ಸಾರಾಂಶ
ಶಿವಮೊಗ್ಗದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಜಿಲ್ಲಾ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ನೇಮಕವಾದ ಆರ್.ಪ್ರಸನ್ನಕುಮಾರ್ ಅವರಿಗೆ ಹಿಂದಿನ ಅಧ್ಯಕ್ಷ ಎಚ್.ಎಸ್.ಸುಂದರೇಶ್‌ರವರು ಕಾಂಗ್ರೆಸ್ ಧ್ವಜವನ್ನು ನೀಡುವ ಮೂಲಕ ಅಧಿಕಾರವನ್ನು ಹಸ್ತಾಂತರಿಸಿದರು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಜಿಲ್ಲಾ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ನೇಮಕವಾದ ಆರ್.ಪ್ರಸನ್ನಕುಮಾರ್ ಬುಧವಾರ ಅಧಿಕಾರ ಸ್ವೀಕರಿಸಿದರು. ಹಿಂದಿನ ಅಧ್ಯಕ್ಷ ಎಚ್.ಎಸ್.ಸುಂದರೇಶ್‌ರವರು ಕಾಂಗ್ರೆಸ್ ಧ್ವಜವನ್ನು ನೀಡುವ ಮೂಲಕ ಅಧಿಕಾರವನ್ನು ಹಸ್ತಾಂತರಿಸಿದರು.ಅಧಿಕಾರ ಸ್ವೀಕರಿಸಿ ಮಾತನಾಡಿದ ಆರ್.ಪ್ರಸನ್ನಕುಮಾರ್, ನಾನು ಕಳೆದ 10 ವರ್ಷ ಅಧ್ಯಕ್ಷನಾಗಿದ್ದೆ. ಈ ಎಲ್ಲರ ಸಹಕಾರದಲ್ಲಿ ಪಕ್ಷವನ್ನು ಮತ್ತಷ್ಟು ಸಂಘಟನೆ ಮಾಡುತ್ತೇನೆ ಎಂದು ತಿಳಿಸಿದರು.ಶಿವಮೊಗ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಗೀತಾರವರನ್ನು ಗೆಲ್ಲಿಸಲು ನಾವೆಲ್ಲರೂ ಹಗರಲಿರುಳು ಶ್ರಮ ಪಡೋಣ. ಜನರ ಬಳಿ ಹೋಗೋಣ ರಾಹುಲ್ ಅವರ ಘೋಷವಾಕ್ಯದಂತೆ ನನ್ನ ಬೂತ್, ನನ್ನ ಜವಾಬ್ದಾರಿ ಎಂದು ನಡೆದುಕೊಳ್ಳೋಣ ಎಂದರು.ಮಾಜಿ ಜಿಲ್ಲಾಧ್ಯಕ್ಷ ಹಾಗೂ ಹಾಲಿ ಸೂಡಾ ಅಧ್ಯಕ್ಷ ಎಚ್.ಎಸ್.ಸುಂದರೇಶ್ ಮಾತನಾಡಿ, ನನ್ನ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿದ್ದೇನೆ ಎಂಬ ತೃಪ್ತಿಇದೆ. ಅತ್ಯಂತ ಕಷ್ಟಕಾಲದಲ್ಲಿ ನನಗೆ ಈ ಹುದ್ದೆ ಸಿಕ್ಕಿತ್ತು. ಬಿಜೆಪಿಯ ವಿರುದ್ಧ ಹೋರಾಟ ಮಾಡುವುದು ಅಷ್ಟು ಸುಲಭವೂ ಆಗಿರಲಿಲ್ಲ. ಆದರೆ, ಅದನ್ನೆಲ್ಲ ಎದುರಿಸಿದ್ದೇನೆ. ಹಲವು ಬಾರಿ ನಿಷ್ಠುರವಾಗಿ ನಡೆದಿದ್ದೇನೆ. ಸೂಡಾ ಅಧ್ಯಕ್ಷನಾಗಿದ್ದರಿಂದ ಈ ಹುದ್ದೆಯಿಂದ ನಿರ್ಗಮಿಸುತ್ತಿದ್ದೇನೆ. ನನ್ನೊಂದಿಗೆ ಸಹಕರಿಸಿದ ಎಲ್ಲಾ ಘಟಕಗಳ ಪದಾಧಿಕಾರಿಗಳಿಗೆ, ಕಾರ್ಯಕರ್ತರಿಗೆ ನನ್ನ ಕೃತಜ್ಞತೆಗಳು ಎಂದರು.ಈ ಸಂದರ್ಭದಲ್ಲಿ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರಮೇಶ್, ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗರಾಜ್ ಗೌಡ, ಎಂಎಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥ್ ಗೌಡ, ಭೋವಿ ನಿಗಮದ ಅಧ್ಯಕ್ಷ ಎಸ್. ರವಿಕುಮಾರ್, ಇಸ್ಮಾಯಿಲ್ ಖಾನ್, ಡಾ.ಶ್ರೀನಿವಾಸ್ ಕರಿಯಣ್ಣ, ದೇವೇಂದ್ರಪ್ಪ, ಎಸ್.ಪಿ. ದಿನೇಶ್, ಕಾಶಿ ವಿಶ್ವನಾಥ್, ಮಧು, ಕಲೀಂ ಪಾಶಾ, ಶಿವಕುಮಾರ್, ಶಿವಾನಂದ, ಚಿನ್ನಪ್ಪ, ಸಿ.ಎಸ್.ಚಂದ್ರ ಭೂಪಾಲ್ ಮತ್ತಿತರರು ಇದ್ದರು.