ಶೋಷಿತರ ಜನರ ಸಂಕಷ್ಟಗಳಿಗೆ ಸ್ಪಂದಿಸಿದ್ದ ಪ್ರಸಾದ್

| Published : May 15 2024, 01:34 AM IST

ಶೋಷಿತರ ಜನರ ಸಂಕಷ್ಟಗಳಿಗೆ ಸ್ಪಂದಿಸಿದ್ದ ಪ್ರಸಾದ್
Share this Article
  • FB
  • TW
  • Linkdin
  • Email

ಸಾರಾಂಶ

ಹೋರಾಟದ ಹಿನ್ನೆಲೆಯಿಂದ ಬಂದ ಸಂಸದ ವಿ. ಶ್ರೀನಿವಾಸಪ್ರಸಾದ್ ಬುದ್ದ, ಬಸವ, ಅಂಬೇಡ್ಕರ್ ಅವರ ಹಾದಿಯಲ್ಲಿ ಸಾಗುವ ಮೂಲಕ ಜನರ ಶ್ರೇಯೋಭಿವೃದ್ಧಿಗೆ ದುಡಿದವರು ಎಂದು ಹಿರಿಯ ಸಾಹಿತಿ ಡಾ.ಮೂಡ್ನಾಕೂಡು ಚಿನ್ನಸ್ವಾಮಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಹೋರಾಟದ ಹಿನ್ನೆಲೆಯಿಂದ ಬಂದ ಸಂಸದ ವಿ. ಶ್ರೀನಿವಾಸಪ್ರಸಾದ್ ಬುದ್ದ, ಬಸವ, ಅಂಬೇಡ್ಕರ್ ಅವರ ಹಾದಿಯಲ್ಲಿ ಸಾಗುವ ಮೂಲಕ ಜನರ ಶ್ರೇಯೋಭಿವೃದ್ಧಿಗೆ ದುಡಿದವರು ಎಂದು ಹಿರಿಯ ಸಾಹಿತಿ ಡಾ. ಮೂಡ್ನಾಕೂಡು ಚಿನ್ನಸ್ವಾಮಿ ತಿಳಿಸಿದರು.ನಗರದ ಡಾ. ರಾಜ್‌ಕುಮಾರ್ ಕಲಾಮಂದಿರದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಸಂಘಗಳ ಒಕ್ಕೂಟ ಹಾಗೂ ವಿ. ಶ್ರೀನಿವಾಸಪ್ರಸಾದ್ ಅಭಿಮಾನಿಗಳ ಬಳಗದ ವತಿಯಿಂದ ನಡೆದ ಸ್ವಾಭಿಮಾನಿ ಚಕ್ರವರ್ತಿ ವಿ. ಶ್ರೀನಿವಾಸಪ್ರಸಾದ್ ನಿಮಗಿದೋ ನಮ್ಮ ನಮನ ಕಾರ್ಯಕ್ರಮವನ್ನು ಉದ್ಘಾಟಿಸಿ, ಪುಷ್ಪಾರ್ಚನೆ ಮಾಡಿ ಮಾತನಾಡಿದರು.

ಚಳವಳಿ ಮೂಲಕ ರಾಜಕೀಯಕ್ಕೆ ಪ್ರವೇಶ: ೫೦ ವರ್ಷಗಳ ಸುದೀರ್ಘ ರಾಜಕಾರಣದಲ್ಲಿ ಒಂದು ಕಪ್ಪು ಚುಕ್ಕಿ ಇಲ್ಲದೇ ಸ್ವಾಭಿಮಾನದಿಂದ ರಾಜಕಾರಣ ಮಾಡಿದ ಧೀಮಂತ ನಾಯಕ. ಸದಾ ಜನರ ಹಿತಕ್ಕಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟು ಹೋರಾಟ ಮಾಡಿದರು. ವಿದ್ಯಾರ್ಥಿ ಚಳವಳಿಯ ಮೂಲಕ ರಾಜಕಾರಣಕ್ಕೆ ಬಂದ ಪ್ರಸಾದ್ ಎಂದು ಸಹ ವ್ಯವಸ್ಥೆಗೆ ರಾಜಿಯಾಗಲಿಲ್ಲ.ನೇರ ಹಾಗೂ ನಿಷ್ಠುರವಾದಿಯಾಗಿದ್ದ ಪ್ರಸಾದ್, ಬುದ್ದ, ಬಸವ ಹಾಗೂ ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ಅವರ ಹಾದಿಯಲ್ಲಿ ಸಾಗುವ ಮೂಲಕ ಜನನಾಯಕರಾಗಿ ಬೆಳೆದರು. ಎಲ್ಲಾ ವರ್ಗಗಳ ಸಮುದಾಯದ ವಿಶ್ವಾಸದೊಂದಿಗೆ ಸಮಾನತೆಗಾಗಿ ಶ್ರಮಿಸಿದ್ದರು. ಅವರು ಬಿಜೆಪಿಗೆ ಸೇರಿದರು ಸಹ ತಮ್ಮ ಸ್ವಾಭಿಮಾನವನ್ನು ಬಿಟ್ಟು ಕೊಡಲಿಲ್ಲ. ಇದಕ್ಕೆ ಅನೇಕ ನಿರ್ದಶನಗಳು ನಮ್ಮ ಮುಂದಿವೆ. ಅನ್ಯಾಯ ಹಾಗೂ ಶೋಷಣೆಗಳು ಕಂಡಾಗ ನೇರವಾಗಿ ಮಾತನಾಡುತ್ತಿದ್ದರು.ವರೊಂದಿಗೆ ಬೆರೆತ ಕ್ಷಣಗಳು ಅವಿಸ್ಮರಣೀಯ: ನಿವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಡಾ. ಆರ್. ರಾಜು ಮಾತನಾಡಿ, ಸಂಸದ ವಿ. ಶ್ರೀನಿವಾಸಪ್ರಸಾದ್ ೫೦ ವರ್ಷಗಳ ರಾಜಕಾರಣದಲ್ಲಿ ಅಭಿವೃದ್ದಿ ಪರ ಹಾಗೂ ಜನರ ಪರವಾಗಿ ಚಿಂತನೆ ಮಾಡುತ್ತಿದ್ದರು. ಅವರೊಂದಿಗಿನ ನನ್ನ ಒಡನಾಟ ೩೦ ವರ್ಷಗಳಿಗೂ ಹೆಚ್ಚು ಆಗಿತ್ತು. ನಾನು ಅಧಿಕಾರಿಯಾಗಿ ಅವರೊಂದಿಗೆ ಬೆರೆತ ಕ್ಷಣಗಳು ಅವಿಸ್ಮರಣೀಯ ಎಂದರು. ಸಂಸದರಾಗಿ ಹಾಡಿಗಳಿಗೆ ಒಮ್ಮೆ ಭೇಟಿ ನೀಡಿ ಅಲ್ಲಿನ ಜನರ ಸ್ಥಿತಿಗತಿಗಳನ್ನು ಅರಿತು ಆ ತಕ್ಷಣವೇ ನನ್ನೊಂದಿಗೆ ಮಾತನಾಡಿ, ಹಾಡಿ ಮತ್ತು ಪೋಡಿಗಳಲ್ಲಿರುವ ಹಾಡಿ ಜನರಿಗೆ ತಕ್ಷಣದಿಂದಲೇ ಪಡಿತರ ಕೊಡಿಸುವಲ್ಲಿ ಯಶಸ್ವಿಯಾಗಿದ್ದರು. ಅದೇ ರೀತಿ ಕೇರಳ ಮಾರ್ಗದ ಬಂಡೀಪುರ ರಸ್ತೆಯನ್ನು ರಾತ್ರಿ ಸಂಚಾರ ಬಂದ್ ಮಾಡಿದ್ದಾಗ ನನ್ನ ಮೇಲೆ ಬಹಳಷ್ಟು ಒತ್ತಡ ಬಂದವು. ಸ್ವತಃ ಸಿಎಂಗಳೇ ಇದರ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದರು. ನನ್ನ ವಿರುದ್ಧ ಕಿಡಿಕಾರಿದ್ದರು. ಈ ವಿಚಾರವನ್ನು ಪ್ರಸಾದ್ ಅವರ ಗಮನಕ್ಕೆ ತಂದಿದ್ದೆ. ನಾನು ಅವರೊಂದಿಗೆ ಮಾತು ಮುಗಿಸಿ ಹೊರ ಹೋಗುವರಷ್ಟಲ್ಲಿಯೇ ಸಂಬಂಧ ಪಟ್ಟರವರಿಗೆ ಫೋನ್ ನಲ್ಲಿ ಮಾತನಾಡಿ, ರಾಜು ನಮ್ಮವ. ಆತನ ವಿರುದ್ಧ ಕ್ರಮವಾದರೆ, ಕೆಟ್ಟ ಪರಿಣಾಮವನ್ನು ನೀವು ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ನೀಡಿದ್ದರು. ಸಮಾಜದ ಅಧಿಕಾರಿಗಳ ಪರವಾಗಿ ಬಹಳ ಕಾಳಜಿ ವಹಿಸಿದ್ದರು ಎಂದು ಸ್ಮರಿಸಿದರು.

ಅವರಂತೆ ಎರಡು ಜಿಲ್ಲೆಗಳಲ್ಲಿ ಪ್ರಬುದ್ಧ ನಾಯಕರನ್ನು ನಾವು ಬೆಳೆಸುವ ಅವಶ್ಯಕತೆ ಇದೆ. ಇಂಥ ಎಲ್ಲಾ ಗುಣವನ್ನು ಹೊಂದಿರುವ ನಾಯಕರನ್ನು ಗುರುತಿಸಿ ಅವರಿಗೆ ಶಕ್ತಿ ತುಂಬುವ ಕೆಲಸವನ್ನು ಈ ವೇದಿಕೆಯಿಂದಲೇ ಮಾಡಬೇಕು ಎಂದು ರಾಜು ಕಿವಿಮಾತು ಹೇಳಿದರು.ಚಾಮರಾಜನಗರ ರಾಜಕೀಯವಾಗಿ ಶಕ್ತಿ ನೀಡಿತ್ತು: ವಿ. ಶ್ರೀನಿವಾಪ್ರಸಾದ್ ಅವರ ಪುತ್ರಿ ಪ್ರತಿಮಾ ಪ್ರಸಾದ್ ಮಾತನಾಡಿ, ಚಾಮರಾಜನಗರ ಜಿಲ್ಲೆ ನನ್ನ ತಂದೆಗೆ ರಾಜಕೀಯ ವಾಗಿ ಶಕ್ತಿ ನೀಡಿದ ಜಿಲ್ಲೆ. ಅವರಿಗೆ ಚಾಮರಾಜನಗರ ಜಿಲ್ಲೆಯ ಜನರ ಬಗ್ಗೆ ಅಪಾರವಾದ ಪ್ರೀತಿ ಇತ್ತು. ಅವರ ಪಾರ್ಥಿವ ಶರೀರವನ್ನು ಚಾಮನಗರಕ್ಕೆ ತರಬೇಕಾಗಿತ್ತು. ವೈದ್ಯಕೀಯ ಕಾರಣದಿಂದಾಗಿ ಇದು ಸಾಧ್ಯವಾಗಲಿಲ್ಲ. ನಮ್ಮ ಕುಟುಂಬದ ಪರವಾಗಿ ನಿಮ್ಮೆಲ್ಲರ ಕ್ಷಮೆ ಕೋರುತ್ತೇನೆ. ಮುಂದೆಯು ಸಹ ನಿಮ್ಮೆಲ್ಲರ ಪ್ರೀತಿ ವಿಶ್ವಾಸ ನಮ್ಮ ಮನೆತನದ ಮೇಲಿರಲಿ. ನಮ್ಮ ತಂದೆಯವರ ಹಾದಿಯಲ್ಲಿ ನಾನು ಸಾಗಬೇಕೆಂದುಕೊಂಡಿದ್ದೇನೆ. ನಿಮ್ಮೆಲ್ಲರ ಆರ್ಶೀವಾದ ನಮ್ಮ ಮೇಲಿರಲಿ ಎಂದು ಭಾವುಕರಾದರು.ಮೈಸೂರಿನ ಕಾಲೇಜು ಅಭಿವೃದ್ದಿ ಪರಿಷತ್‌ನ ನಿರ್ದೇಶಕ ಪ್ರೊ.ಡಿ. ಆನಂದ್ ಮಾತನಾಡಿದರು. ಕೊಳ್ಳೇಗಾಲದ ಚೇತವನ ಭೌದ್ದ ವಿಹಾರದ ಶ್ರೀ ಮನೋರಖ್ಖಿತ ಬಂತೇಜಿ ಅಶೀರ್ವಚನ ನೀಡಿದರು.

ಕಾರ್ಯಕ್ರಮಕ್ಕು ಮುನ್ನಾ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ, ಎ.ಆರ್.ಕೃಷ್ಣಮೂರ್ತಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ. ಮರಿಸ್ವಾಮಿ ಅಗಮಿಸಿ, ವಿ. ಶ್ರೀನಿವಾಸಪ್ರಸಾದ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಸಿಎಂ ಕಾರ್ಯಕ್ರಮಕ್ಕೆ ಮೈಸೂರಿಗೆ ತೆರಳಿದರು.ಕಾರ್ಯಕ್ರಮದಲ್ಲಿ ಶ್ರೀನಿವಾಸಪ್ರಸಾದ್ ಅಪ್ತರಾದ ಎಂ. ವೆಂಕಟಪತಿ ತಿರುಪ್ಪೂರ್, ನಗರಸಭಾ ಸದಸ್ಯ ಆರ್.ಎಂ. ರಾಜಪ್ಪ, ಡಾ. ಬಿ.ಆರ್. ಅಂಬೇಡ್ಕರ್ ಸಂಘಗಳ ಒಕ್ಕೂಟ ದ ಅಧ್ಯಕ್ಷ ಸಿ.ಕೆ. ಮಂಜುನಾಥ್, ಅಭಿಮಾನಿ ಬಳಗದ ನಗರಸಭಾ ಮಾಜಿ ಸದಸ್ಯ ಬಸವರಾಜು, ರಾಮಸಮುದ್ರ ಪ್ರಸನ್ನ, ಬಂಗಾರು, ಸಿ.ಎಂ. ನರಸಿಂಹಮೂರ್ತಿ ಮೊದಲಾದವರು ಇದ್ದರು.