ಅಬ್ಬೆತುಮಕೂರಿನ ಶ್ರೀವಿಶ್ವಾರಾಧ್ಯ ಮಠದ ಪೀಠಾಧಿಪತಿ ಡಾ. ಗಂಗಾಧರ ಮಹಾಸ್ವಾಮಿಗಳು ಶ್ರೀ ವಿಶ್ವಾರಾಧ್ಯರ ಸುಕ್ಷೇತ್ರದಲ್ಲಿ ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಿ, ಶ್ರೀದೇವಿಯ ವಿಶೇಷ ಪೂಜಾ ಸಮಾರಂಭದಲ್ಲಿ ಆಶೀರ್ವಚನ ನೀಡಿದರು. | Kannada Prabha
Image Credit: KP
ಭಗುಳಾಂಬಿಕೆಯನ್ನು ಭಕ್ತಿಯಿಂದ ಭಜಿಸಿ: ಡಾ.ಗಂಗಾಧರ ಶ್ರೀಶ್ರೀ ವಿಶ್ವಾರಾಧ್ಯರ ಸುಕ್ಷೇತ್ರದಲ್ಲಿ ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಿ ಆಶೀರ್ವಚನ
ಶ್ರೀ ವಿಶ್ವಾರಾಧ್ಯರ ಸುಕ್ಷೇತ್ರದಲ್ಲಿ ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಿ ಆಶೀರ್ವಚನ ಕನ್ನಡಪ್ರಭ ವಾರ್ತೆ ಯಾದಗಿರಿ ನವರಾತ್ರಿ ಉತ್ಸವದ ಸಂದರ್ಭದಲ್ಲಿ ಪ್ರತಿಯೊಬ್ಬರು ಶ್ರದ್ಧೆ ಮತ್ತು ಭಕ್ತಿಗಳಿಂದ ಭಗುಳಾಂಬಿಕೆಯನ್ನು ಭಜಿಸಿದರೆ ಇಷ್ಟಾರ್ಥಗಳು ನೆರವೇರುತ್ತವೆ ಎಂದು ಅಬ್ಬೆತುಮಕೂರಿನ ಶ್ರೀವಿಶ್ವಾರಾಧ್ಯ ಮಠದ ಪೀಠಾಧಿಪತಿ ಡಾ. ಗಂಗಾಧರ ಮಹಾಸ್ವಾಮಿಗಳು ನುಡಿದರು. ಶ್ರೀ ವಿಶ್ವಾರಾಧ್ಯರ ಸುಕ್ಷೇತ್ರದಲ್ಲಿ ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಿದ ಅವರು, ಶ್ರೀದೇವಿಯ ವಿಶೇಷ ಪೂಜಾ ಸಮಾರಂಭದ ನೇತೃತ್ವ ವಹಿಸಿ ಆಶೀರ್ವಚನ ನೀಡಿದರು. ದುಷ್ಟರ ಸಂಹಾರಕ್ಕಾಗಿ ಶಿಷ್ಟರ ರಕ್ಷಣೆಗಾಗಿ ನವ ಅವತಾರಗಳನ್ನು ಎತ್ತಿ ಅಸುರನನ್ನು ಸಂಹರಿಸಿದ ಶಕ್ತಿ ರೂಪಿಣಿಯೇ ದುರ್ಗಾದೇವಿ. ಅದಕ್ಕಾಗಿಯೇ ನಮ್ಮಲ್ಲಿ ನವರಾತ್ರಿಯ 9 ದಿನಗಳಲ್ಲಿ ನವದುರ್ಗೆಯರನ್ನಿಟ್ಟು ಅತ್ಯಂತ ಭಕ್ತಿಯಿಂದ ಪೂಜಿಸಿ ನವರಾತ್ರಿ ಉತ್ಸವವನ್ನು ಆಚರಿಸಿಕೊಂಡು ಬರಲಾಗುತ್ತಿದೆ ಎಂದು ಹೇಳಿದರು. ದುರ್ಗಾಮಾತೆಯನ್ನು 9 ದಿನಗಳಲ್ಲಿ ಪ್ರತಿದಿನವು ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಟದೇವಿ, ಕೂಷ್ಮಾಂಡಿನಿ ದೇವಿ, ಸ್ಕಂದಮಾತೆ, ಕಾತ್ಯಾಯಿನಿ, ಕಾಳರಾತ್ರಿ, ಮಹಾಗೌರಿ, ಸಿದ್ಧಿರಾತ್ರಿ ಹೀಗೆ ಒಂದೊಂದು ಹೆಸರಿನಲ್ಲಿ ನವರಾತ್ರಿಯ ಒಂಬತ್ತು ದಿನಗಳ ಕಾಲ ದೇವಿಯನ್ನು ಭಕ್ತಿಯಿಂದ ಭಜಿಸಿದಲ್ಲಿ ಅವಳು ಭಕ್ತರ ಮನೋಕಾಮನೆಗಳನ್ನು ಈಡೇರಿಸುತ್ತಾಳೆ ಎಂದು ಹೇಳಿದರು. ಶ್ರೀ ವಿಶ್ವಾರಾಧ್ಯರು ಕಠಿಣವಾದ ತಪಸ್ಸನ್ನು ಮಾಡುವುದರ ಮೂಲಕ ಭಗುಳಾಂಬಿಕೆಯನ್ನು ಒಲಿಸಿಕೊಂಡ ಮಹಾತ್ಮರಾಗಿದ್ದಾರೆ. ಅಣಿಮಾದಿ ಅಷ್ಟಸಿದ್ಧಿಗಳನ್ನು ಪ್ರಾಪ್ತಿ ಮಾಡಿಕೊಂಡ ವಿಶ್ವಾರಾಧ್ಯರ ಸುಕ್ಷೇತ್ರದಲ್ಲಿ ಆದಿಶಕ್ತಿಯ ವಿಶೇಷ ಪೂಜಾ ಕೈಂಕರ್ಯಗಳನ್ನು ನಿರಂತರ 9 ದಿನಗಳ ಕಾಲ ಅತ್ಯಂತ ಭಕ್ತಿಯಿಂದ ನಡೆಸಿಕೊಂಡು ಹೋಗಲಾಗುತ್ತದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಡಾ. ಸುಭಾಶ್ಚಂದ್ರ ಕೌಲಗಿ ಸೇರಿದಂತೆ ಅನೇಕ ಭಕ್ತರು ಇದ್ದರು. ಪೂಜಾ ಕಾರ್ಯಕ್ರಮದಲ್ಲಿ ವಿವಿಧ ಗ್ರಾಮಗಳಿಂದ ಆಗಮಿಸಿದ ಕಲಾವಿದರಿಂದ ಚೌಡಕಿ ಹಾಡುಗಳು, ಡೊಳ್ಳು ಕುಣಿತ, ಕೋಲಾಟ, ಕಣಿ ಹಲಿಗೆ, ಮತ್ತು ದಾಂಡಿಯ ನೃತ್ಯ ಹಾಗೂ ವಿವಿಧ ಗ್ರಾಮಗಳ ಭಜನಾ ತಂಡದವರಿಂದ ಭಜನೆ ನಡೆಯಿತು. ಮಲ್ಲಿಕಾರ್ಜುನ ಶಾಸ್ತ್ರಿ ಐನಾಪೂರ ದೇವಿಯ ಪಾರಾಯಣವನ್ನು ಮಾಡಿದರು. ಬಸವರಾಜ ಶಾಸ್ತ್ರಿ ಎಲೆಕೂಡಗಿ ಪೌರೋಹಿತ್ಯವನ್ನು ವಹಿಸಿ ವಿಶೇಷ ಪೂಜೆಯನ್ನು ನೆರವೇರಿಸಿ ಕೊಟ್ಟರು. - - - 16ವೈಡಿಆರ್6 : ಅಬ್ಬೆತುಮಕೂರಿನ ಶ್ರೀವಿಶ್ವಾರಾಧ್ಯ ಮಠದ ಪೀಠಾಧಿಪತಿ ಡಾ. ಗಂಗಾಧರ ಮಹಾಸ್ವಾಮಿಗಳು ಶ್ರೀ ವಿಶ್ವಾರಾಧ್ಯರ ಸುಕ್ಷೇತ್ರದಲ್ಲಿ ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಿ, ಶ್ರೀದೇವಿಯ ವಿಶೇಷ ಪೂಜಾ ಸಮಾರಂಭದಲ್ಲಿ ಆಶೀರ್ವಚನ ನೀಡಿದರು. - - -
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.