ಮಕ್ಕಳಲ್ಲಿ ಪಠ್ಯದ ಜ್ಞಾನದ ಜತೆಗೆ ಕಲೆ, ಸಾಹಿತ್ಯ, ಸಂಗೀತ, ಅಭಿನಯ ಹಾಗೂ ಭಾಷಣ ಕೌಶಲ್ಯಗಳ ಬೆಳವಣಿಗೆಯೂ ಮುಖ್ಯವಾಗಿದೆ. ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಮಕ್ಕಳಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ದೊರೆಯುತ್ತದೆ.
ಕನ್ನಡಪ್ರಭ ವಾರ್ತೆ ಹಲಗೂರು
ಪ್ರಾಥಮಿಕ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಲ್ಲಿ ಅಡಗಿರುವ ಸುಪ್ತ ಪ್ರತಿಭೆ ಹೊರ ತರಬೇಕಾದರೆ ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮಗಳು ಸಹಕಾರಿ ಎಂದು ಶಂಕರೇಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.ಸಮೀಪದ ಕುಂತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಸೋಲು-ಗೆಲುವನ್ನು ಸಮನಾಗಿ ಸ್ವೀಕರಿಸಬೇಕು. ಸೋಲು ಎಂಬುದು ಗೆಲುವಿನ ಸೋಪಾನ ಎಂಬುದನ್ನು ತಿಳಿದುಕೊಳ್ಳಬೇಕು. ತೀರ್ಪುಗಾರರಾಗಿ ಬಂದಿರುವವರು ವಿದ್ಯಾರ್ಥಿಗಳ ಸುಪ್ತ ಪ್ರತಿಭೆ ಗುರುತಿಸಿ ಅದಕ್ಕೆ ಅನುಗುಣವಾಗಿ ಯಾವುದೇ ಪಕ್ಷಪಾತವಿಲ್ಲದೆ ಆಯ್ಕೆ ಮಾಡಬೇಕು ಎಂದರು.
ವಿವೇಕಾನಂದ ಶಾಲೆಯ ಶಿಕ್ಷಕ ಈಶ ಮಾತನಾಡಿ, ನಿಮ್ಮಲ್ಲಿ ಅಡಗಿರುವ ಸುಪ್ತ ಪ್ರತಿಭೆ ಹೊರಬಂದು ವಿಜೇತರಾಗಿ ಮುಂದೆ ನಡೆಯುವ ತಾಲೂಕು, ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ನೀವು ಆಯ್ಕೆಯಾಗುವಂತೆ ವಿದ್ಯಾರ್ಥಿಗಳಿಗೆ ತಿಳಿಸಿದರು.ಶಿಕ್ಷಕ ಪಾರ್ಥ ಸಾರಥಿ ಮಾತನಾಡಿ, ಮಕ್ಕಳಲ್ಲಿ ಪಠ್ಯದ ಜ್ಞಾನದ ಜತೆಗೆ ಕಲೆ, ಸಾಹಿತ್ಯ, ಸಂಗೀತ, ಅಭಿನಯ ಹಾಗೂ ಭಾಷಣ ಕೌಶಲ್ಯಗಳ ಬೆಳವಣಿಗೆಯೂ ಮುಖ್ಯವಾಗಿದೆ. ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಮಕ್ಕಳಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ದೊರೆಯುತ್ತದೆ. ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ಬೆಳೆಸಿಕೊಂಡು, ನಿರಂತರ ಪ್ರಯತ್ನದ ಮೂಲಕ ಸಾಧನೆಯ ಹಾದಿಯಲ್ಲಿ ಮುನ್ನಡೆಯಬೇಕು ಎಂದರು.
ಶಾಲೆಯ ಮುಖ್ಯ ಶಿಕ್ಷಕಿ ರೂಪ ಮಾತನಾಡಿ, ಪ್ರತಿಭಾ ಕಾರಂಜಿಯಲ್ಲಿ 12 ಶಾಲೆಗಳಿಂದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ.200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ ಧಾರ್ಮಿಕ ಪಠಣ, ದೇಶಭಕ್ತಿಗೀತೆ, ಕಥೆ ಹೇಳುವುದು, ಕಂಠಪಾಠ, ಚಿತ್ರಕಲೆ, ಪ್ರಬಂಧ ರಚನೆ, ಛದ್ಮವೇಷ, ಅಭಿನಯಗೀತೆ, ಭಕ್ತಿಗೀತೆ, ಆಶುಭಾಷಣ, ಮಿಮಿಕ್ರಿ ಹಾಗೂ ಕನ್ನಡ ಕವನ ವಾಚನ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿದರು ಎಂದರು.
ಈ ಸಂದರ್ಭದಲ್ಲಿ ಎಸ್ಡಿಎಂಸಿ ಅಧ್ಯಕ್ಷ ಕೆಂಪೇಗೌಡ, ರವಿಕುಮಾರ್, ಕೆ.ಟಿ.ಶಂಕರೇಗೌಡ, ಉಷಾ, ವಿಷಕಂಠೇಗೌಡ, ರವಿಕುಮಾರ್, ಇಂದ್ರಮ್ಮ, ಗೌರಮ್ಮ, ಚಿಕ್ಕಲಿಂಗೇಗೌಡ, ಗೀತಾ, ನಸ್ರಿನ್ ತಾಜ್, ಮಹೇಂದ್ರ, ಈಶ, ಸರೋಜಮ್ಮ, ಮಂಜುಳ, ಪುಟ್ಟಭದ್ರಮ್ಮ ಸೇರಿದಂತೆ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕರು ಇದ್ದರು.