ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆಶಿಕ್ಷಣ ಇಲಾಖೆಯ ಪ್ರತಿಭಾ ಕಾರಂಜಿ ಕಾರ್ಯಕ್ರಮವು ಶಾಲಾ ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ, ಅದಕ್ಕೊಂದು ವೇದಿಕೆ ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಈ ಕಾರ್ಯಕ್ರಮದ ಪ್ರಯೋಜನವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ಶಾಸಕ ಕೆ.ಎಸ್. ಬಸವಂತಪ್ಪ ಸಲಹೆ ನೀಡಿದರು.ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ಕೆಂಗಾಪುರ ಗ್ರಾಮದಲ್ಲಿ ಸೋಮವಾರ ಜಿಪಂ, ತಾಲೂಕು ಪಂಚಾಯಿತಿ, ಶಿಕ್ಷಣ ಇಲಾಖೆ ಸಹಯೋಗದಲ್ಲಿ ಚನ್ನಗಿರಿ ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಪ್ರತಿಭೆಗೆ ವೇದಿಕೆಯಾಗುವ ಪ್ರತಿಭಾ ಕಾರಂಜಿ ಕಾರ್ಯಕ್ರಮಗಳಲ್ಲಿ ಮಕ್ಕಳು ಭಾಗವಹಿಸಬೇಕು. ಇದರಿಂದ ಅವರಿಗಿರುವ ವೇದಿಕೆ ಭಯವು ಹೋಗಲಿದ್ದು, ಮುಂದೆ ತಮ್ಮ ಪ್ರತಿಭೆಯಲ್ಲೇ ಎತ್ತರಕ್ಕೆ ಬೆಳೆಯುವ ಅವಕಾಶ ಸಿಗುತ್ತದೆ ಎಂದರು.ಮಕ್ಕಳು ಅತ್ಯಂತ ಉತ್ಸಾಹದಿಂದ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ಖುಷಿ ತಂದಿದೆ. ಇದರ ಹಿಂದೆ ಅವರ ತಂದೆ-ತಾಯಿ ಶ್ರಮ ಇರುವುದನ್ನು ಅಲ್ಲಗಳೆಯುವಂತಿಲ್ಲ. ಜೊತೆಗೆ, ಶಿಕ್ಷಕರು ಸಹ ಅವರನ್ನು ಪ್ರೇರೇಪಿಸುವ ಮೂಲಕ ಅವರ ಪ್ರತಿಭೆಯು ಅನಾವರಣಗೊಳ್ಳಲು ಕಾರಣವಾಗಿದ್ದಾರೆ. ಮಕ್ಕಳ ಬೆಳವಣಿಗೆಯಲ್ಲಿ ಶಿಕ್ಷಕರಷ್ಟೇ ಪೋಷಕರ ಪಾತ್ರವೂ ಅತಿ ಮುಖ್ಯವಾಗಿದೆ ಎಂದು ಹೇಳಿದರು.ಈ ಸಮಾರಂಭದಲ್ಲಿ ಕೆಂಗಾಪುರ ರಾಮಲಿಂಗೇಶ್ವರ ಮಠದ ಶ್ರೀ ಸದ್ಗುರು ಶ್ರೀ ರಾಮಲಿಂಗೇಶ್ವರ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಕಣಿವೆಬಿಳಚಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಲತಾ ಶ್ರೀನಿವಾಸ್, ಕ್ಷೇತ್ರ ಶಿಕ್ಷಣಾಧಿಕಾರಿ ಎಲ್. ಜಯಪ್ಪ, ಕ್ಷೇತ್ರ ಸಮನ್ವಯ ಅಧಿಕಾರಿ ಡಾ.ಎಸ್. ಶಂಕರಪ್ಪ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಸದಾಶಿವಪ್ಪ, ಸಹಾಯಕ ನಿರ್ದೇಶಕ ಡಿ .ಆರ್. ಹಾಲಸಿದ್ದಪ್ಪ ಸೇರಿದಂತೆ ಗ್ರಾಮ ಪಂಚಾಯಿತಿ ಸದಸ್ಯರು, ತಾಲೂಕ ಮಟ್ಟದ ಶಿಕ್ಷಕರು ಮತ್ತು ಮಕ್ಕಳು ಉಪಸ್ಥಿತರಿದ್ದರು.