ಸಾರಾಂಶ
ಶಾಮನೂರು ಶಿವಶಂಕರಪ್ಪನವರು ಅನಾರೋಗ್ಯದಿಂದ ಬಳಲುತ್ತಿದ್ದು ಅವರು ಶೀಘ್ರ ಗುಣಮುಖರಾಗಲೆಂದು ಹಾರೈಸಿ ಜಿಲ್ಲಾ ಯುವ ಘಟಕದ ವತಿಯಿಂದ ಅರಸೀಕೆರೆಯ ರೈಲ್ವೆ ಸ್ಟೇಷನ್ ರಸ್ತೆಯಲ್ಲಿರುವ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಾಯಿತು.
ಅರಸೀಕೆರೆ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾ ಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪನವರು ಅನಾರೋಗ್ಯದಿಂದ ಬಳಲುತ್ತಿದ್ದು ಅವರು ಶೀಘ್ರ ಗುಣಮುಖರಾಗಲೆಂದು ಹಾರೈಸಿ ಜಿಲ್ಲಾ ಯುವ ಘಟಕದ ವತಿಯಿಂದ ನಗರದ ರೈಲ್ವೆ ಸ್ಟೇಷನ್ ರಸ್ತೆಯಲ್ಲಿರುವ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪ್ರಾರ್ಥಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ನಗರಸಭೆ ಸದಸ್ಯ ಬಿ.ಎನ್. ವಿದ್ಯಾಧರ್ ಮಾತನಾಡಿ, ಶಾಮನೂರು ಶಿವಶಂಕರಪ್ಪನವರು ವೀರಶೈವ ಲಿಂಗಾಯತ ಸಮಾಜದ ಮುಖಂಡರಾಗಿ ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡಿರುವುದಲ್ಲದೇ ಸಮಾಜದ ಏಳಿಗೆಗೆ ಶ್ರಮಿಸಿದ್ದಾರೆ. ಅಲ್ಲದೆ ಇವರು ಶಾಸಕರಾಗಿ, ಸಚಿವರಾಗಿ ರಾಜ್ಯದ ಸೇವೆ ಸಲ್ಲಿಸಿದ್ದಾರೆ. ಇವರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದು ಶೀಘ್ರವೇ ಗುಣಮುಖರಾಗಿ ಎಂದಿನಂತೆ ಸಮಾಜಕ್ಕಾಗಿ ದುಡಿಯಲಿ ಎಂದು ದೇವರಲ್ಲಿ ಪ್ರಾರ್ಥಿಸಿರುವುದಾಗಿ ಹೇಳಿದರು.ಅಖಿಲ ಭಾರತ ವೀರಶೈವ ಲಿಂಗಾಯತ ಮಹಾ ಸಭಾದ ಜಿಲ್ಲಾ ಯುವ ಘಟಕದ ಪ್ರಧಾನ ಕಾರ್ಯದರ್ಶಿ ರಾಂಪುರ ಸುನೀಲ್ ಶಾಸ್ತ್ರಿ ಮಾತನಾಡಿ, ಬಡ ವರ್ಗದ ಜನರಿಗೆ ಉತ್ತಮ ಶಿಕ್ಷಣ ದೊರಕಿಸುವ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಿದ್ದಾರೆ. ಕೈಗಾರಿಕೆಗಳ ಮೂಲಕ ದುಡಿಯುವ ಕೈಗಳಿಗೆ ಉದ್ಯೋಗಗಳನ್ನು ನೀಡಿ ಸದಾ ಜನ ಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವ ವ್ಯಕ್ತಿಯಾಗಿದ್ದು ಇವರ ಆರೋಗ್ಯಕ್ಕಾಗಿ ಪೂಜೆ ಸಲ್ಲಿಸಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಯಾದಾಪುರ ತೇಜಸ್, ರಿಲೆಯನ್ಸ್ ಲೋಕೇಶ್, ಚೇತನ್ ಜೈನ್, ರವಿಕುಮಾರ್, ಸೋಮಣ್ಣ, ಶಿವಕುಮಾರ್, ಸಂತೋಷ್‌ಕುಮಾರ್, ಇತರರು ಇದ್ದರು.