ಬಂಕಾಪುರದ ದರ್ಗಾ ತೆರವಿಗೆ ಮುತಾಲಿಕ ಒತ್ತಾಯ

| Published : Jul 19 2024, 12:48 AM IST

ಸಾರಾಂಶ

ಬಂಕಾಪುರದಲ್ಲಿ ರಸ್ತೆ ಮಧ್ಯೆ ಇರುವ ದರ್ಗಾ ತೆರವು ಮಾಡಬೇಕು, ಆತ್ಮಹತ್ಯೆ ಮಾಡಿಕೊಂಡ ಹಿರೇಕೆರೂರು ತಾಲೂಕಿನ ದೂದಿಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿ ಅರ್ಚನಾ ಗೌಡಣ್ಣನವರ ಕುಟುಂಬಕ್ಕೆ ₹೨೫ ಲಕ್ಷ ಪರಿಹಾರ ಕೊಡಬೇಕು ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ ಆಗ್ರಹಿಸಿದ್ದಾರೆ.

ಹಾವೇರಿ: ಬಂಕಾಪುರದಲ್ಲಿ ರಸ್ತೆ ಮಧ್ಯೆ ಇರುವ ದರ್ಗಾ ತೆರವು ಮಾಡಬೇಕು, ಆತ್ಮಹತ್ಯೆ ಮಾಡಿಕೊಂಡ ಹಿರೇಕೆರೂರು ತಾಲೂಕಿನ ದೂದಿಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿ ಅರ್ಚನಾ ಗೌಡಣ್ಣನವರ ಕುಟುಂಬಕ್ಕೆ ₹೨೫ ಲಕ್ಷ ಪರಿಹಾರ ಕೊಡಬೇಕು ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ ಆಗ್ರಹಿಸಿದರು.

ಜಿಲ್ಲಾಧಿಕಾರಿ ಕಚೇರಿ ಎದುರು ತಮ್ಮ ಕಾರ್ಯಕರ್ತರೊಂದಿಗೆ ಗುರುವಾರ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಅವರಿಗೆ ಮನವಿ ಸಲ್ಲಿಸಿದ ಅವರು, ೧೭ ದೇವಸ್ಥಾನ ತೆರವುಗೊಳಿಸಿ ಆ ದರ್ಗಾ ಯಾಕೆ ತೆರವುಗೊಳಿಸಿಲ್ಲ? ಬಂಕಾಪುರದ ಚಮನಶ್ಯಾಮಲಿ ದರ್ಗಾ ತೆರವು ಮಾಡಲೇಬೇಕು. ರಾಜ್ಯ ಸರ್ಕಾರ ಒಂದು ಕೋಮಿನ ಜನರ ಮನವೊಲಿಕೆಗಾಗಿ ಕೆಲಸ ಮಾಡುತ್ತಿದೆ. ಸೌಹಾರ್ದತೆ ಎಂಬುದು ಕೇವಲ ಪುಸ್ತಕದಲ್ಲಿ ಮಾತ್ರವೇ ಉಳಿದುಕೊಂಡಿದೆ. ಇದರಲ್ಲಿ ರಾಜಕೀಯ ಮಾಡದೇ, ಸೌಹಾರ್ದತೆಯಿಂದ ದರ್ಗಾ ತೆರವು ಮಾಡಬೇಕು. ಇಲ್ಲದೆ ಹೋದಲ್ಲಿ ಹಿಂದೂಗಳೆಲ್ಲ ಸೇರಿ ಬುಲ್ಡೋಜರ್ ತಂದು ದರ್ಗಾ ತೆರವು ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ವಾಲ್ಮೀಕಿ ಸಮುದಾಯಕ್ಕೆ ಸೇರಿದ ವಸತಿ ಶಾಲೆಯ ವಿದ್ಯಾರ್ಥಿನಿ ಅರ್ಚನಾ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಒಬ್ಬ ಮುಸ್ಲಿಂ ಶಿಕ್ಷಕನ ಕುಟುಂಬದ ಕಿರುಕುಳ ಎಂದು ಬರೆದು ಸಾವನ್ನಪ್ಪಿರುವುದು ದುರದೃಷ್ಟಕರ. ಮಾಧ್ಯಮದಲ್ಲಿ ಈ ಕುರಿತು ವರದಿ ಬಂದ ಬಳಿಕ ಪೊಲೀಸ್ ಪ್ರಕರಣ ದಾಖಲು ಮಾಡಿಕೊಂಡಿರುವುದು ನಾಚಿಕೆಗೇಡಿತನದ ಕೆಲಸ ಎಂದು ಹರಿಹಾಯ್ದ ಅವರು, ರಾಜ್ಯ ಸರ್ಕಾರ ಆತ್ಮಹತ್ಯೆ ಮಾಡಿಕೊಂಡ ವಸತಿ ಶಾಲೆ ವಿದ್ಯಾರ್ಥಿನಿ ಅರ್ಚನಾ ಕುಟುಂಬಕ್ಕೆ ₹೨೫ ಲಕ್ಷ ಪರಿಹಾರ ನೀಡುವಂತೆ ಒತ್ತಾಯಿಸಿದರು.

ಇದಕ್ಕೂ ಮುನ್ನ ಹಿರೇಕೆರೂರು ತಾಲೂಕಿನ ದೂದಿಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿ ಅರ್ಚನಾ ಗೌಡಣ್ಣನವರ ಅವರ ಆಲದಕಟ್ಟಿ ಗ್ರಾಮದ ಮನೆಗೆ ಭೇಟಿ ನೀಡಿ ಅವರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ ಅವರು, ಅರ್ಚನಾ ಸಾವಿಗೆ ನ್ಯಾಯ ಸಿಗುವವರೆಗೂ ಹೋರಾಟ ಮಾಡುವುದಾಗಿ ಭರವಸೆ ನೀಡಿದರು.ಕುಟುಂಬ ರಾಜಕಾರಣಕ್ಕೆ ಅವಕಾಶ ಬೇಡ: ಸಂಸದ ಬೊಮ್ಮಾಯಿ ಕುಟುಂಬ ರಾಜಕಾರಣ ನಡೆಸುತ್ತಿದ್ದಾರೆ. ಶಿಗ್ಗಾಂವಿ ಉಪಚುನಾವಣೆಯಲ್ಲಿ ಕುಟುಂಬ ರಾಜಕಾರಣಕ್ಕೆ ಅವಕಾಶ ನೀಡಬಾರದು. ಬಿಜೆಪಿಯ ಒಬ್ಬ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ನೀಡಲಿ. ಜಿಲ್ಲೆಯಲ್ಲಿ ಪಕ್ಷಕ್ಕಾಗಿ ದುಡಿದ ಸಾಕಷ್ಟು ಸಾಮಾನ್ಯ ಕಾರ್ಯಕರ್ತರು ಇದ್ದಾರೆ. ಒಂದು ವೇಳೆ ಬೊಮ್ಮಾಯಿ ಕುಟುಂಬಸ್ಥರಿಗೆ ಟಿಕೆಟ್ ನೀಡಿದಲ್ಲಿ ಅದು ಕುಟುಂಬ ರಾಜಕಾರಣಕ್ಕೆ ಅವಕಾಶ ನೀಡಿದಂತೆ. ಒಂದು ವೇಳೆ ಹಾಗೆ ಮಾಡಿದಲ್ಲಿ, ಶಿಗ್ಗಾಂವಿ ಉಪಚುನಾವಣೆಯಲ್ಲಿ ನಾವೂ ಒಬ್ಬ ಹಿಂದೂ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಬೇಕಾಗುತ್ತದೆ ಎಂದು ವಾಗ್ದಾಳಿ ನಡೆಸಿದರು.