ್ಯಕ್ತಿ ಮಾತುಕತೆ ನಡೆಸಿದ ಸಂಭಾಷಣೆ ತುಣುಕುಗಳಿವೆ. ಆದರೆ ವಿಡಿಯೋಗಳಲ್ಲಿ ಆತನ ಮುಖ ಚಹರೆ ಪತ್ತೆಯಾಗುವುದಿಲ್ಲ. ಹೀಗಾಗಿ ಅಶ್ಲೀಲ ವಿಡಿಯೋಗಳಲ್ಲಿರುವ ಪುರುಷ ಧ್ವನಿಗೂ ಆರೋಪಿತ ಸಂಸದರ ದನಿಗೂ ಹೋಲಿಕೆ ಮಾಡಲಾಗುತ್ತದೆ. ಆಗ ಎರಡು ದನಿಗಳಲ್ಲಿ ಸಾಮ್ಯತೆ ಕಂಡು ಬಂದರೆ ಆರೋಪಗಳನ್ನು ಸಾಬೀತುಪಡಿಸಲು ವೈದ್ಯಕೀಯ ಪುರಾವೆ ಸಿಗುತ್ತದೆ. ಈ ವರದಿಯನ್ನು ನ್ಯಾಯಾಲಯಕ್ಕೂ ಸಹ ಸಲ್ಲಿಸಲಾಗುತ್ತದೆ ಎಂದು ಮೂಲಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿವೆ.

ಲೈಂಗಿಕ ದೌರ್ಜನ್ಯ ಪ್ರಕರಣ ಬಳಿಕ ವಿದೇಶದಲ್ಲಿ ಅಜ್ಞಾತವಾಗಿದ್ದ ಸಂಸದ ಪ್ರಜ್ವಲ್‌ ರೇವಣ್ಣ ಅ‍ವರು, ತಾವು ಮೇ 31 ರಂದು ಸ್ವದೇಶಕ್ಕೆ ಬಂದು ಎಸ್‌ಐಟಿ ಮುಂದೆ ವಿಚಾರಣೆಗೆ ಸ್ವಯಂ ಹಾಜರಾಗುವುದಾಗಿ ವಿಡಿಯೋ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಬೆನ್ನಲ್ಲೇ ಈಗ ಪ್ರಜ್ವಲ್ ರವರ ವಿರುದ್ಧ ಮುಂದಿನ ತನಿಖಾ ಪ್ರಕ್ರಿಯೆಗಳ ಸಂಬಂಧ ಎಸ್‌ಐಟಿ ಸಹ ಸಿದ್ದತೆ ನಡೆಸಿದೆ.

ಇತರೆ ವೈದ್ಯಕೀಯ ಪರೀಕ್ಷೆಗಳು ಸಾಧ್ಯತೆ?

ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಧ್ವನಿ ಪರೀಕ್ಷೆ ಮಾತ್ರವಲ್ಲದೆ ಕೆಲವು ವೈದ್ಯಕೀಯ ತಪಾಸಣೆಗಳನ್ನು ಸಹ ಪ್ರಜ್ವಲ್ ರೇವಣ್ಣ ಅವರು ಎದುರಿಸಬೇಕಾಗುತ್ತದೆ ಎಂದು ತಿಳಿದು ಬಂದಿದೆ. ಇನ್ನು ಪ್ರಜ್ವಲ್ ಅವರನ್ನು ಬಂಧನವಾದರೆ ಬೌರಿಂಗ್ ಆಸ್ಪತ್ರೆ ಅಥವಾ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸುವ ಸಾಧ್ಯತೆಗಳಿವೆ.