ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ। ಎಂ.ಎ.ಸಲೀಂ ಅವರ ಅಧಿಕಾರಾವಧಿ ವಿಸ್ತರಣೆ ಬೆನ್ನಲ್ಲೇ ರಾಜ್ಯ ಅಪರಾಧ ತನಿಖಾ ಇಲಾಖೆಯ (ಸಿಐಡಿ) ಮುಖ್ಯಸ್ಥ ಹುದ್ದೆ ಯಾರಿಗೆ ಸಿಗಲಿದೆ ಎಂಬ ಚರ್ಚೆ ಖಾಕಿ ವಲಯದಲ್ಲಿ ಶುರುವಾಗಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ। ಎಂ.ಎ.ಸಲೀಂ ಅವರ ಅಧಿಕಾರಾವಧಿ ವಿಸ್ತರಣೆ ಬೆನ್ನಲ್ಲೇ ರಾಜ್ಯ ಅಪರಾಧ ತನಿಖಾ ಇಲಾಖೆಯ (ಸಿಐಡಿ) ಮುಖ್ಯಸ್ಥ ಹುದ್ದೆ ಯಾರಿಗೆ ಸಿಗಲಿದೆ ಎಂಬ ಚರ್ಚೆ ಖಾಕಿ ವಲಯದಲ್ಲಿ ಶುರುವಾಗಿದೆ.ಡಿಜಿ-ಐಜಿಪಿ ಹುದ್ದೆ ಜತೆ ಸಲೀಂ ಅವರು ಸಿಐಡಿ ಪ್ರಭಾರಿ ಡಿಜಿಪಿಯಾಗಿ ಒಂದು ವರ್ಷದಿಂದ ಆಡಳಿತ ನಡೆಸುತ್ತಿದ್ದಾರೆ. ರಾಜ್ಯದಲ್ಲಿ ಡಿಜಿ-ಐಜಿಪಿ ಬಳಿಕ ಮಹತ್ವದ ಹಾಗೂ ಅಷ್ಟೇ ಪ್ರಭಾವಿಯಾದ ಸ್ಥಾನ ಸಿಐಡಿ ಮುಖ್ಯಸ್ಥ ಪದವಿ ಆಗಿದೆ. ಇನ್ನು ಪೊಲೀಸ್ ಇಲಾಖೆ ಇತಿಹಾಸದಲ್ಲಿ ಪ್ರಥಮ ಬಾರಿ ಆ ಡಿಜಿಪಿ ಹುದ್ದೆಗಳನ್ನು ಒಬ್ಬರೇ ನಿಭಾಯಿಸುತ್ತಿದ್ದಾರೆ. ಹೀಗಾಗಿ ಸಿಐಡಿಗೆ ನೂತನ ಸಾರಥಿ ನೇಮಿಸುವ ಸಂಬಂಧ ಸರ್ಕಾರದ ಮಟ್ಟದಲ್ಲಿ ಚರ್ಚೆಗಳು ಹಾಗೂ ಲಾಬಿಗಳು ಸಹ ನಡೆದಿವೆ. ಆದರೆ ಒಂದು ವರ್ಷದಿಂದ ಐವರು ಡಿಜಿಪಿಗಳ ಪೈಕಿ ಒಬ್ಬರನ್ನು ಆರಿಸಿಕೊಳ್ಳಲು ಸರ್ಕಾರಕ್ಕೆ ಕಗ್ಗಂಟಾಗಿ ಪರಿಣಮಿಸಿದೆ.
ವಿಸ್ತರಣೆ ಡಿಜಿ-ಐಜಿಪಿ ಹುದ್ದೆ ಮಾತ್ರ?:ಇದೇ ವರ್ಷದ ಜೂನ್ ತಿಂಗಳಲ್ಲಿ ಡಿಜಿ-ಐಜಿಪಿ ಸಲೀಂ ಅವರು ನಿವೃತ್ತರಾಗಲಿದ್ದರು. ಆದರೆ ಈಗ ಅವರಿಗೆ ಒಂದು ವರ್ಷ ಅಧಿಕಾರಾವಧಿ ವಿಸ್ತರಿಸಿ ಸರ್ಕಾರ ಗುರುವಾರ ಆದೇಶಿಸಿದೆ. ಆದರೆ ನಿವೃತ್ತಿ ಬಳಿಕವೂ ಅಧಿಕಾರ ವಿಸ್ತರಣೆಯಾದರೆ ಅದು ಒಂದು ಹುದ್ದೆಗೆ ಮಾತ್ರ ಅನ್ವಯವಾಗಲಿದೆ ಎಂಬ ನಿಯಮವಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಂದರೆ ನಿವೃತ್ತಿ ವೇಳೆ ಯಾವ ಹುದ್ದೆಯಲ್ಲಿ ಅಧಿಕಾರಿ ಇರುತ್ತಾರೆಯೋ ಆ ಹುದ್ದೆ ಅಧಿಕಾರ ಮಾತ್ರ ಮುಂದುವರೆಯಲಿದೆ. ಅಂತೆಯೇ ಡಿಜಿ-ಐಜಿಪಿ ಸ್ಥಾನದಲ್ಲಿ ಸಲೀಂ ಅವರಿಗೆ ಅಧಿಕಾರ ವಿಸ್ತರಣೆಯಾಗಿದೆ. ಆದರೆ ಅವರು ಪ್ರಭಾರಿ ಕಾರ್ಯಭಾರ ಹೊಂದಿರುವ ಸಿಐಡಿ ಡಿಜಿಪಿ ಹುದ್ದೆಗೆ ಅಧಿಕಾರ ವಿಸ್ತರಣೆ ಅನ್ವಯ ಆಗುವುದಿಲ್ಲ. ಹೀಗಾಗಿ ಸಿಐಡಿಗೆ ಕಾಯಂ ಡಿಜಿಪಿ ಅವರನ್ನು ಸರ್ಕಾರ ನೇಮಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಸಿಐಡಿ ಮುಖ್ಯಸ್ಥ ಯಾರಿಗೆ ಸಿಗಲಿದೆ ಎನ್ನುವ ತರ್ಕ ನಡೆದಿದೆ.ಯಾರಿಗೆ ಸಿಗಲಿದೆ ಹುದ್ದೆ?:
ರಾಜ್ಯದಲ್ಲಿ ಡಿಜಿ-ಐಜಿಪಿ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಹಾಗೂ ಸಿಐಡಿ ಈ ಮೂವರು ಡಿಜಿಪಿ ಕೇಡರ್ ಹುದ್ದೆಗಳಾಗಿವೆ. ಈ ಮೂರು ಹುದ್ದೆಗಳಿಗೆ ಪರ್ಯಾಯವಾಗಿ ಮೂರು ಡಿಜಿಪಿಗಳು ಹುದ್ದೆಗಳು ಸೃಷ್ಟಿಸಲಾಗಿದೆ. ಹೀಗಾಗಿ ರಾಜ್ಯದಲ್ಲಿ ಡಿಜಿ-ಐಜಿಪಿ ಸೇರಿ ಒಟ್ಟು ಆರು ಮಂದಿ ಡಿಜಿಪಿಗಳಿದ್ದಾರೆ. ಈಗ ಒಬ್ಬರು ಹೆಚ್ಚುವರಿ ಡಿಜಿಪಿ ಸಹ ಇದ್ದಾರೆ.ಸಾಮಾನ್ಯವಾಗಿ ಡಿಜಿ-ಐಜಿಪಿ ಬಳಿಕ ಸೇವಾ ಹಿರಿತನ ಹೊಂದಿರುವ ಅಧಿಕಾರಿಗೆ ಸಿಐಡಿ ಮುಖ್ಯಸ್ಥ ಹುದ್ದೆ ಸಿಗುತ್ತಿತ್ತು. ರಾಜ್ಯ ಪೊಲೀಸ್ ಮಹಾ ದಂಡನಾಯಕರಾಗುವ ಮುನ್ನ ಸಿಐಡಿಯಲ್ಲಿ ಸಲೀಂ ಅವರು ಕಾರ್ಯನಿರ್ವಹಿಸಿದ್ದರು. ಸೇವಾ ಹಿರಿತನ ಆಧಾರದ ಮೇರೆಗೆ ಡಿಜಿಪಿಗಳಾದ ಪ್ರಶಾಂತ್ ಕುಮಾರ್ ಠಾಕೂರ್, ಪ್ರಣವ್ ಮೊಹಂತಿ, ಅಲೋಕ್ ಕುಮಾರ್, ಉಮೇಶ್ ಕುಮಾರ್ ಹಾಗೂ ಅರುಣ್ ಚಕ್ರವರ್ತಿ ಇದ್ದಾರೆ. ಇವರ ಪೈಕಿ ಸೈಬರ್ ಕಮಾಂಡ್ ಡಿಜಿಪಿ ಪ್ರಣವ್ ಮೊಹಂತಿ ಹಾಗೂ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಡಿಜಿಪಿ ಉಮೇಶ್ ಕುಮಾರ್ ಹೆಸರು ಮುಂಚೂಣಿಯಲ್ಲಿವೆ.
ಸಿಐಡಿ ಎಡಿಜಿಪಿ ಹುದ್ದೆಯಲ್ಲಿದ್ದಾಗ ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣದ ತನಿಖಾ ತಂಡದ ಮುಂದಾಳತ್ವವನ್ನು ಉಮೇಶ್ ಕುಮಾರ್ ವಹಿಸಿದ್ದರು. ಹಿಂದುಳಿದ ವರ್ಗಕ್ಕೆ ಸೇರಿದ ಬಿಹಾರ ಮೂಲದ ಅವರಿಗೆ ಕೆಲ ಹಿರಿಯ ಅಧಿಕಾರಿಗಳು ಒಲವು ತೋರಿದ್ದಾರೆ. ಆದರೆ ಬಿಹಾರದ ರಾಜಕೀಯವು ಉಮೇಶ್ ಕುಮಾರ್ ಅವರಿಗೆ ಅಡ್ಡಿಯಾಗಿದೆ. ಇನ್ನು ಪ್ರಣವ್ ಮೊಹಂತಿ ಅವರಿಗೆ ಐಪಿಎಸ್ ವಲಯಕ್ಕಿಂತ ಐಎಎಸ್ ವರ್ಗ ಬೆಂಬಲಕ್ಕೆ ನಿಂತಿದೆ ಎಂದು ತಿಳಿದು ಬಂದಿದೆ.-ಬಾಕ್ಸ್-
ಸಿಐಡಿ ಯಾಕೆ ಮುಖ್ಯ?ಕೇಂದ್ರದಲ್ಲಿ ಸಿಬಿಐನಂತೆ ರಾಜ್ಯದಲ್ಲಿ ಸ್ವತಂತ್ರ ತನಿಖಾ ಇಲಾಖೆಯಾದ ಸಿಐಡಿ ರಾಜ್ಯ ಸರ್ಕಾರದ ಪಾಲಿಗೆ ಬಹುಮುಖ್ಯವಾಗಿದೆ. ತನ್ನ ನಂಬಿಕಸ್ಥ ಅಧಿಕಾರಿಯನ್ನೇ ಸಿಐಡಿ ಮುಖ್ಯಸ್ಥ ಹುದ್ದೆಗೆ ಸರ್ಕಾರ ನೇಮಿಸುತ್ತದೆ. ತನಿಖಾ ಏಜೆನ್ಸಿ ಕೈಯಲ್ಲಿದ್ದರೆ ರಾಜಕೀಯವಾಗಿ ಪ್ರಮುಖಾಸ್ತ್ರವಾಗಲಿದೆ ಎಂಬ ರಾಜಕೀಯ ಲೆಕ್ಕಾಚಾರಗಳಿವೆ.
ಸ್ವತಂತ್ರ ಎಡಿಜಿಪಿ ನೇಮಕ?ಡಿಜಿಪಿ ಬದಲಿಗೆ ಎಡಿಜಿಪಿ ಅವರಿಗೆ ಸ್ವತಂತ್ರ ನಿರ್ವಹಣೆ ಅಧಿಕಾರ ನೀಡುವ ಬಗ್ಗೆ ಸರ್ಕಾರ ಮಟ್ಟದಲ್ಲಿ ಚರ್ಚೆ ನಡೆದಿದೆ ಎನ್ನಲಾಗಿದೆ. ಆದರೆ ಸಿಐಡಿಯಲ್ಲಿ ಎರಡು ಎಡಿಜಿಪಿ ಹುದ್ದೆಗಳಿವೆ. ಆಗ ಮತ್ತೊಂದು ರೀತಿಯ ಸಮಸ್ಯೆ ಸೃಷ್ಟಿಯಾಗಬಹುದು.
