ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ಮೊಣಕಾಲುದ್ದ ನೀರಿನಲ್ಲಿ ತೆಪ್ಪ ಓಡಿಸೋದು, ಕೋವಿಡ್ ಸೋಂಕಿತರ ಬಳಿ ಹೋಗಿ ಡ್ಯಾನ್ಸ್ ಮಾಡೋದೂ, ಡಿ.ಕೆ.ಶಿವಕುಮಾರ ಡಿಸಿಎಂ ಆಗುತ್ತಿದ್ದಂತೆ ದುಡ್ಡು ಸಿಗುತ್ತದೆಂದು ಬೊಕ್ಕೆ ಕೊಟ್ಟು ಬರೋದು ಸಿದ್ದೇಶಣ್ಣನಿಗೆ ಗೊತ್ತಿಲ್ಲ ಎಂದು ಮೈಸೂರು ಮಾಜಿ ಸಂಸದ ಪ್ರತಾಪ ಸಿಂಹ ದಾವಣಗೆರೆ ಲಗಾನ್ ಟೀಂ ವಿರುದ್ಧ ವಾಗ್ದಾಳಿ ನಡೆಸಿದರು.ನಗರದ ಶ್ರೀ ಅಭಿನವ ರೇಣುಕಾ ಮಂದಿರದಲ್ಲಿ ಮಂಗಳವಾರ ಕೇಂದ್ರ ಮಾಜಿ ಸಚಿವ, ಬಿಜೆಪಿ ಹಿರಿಯ ನಾಯಕ ಜಿ.ಎಂ. ಸಿದ್ದೇಶ್ವರ್ 74ನೇ ಜನ್ಮದಿನ ಸಮಾರಂಭದಲ್ಲಿ ಅವರು ಮಾತನಾಡಿದರು. ನಮ್ಮ ಪಾರ್ಟಿ ತತ್ವ, ಸಿದ್ಧಾಂತಗಳೇ ಗೊತ್ತಿಲ್ಲ ನಿಮ್ಮಂತಹವರು ದೋಖಾ ಬಗೆಯಲಿಲ್ಲವೆಂದಿದ್ದರೆ ಗಾಯತ್ರಿ ಸಿದ್ದೇಶ್ವರ ಸಂಸದರಾಗಿರುತ್ತಿದ್ದರು ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮತ್ತು ತಂಡದ ವಿರುದ್ಧ ಹರಿಹಾಯ್ದರು. ಸಿದ್ದೇಶಣ್ಣನಿಗೆ ನಿಮ್ಮಂತಹವರ ಸರ್ಟಿಫಿಕೇಟ್ ಬೇಕಾ? ಸಿದ್ದೇಶಣ್ಣನ ಜೊತೆಗೆ ನಾವೆಲ್ಲರೂ ಇದ್ದೇವೆ. ನಾವೆಲ್ಲರೂ ಒಗ್ಗಟ್ಟಾಗಿರೋಣ. ಒಗ್ಗಟ್ಟಾಗಿ ಪಕ್ಷ ಬೆಳೆಸೋಣ ಎಂದರು.
ಅರವಿಂದ ಲಿಂಬಾವಳಿ, ರಮೇಶ ಜಾರಕಿಹೊಳಿ, ಕುಮಾರ ಬಂಗಾರಪ್ಪ ಮೂವರ ಪ್ರಯತ್ನದಿಂದ ವಾಲ್ಮೀಕಿ ನಿಗಮದ ಹಗರಣ ಸಿಬಿಐ ತನಿಖೆಗೊಪ್ಪಿಸಲ್ಪಟ್ಟಿದೆ. ಇಂತಹ ಶಕ್ತಿಇರುವ ಹಲವಾರು ನಾಯಕರು ನಮ್ಮೊಂದಿಗಿದ್ದಾರೆ. ನಾವೆಲ್ಲರೂ ಸೇರಿ, ಪಕ್ಷವನ್ನು ಕಟ್ಟೋಣ. ದಾವಣಗೆರೆ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸೋತ ನಂತರ ಏನಾದರೂ ಕೆಲಸ ಆಗಿದೆಯೇ? ದಾವಣಗೆರೆಯಲ್ಲಿ ಹೊಸ ಸಂಸದರಿಂದ ಏನಾದರೂ ಕೆಲಸ ಆಗಿದೆಯೇ ಎಂದು ಅವರು ಪ್ರಶ್ನಿಸಿದರು.ಮುಖ್ಯಮಂತ್ರಿ ಆಗಬೇಕೆಂದು ನಿಮ್ಮ ಮಾವನವರಾದ ಶಾಮನೂರು ಶಿವಶಂಕರಪ್ಪ ಕನಸು ಕಾಣುತ್ತಿದ್ದಾರೆ. ನಿಮ್ಮ ಪತಿ ಎಸ್ಸೆಸ್ ಮಲ್ಲಿಕಾರ್ಜುನ ಜಿಲ್ಲಾ ಉಸ್ತುವಾರಿ ಸಚಿವರಿದ್ದಾರೆ. ನೀವು ಸ್ವತಃ ಸಂಸದರಾಗಿ ಕ್ಷೇತ್ರದಲ್ಲಿ ಏನು ಮಾಡಿದ್ದೀರಿ ಡಾ.ಪ್ರಭಾ ಮಲ್ಲಿಕಾರ್ಜುನರವರೇ? ನಿಮ್ಮ ಮಾವನವರ ಆಶೀರ್ವಾದವಿದೆ. ಮಾವ, ಮನೆಯವರು ಅನ್ಯ ಪಕ್ಷದವರ ಬಳಿ ಹೋಗಿ, ಅಡ್ಜಸ್ಟ್‌ಮೆಂಟ್ ಮಾಡಿ, ನಿಮ್ಮನ್ನು ಸಂಸದರಾಗಿ ಮಾಡಿಬಿಟ್ಟರು. ಸಭೆ, ಸಮಾರಂಭಗಳಲ್ಲಿ ಥ್ಯಾಂಕ್ಯೂ ಸೋ ಮಚ್ ಅಂತೀರಿ, ಒಂದು ಹುಲಿಯನ್ನೇ ಹೊಡೆದು, ನನ್ನನ್ನು ಗೆಲ್ಲಿಸಿದ್ದೀರಿ ಅಂತೀರಿ ಎಂದು ಪ್ರತಾಪ ಸಿಂಹ ವ್ಯಂಗ್ಯವಾಡಿದರು.
- - -(ಪ್ರತಾಪ ಸಿಂಹ)