ಸಂಡೂರು ಸರ್ಕಾರಿ ಬಾಲಕಿಯರ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಶಾಸಕಿ ಅನ್ನಪೂರ್ಣ ಈ. ತುಕಾರಾಂ ಉದ್ಘಾಟಿಸಿದರು.
ಸಂಡೂರು: ಮಕ್ಕಳಲ್ಲಿನ ಕಲೆ ಹಾಗೂ ಪ್ರತಿಭೆಯ ಪ್ರದರ್ಶನಕ್ಕೆ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಉತ್ತಮ ವೇದಿಕೆಯಾಗಿದೆ ಎಂದು ಶಾಸಕಿ ಅನ್ನಪೂರ್ಣ ಈ. ತುಕಾರಾಂ ಅಭಿಪ್ರಾಯಪಟ್ಟರು.
ಪಟ್ಟಣದ ಸರ್ಕಾರಿ ಬಾಲಕಿಯರ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಮಂಗಳವಾರ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಉದ್ಘಾಟಿಸಿ ಮಾತನಾಡಿದರು.ಮಕ್ಕಳಲ್ಲಿನ ಸುಪ್ತ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸುವುದು ಬಹಳ ಮುಖ್ಯ. ಮಕ್ಕಳ ಮೇಲೆ ಪಾಲಕರು ತಮ್ಮ ಕನಸುಗಳನ್ನು ಹೊರಿಸಬಾರದು. ಅವರ ಆಸಕ್ತಿಯ ವಿಷಯದಲ್ಲಿ ಸೂಕ್ತ ಮಾರ್ಗದರ್ಶನ ನೀಡಿ ಪ್ರೋತ್ಸಾಹಿಸಿದಾಗ, ಮಕ್ಕಳು ಉತ್ತಮ ಸಾಧನೆ ತೋರಲು ಸಾಧ್ಯವಾಗಲಿದೆ. ಮಕ್ಕಳ ಸಹಜ ಬೌದ್ಧಿಕ ವಿಕಸನಕ್ಕೆ ಪಾಲಕರು ಹಾಗೂ ಶಿಕ್ಷಕರು ಅವಕಾಶ ಕಲ್ಪಿಸಬೇಕು. ಮಕ್ಕಳು ಬೌದ್ಧಿಕವಾಗಿ, ಮಾನಸಿಕವಾಗಿ, ದೈಹಿಕವಾಗಿ ಆರೋಗ್ಯವಂತರಾಗಿ ಸತ್ಪçಜೆಗಳಾದಾಗ, ಅವರು ಅವರ ಕುಟುಂಬದ ಹಾಗೂ ದೇಶದ ಆಸ್ತಿಯಾಗುತ್ತಾರೆ. ಅವರನ್ನು ದೇಶದ ಸತ್ಪ್ರಜೆಗಳನ್ನಾಗಿ ರೂಪಿಸುವಲ್ಲಿ ಪಾಲಕರ ಹಾಗೂ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದರು.
ಮಕ್ಕಳಲ್ಲಿ ಸಂಕುಚಿತ ಭಾವನೆಯನ್ನು ಬೆಳೆಸದೆ, ಅವರಲ್ಲಿ ಇತರರರೊಂದಿಗೆ ಹೊಂದಿಕೊಂಡು ಹೋಗುವ, ಇತರರನ್ನು ಗೌರವಿಸುವ ಸಂಸ್ಕೃತಿಯನ್ನು ಬೆಳೆಸಬೇಕಿದೆ. ಸುಸಂಸ್ಕೃತ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ನಂಜುಂಡಪ್ಪ ವರದಿಯ ಪ್ರಕಾರ ಹಿಂದುಳಿದ ತಾಲೂಕೆಂಬ ಹಣೆಪಟ್ಟಿಯನ್ನು ತೆಗೆದು ಹಾಕಲು ಎಲ್ಲರೂ ಸಹಕರಿಸಬೇಕು ಎಂದರು.ಪ್ರಾಸ್ತಾವಿಕವಾಗಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಐ.ಆರ್. ಅಕ್ಕಿ, ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆ ಅಗತ್ಯವಾಗಿವೆ. ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮದಲ್ಲಿ ಒಂದರಿಂದ ನಾಲ್ಕನೇ ತರಗತಿ, ಐದರಿಂದ ಏಳನೇ ತರಗತಿ ಹಾಗೂ ಎಂಟರಿಂದ ಹತ್ತನೇ ತರಗತಿ ಸೇರಿ ಒಟ್ಟು ಮೂರು ಘಟಕಗಳಲ್ಲಿ ಒಟ್ಟು 39 ವಿಷಯಗಳಲ್ಲಿ ಸ್ಪರ್ಧೆ ನಡೆಯಲಿದೆ. ಇದರಲ್ಲಿ ತಾಲೂಕಿನ 700 ವಿದ್ಯಾರ್ಥಿಗಳು ಸ್ಪರ್ಧಿಸುತ್ತಿದ್ದಾರೆ. 96 ಜನ ನಿರ್ಣಾಯಕರನ್ನು ಹಾಗೂ 200 ಮಾಗದರ್ಶಿ ಶಿಕ್ಷಕರನ್ನು ನಿಯೋಜಿಸಲಾಗಿದೆ ಎಂದರು.
ತಾಲ್ಲೂಕು ಪಂಚಾಯ್ತಿ ಇಒ ಮಡಗಿನ ಬಸಪ್ಪ ಹಾಗೂ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ನೂರುದ್ದೀನ್ ಅವರು ಮಾತನಾಡಿ, ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.ಕ್ಷೇತ್ರ ಸಮನ್ವಯಾಧಿಕಾರಿ ಶರಣಬಸಪ್ಪ ಕರಿಶೆಟ್ಟಿ ಸ್ವಾಗತಿಸಿದರು. ಗ್ಯಾರಂಟಿ ಯೋಜನೆಗಳ ಜಿಲ್ಲಾ ಸಮಿತಿ ಉಪಾಧ್ಯಕ್ಷೆ ಆಶಾಲತಾ ಸೋಮಪ್ಪ, ಪುರಸಭೆ ಮುಖ್ಯಾಧಿಕಾರಿ ಬಿ. ವಿನಯ್‌ಕುಮಾರ್ ಗೌಡ, ಬಿಸಿಯೂಟ ಯೋಜನೆಯ ಸಹಾಯಕ ನಿರ್ದೇಶಕ ಶ್ರೀಧರ್‌ಮೂರ್ತಿ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಪ್ರಭುದೇವಯ್ಯ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎನ್.ಕೆ. ವೆಂಕಟೇಶ್, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿದ್ದಣ್ಣ ಯಳವಾರ್, ವಿವಿಧ ಶಿಕ್ಷಕರ ಸಂಘಗಳ ಅಧ್ಯಕ್ಷರಾದ ಎಲ್.ಎಚ್. ತಮ್ಮಪ್ಪ, ದಕ್ಷಿಣಮೂರ್ತಿ, ನಾಗರಾಜ ಭಂಗಿ, ಚೌಕಳಿ ಪರಶುರಾಮಪ್ಪ, ಕೊಟ್ರೇಶ್, ರಮೇಶ್, ಟಿ.ಎಂ. ಪುರುಷೋತ್ತಮ್, ಶಶಿಧರ್, ಮುಖಂಡ ದಾದಾ ಖಲಂದರ್, ಕೊಟ್ರೇಶ್ ಉಪಸ್ಥಿತರಿದ್ದರು.