ಸಾರಾಂಶ
ಕನ್ನಡಪ್ರಭ ವಾರ್ತೆ ಜಮಖಂಡಿ
ಮುಗ್ಧ ಮನಸಿನ ಮಕ್ಕಳ ಮನದಲ್ಲಿ ಹುದುಗಿರುವ ಕಲಾ, ಕೌಶಲ, ಪ್ರತಿಭೆ ಹೊರತರಲು ಪ್ರತಿಭಾ ಕಾರಂಜಿ ಉತ್ತಮ ವೇದಿಕೆಯಾಗಿದೆ ಎಂದು ಹಿರೇಪಡಸಲಗಿ ವಲಯದ ಸಿಆರ್‌ಪಿ ರಾಚಣ್ಣ ಹಣಮಂತ ಮುದ್ನೂರ ಹೇಳಿದರು.ತಾಲೂಕಿನ ನಾಗನೂರ ಗ್ರಾಮದ ಬಸವೇಶ್ವರ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಆಶ್ರಯದಲ್ಲಿ ಶಾಲಾ ಶಿಕ್ಷಣ ಇಲಾಖೆ, ಜಿಪಂ ಬಾಗಲಕೋಟೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾಯಾ೯ಲಯ ಜಮಖಂಡಿ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಪ್ರಸಕ್ತ ಸಾಲಿನ ಹಿರೇಪಡಸಲಗಿ ವಲಯ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರತಿ ಮಗುವಿನಲ್ಲೊಂದು ರೀತಿಯ ಕೌಶಲ್ಯಗಳಿವೆ. ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಹೊರಹಾಕಲು ಇಂಥ ಕಾರ್ಯಕ್ರಮಗಳು ಅವಶ್ಯಕ ಎಂದರು.ಪ್ರತಿಭಾ ಕಾರಂಜಿಯಲ್ಲಿ ಒಳ್ಳೆಯ ಪ್ರತಿಭಾವಂತ ವಿದ್ಯಾರ್ಥಿಗಳು ಪಾಲ್ಗೊಂಡು ನಿರೀಕ್ಷೆಗೂ ಮೀರಿ ಪ್ರತಿಭೆ ಅನಾವರಣಗೊಳಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಅದರಲ್ಲೂ ಗ್ರಾಮೀಣ ಪ್ರದೇಶದ ಮಕ್ಕಳಂತೂ ತಮ್ಮ ಪ್ರತಿಭೆ ಮೂಲಕ ಗಮನಾರ್ಹ ಸಾಧನೆ ಗೈಯುತ್ತಿರುವುದು ಸಂತಸದ ವಿಚಾರವಾಗಿದೆ ಎಂದು ತಿಳಿಸಿದರು.ಶಿಕ್ಷಣ ಸಂಯೋಜಕ ಮಹಾಂತೇಶ ಚವ್ಹಾಣ ಮಾತನಾಡಿ, ಯುವ ಮಕ್ಕಳು ಪಠ್ಯಕ್ಕೆ ಸೀಮಿತವಾಗದೇ ಪಠ್ಯೇತರ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಅಭಿರುಚಿ, ಆಸಕ್ತಿಯಿಂದ ಅಭಿನಯ, ನಾಟಕ, ಸಂಗೀತ, ಚಿತ್ರಕಲೆ, ಮಿಮೀಕ್ರಿ, ನೃತ್ಯ, ಹಾಡು, ಚಿತ್ರಕಲೆ ಸೇರಿದಂತೆ ಹಲವಾರು ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆಯಾಗಿರುವ ಪ್ರತಿಭಾ ಕಾರಂಜಿ ಮಕ್ಕಳ ಓದಾಸಕ್ತಿ ಪ್ರಗತಿಗೆ ಸಹಕಾರಿಯಾಗಿದೆ ಎಂದರು.ಶಿಕ್ಷಣ ಸಂಯೋಜಕ ಎಸ್.ವಿ.ವಿಜಾಪೂರ ಮಾತನಾಡಿ, ಮಕ್ಕಳಿಗೆ ಇದೊಂದು ಒಳ್ಳೆಯ ವೇದಿಕೆಯಾಗಿದೆ ಎಂದರು. ಗ್ರಾಮದ ಹಿರಿಯರಾದ ಲಕ್ಕೂ ಮುತ್ಯಾ ಸಾನ್ನಿಧ್ಯ ವಹಿಸಿದರು. ಶಾಲಾ ಸ್ಥಾನಿಕ ಮಂಡಳಿ ಅಧ್ಯಕ್ಷ ಶಾಂತು ಮಲ್ಲಪ್ಪ ದೈಗೊಂಡ, ಧರೆಪ್ಪ ಯಾದಪ್ಪ ಶಿರಹಟ್ಟಿ, ಮಹಾಂತೇಶ ತೇರದಾಳ, ವಿಶ್ರಾಂತ ಶಿಕ್ಷಕ ಬಸವರಾಜ ಅನಂತಪೂರ, ರಮೇಶ ದೇಸಾಯಿ, ಬಿ.ಎಸ್.ಅರವಟ್ಟಿ, ಸಿ.ಡಿ.ಹರಿಜನ, ಕೆ.ಎಸ್.ಮಾದರ, ಎಂ.ಎಸ್.ಬಿರಾದಾರ, ಬಿ.ಎಸ್.ಉಪ್ಪಾರ, ಹಣಮಂತ ಕಡಕೋಳ, ವಲಯದ ಶಿಕ್ಷಕರು, ಗುರುಮಾತೆಯರು ಭಾಗಿಯಾಗಿದ್ದರು. ವಿವಿಧ ಪ್ರಾಥಮಿಕ, ಪ್ರೌಢಶಾಲೆಗಳ ನೂರಾರು ಮಕ್ಕಳು ಉತ್ಸಾಹದಿಂದ ಪಾಲ್ಗೊಂಡರು. ಜೆ.ಎಚ್.ಕಡಕೋಳ ಸ್ವಾಗತಿಸಿದರು. ಶಿಕ್ಷಕ ಎಸ್.ಟಿ.ಸಂತಿ ನಿರೂಪಿಸಿ, ವಂದಿಸಿದರು.