ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ಭಾರಿ ಪೈಪೋಟಿಯ ನಡುವೆಯೂ ಶಾಸಕ ರಾಘವೇಂದ್ರ ಹಿಟ್ನಾಳ ಅವರ ಅತ್ಯಾಪ್ತ ಪ್ರಸನ್ನ ಗಡಾದ ಅವರನ್ನು ನೇಮಕ ಮಾಡಲಾಗಿದೆ.
ಕೊಪ್ಪಳ: ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ಭಾರಿ ಪೈಪೋಟಿಯ ನಡುವೆಯೂ ಶಾಸಕ ರಾಘವೇಂದ್ರ ಹಿಟ್ನಾಳ ಅವರ ಅತ್ಯಾಪ್ತ ಪ್ರಸನ್ನ ಗಡಾದ ಅವರನ್ನು ನೇಮಕ ಮಾಡಲಾಗಿದೆ.
ರಾಜ್ಯ ಸರ್ಕಾರದ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಈ ಕುರಿತು ಆದೇಶ ಮಾಡಿದ್ದು, ಇದರಿಂದ ಹಾಲಿ ಅಧ್ಯಕ್ಷರಾಗಿದ್ದ ವಾಣಿಜ್ಯೋಧ್ಯಮಿ ಶ್ರೀನಿವಾಸ ಗುಪ್ತಾ ಅವರ ಅವಧಿ ಕೇವಲ 13 ತಿಂಗಳಿಗೆ ಮುಕ್ತಾಯವಾದಂತೆ ಆಗಿದೆ.ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ಹಲವರು ಪೈಪೋಟಿ ಇದ್ದಿದ್ದರಿಂದ ತೀವ್ರ ಸಮಸ್ಯೆಯಾಗಿಯೇ ಕೆಲತಿಂಗಳಗಳ ಕಾಲ ನೇಮಕ ಮಾಡಿರಲಿಲ್ಲ. ಅದಾದ ಆನಂತರ ಶ್ರೀನೀವಾಸ ಗುಪ್ತಾ ಅವರನ್ನು ನೇಮಕ ಮಾಡಲಾಯಿತು. ಶ್ರೀನಿವಾಸ ಗುಪ್ತಾ ಅವರನ್ನು ನೇಮಕ ಮಾಡಿದ ಮೇಲೆ ಗೊಂದಲವೂ ಏರ್ಪಟ್ಟಿತ್ತಲ್ಲದೆ ಕೆಲವರು ಮುನಿಸಿಕೊಂಡಿದ್ದರು. ಹೀಗಾಗಿ ಶ್ರೀನಿವಾಸ ಗುಪ್ತಾ ಅವರನ್ನು ಕೇವಲ 13 ತಿಂಗಳಿಗೆ ಬದಲಾಯಿಸಿ, ಪ್ರಸನ್ನ ಗಡಾದ ಅವರನ್ನು ನೇಮಕ ಮಾಡಲಾಗಿದೆ.
ಕೇವಲ 12 ತಿಂಗಳು: ಪ್ರಸನ್ನ ಗಡಾದ ಅವರ ಅಧ್ಯಕ್ಷ ಸ್ಥಾನದ ಅವಧಿಯನ್ನು ಈಗಲೇ ನಿಗದಿ ಮಾಡಲಾಗಿದೆ ಎಂದು ಹೇಳಲಾಗುತ್ತದೆ. ಕಾಂಗ್ರೆಸ್ ನಾಯಕರ ಒಳಒಪ್ಪಂದದಂತೆ 12 ತಿಂಗಳು ಮಾತ್ರ ಅವಕಾಶ ನೀಡಲಾಗಿದೆ ಎಂಬ ಮಾಹಿತಿ ಈಗ ಗುಟ್ಟಾಗಿ ಉಳಿದಿಲ್ಲ. ಅಷ್ಟೇ ಅಲ್ಲ, ಅದಾದ ನಂತರವೂ ಯಾರು ಎನ್ನುವ ಕುರಿತು ತೀರ್ಮಾನ ಮಾಡಲಾಗಿದ್ದು, ಕೊಪ್ಪಳ ನಗರ ಘಟಕದ ಅಧ್ಯಕ್ಷ ಕಾಟನ್ ಪಾಶಾ ಅವರ ಹೆಸರು ಫೈನಲ್ ಮಾಡಲಾಗಿದೆ. ಹೀಗಾಗಿ, ಪೈಪೋಟಿಯಲ್ಲಿದ್ದ ಶಿವಣ್ಣ ಪಾವಲಿ, ಕೃಷ್ಣ ಇಟ್ಟಂಗಿ ಸೇರಿದಂತೆ ಅನೇಕರು ನಿರಾಶೆಯಾಗುವಂತಾಗಿದೆ.