ಪಾಪದಿಂದ ಮುಕ್ತಿ ಪಡೆಯಲು ಧರ್ಮಾಚರಣೆ ಅಗತ್ಯ: ಸ್ವರ್ಣವಲ್ಲೀ ಶ್ರೀ

| Published : Aug 30 2024, 01:02 AM IST

ಪಾಪದಿಂದ ಮುಕ್ತಿ ಪಡೆಯಲು ಧರ್ಮಾಚರಣೆ ಅಗತ್ಯ: ಸ್ವರ್ಣವಲ್ಲೀ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಪುಣ್ಯದ ಕೆಲಸಗಳಿಗೆ ಹೆಚ್ಚು ಒತ್ತು ಕೊಟ್ಟು ಅದನ್ನು ಸಂಪಾದಿಸಿಕೊಳ್ಳಬೇಕು. ಹಾಗೆ ಪಾಪವನ್ನು ಕೂಡ ಬಹಳ ಪ್ರಯತ್ನ ಹಾಕಿ ತಪ್ಪಿಸಿಕೊಳ್ಳಬೇಕು ಎಂದು ಸ್ವರ್ಣವಲ್ಲೀ ಶ್ರೀಗಳು ತಿಳಿಸಿದರು.

ಶಿರಸಿ: ಜೀವನದಲ್ಲಿ ಬಹುತೇಕ ಎಲ್ಲರಿಗೂ ಒಂದಲ್ಲ ಒಂದು ಸಂದರ್ಭದಲ್ಲಿ ಪಶ್ಚಾತ್ತಾಪದ ಅನುಭವವಾಗಿರುತ್ತದೆ. ಅದರ ಅನುಭವ ಆಗದೆ ಇದ್ದವರು ಯಾರು ಇಲ್ಲ. ಇದರಲ್ಲಿ ಒಂದಿಷ್ಟು ಒಳ್ಳೆಯ ಮತ್ತು ದೋಷಗಳೂ ಇವೆ. ಪಶ್ಚಾತ್ತಾಪದಿಂದ ಹಿಂದೆ ಮಾಡಿದ ತಪ್ಪಿನ ದೋಷ ಕಡಿಮೆಯಾಗುತ್ತದೆ. ಮುಂದೆ ಅಂತಹ ತಪ್ಪುಗಳನ್ನು ಮಾಡದೇ ಇರುವ ಪರಿವರ್ತನೆಯ ಆರಂಭವಾಗುತ್ತದೆ ಎಂದು ಸೋಂದಾ ಸ್ವರ್ಣವಲ್ಲೀಯ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.ತಮ್ಮ ೩೪ನೇ ಹಾಗೂ ಮಠದ ಕಿರಿಯ ಆನಂದಬೋಧೇಂದ್ರ ಸರಸ್ವತೀ ಸ್ವಾಮೀಜಿಯ ಪ್ರಥಮ ಚಾತುರ್ಮಾಸ ವ್ರತಾಚರಣೆ ಸಂಕಲ್ಪ ಹಿನ್ನೆಲೆಯಲ್ಲಿ ಸೋಂದಾ ಕಸಬಾ ಸೀಮೆಯ ಶಿಷ್ಯರು ಸಲ್ಲಿಸಿದ ಸೇವೆ ಸ್ವೀಕರಿಸಿ ಆಶೀರ್ವಚನ ನೀಡಿದರು.ಪಶ್ಚಾತ್ತಾಪವು ಹೆಚ್ಚಾದರೆ ಬೇರೆ ಬೇರೆ ಮಾನಸಿಕ ರೋಗಗಳಿಗೆ ಕಾರಣವಾಗುತ್ತದೆ. ಆರೋಗ್ಯದಲ್ಲಿ ಏರುಪೇರುಗಳು ಉಂಟಾಗುತ್ತದೆ. ಪಶ್ಚಾತ್ತಾಪ ಎಲ್ಲರಿಗೂ ಆಗುತ್ತದೆ ಎಂಬುದನ್ನು ಉಪನಿಷತ್ತು ಹೇಳುತ್ತದೆ. ವೃದ್ಧಾಪ್ಯದಲ್ಲಿ ಬಹಳ ಮುಂದೆ ಹೋದಾಗ ನನ್ನ ಜೀವನದಲ್ಲಿ ಪುಣ್ಯ ಕರ್ಮಗಳನ್ನು ಮಾಡಲಿಲ್ಲ. ನಾನು ಪಾಪ ಕರ್ಮಗಳನ್ನೇ ಮಾಡಿದೆ ಎಂದು ಒಂದು ಚಿಂತೆ ಮನಸ್ಸಿನಲ್ಲಿ ಬರುತ್ತದೆ. ಜೀವನದ ಕೊನೆಯಲ್ಲಿ ಈ ರೀತಿಯಾದ ಭಾವನೆ ಎಲ್ಲರಿಗೂ ಬರುತ್ತದೆ ಎಂದರು.ಪಶ್ಚಾತ್ತಾಪವಾಗಲು ಎರಡು ಕಾರಣ ಎಂದರೆ ಪುಣ್ಯವನ್ನು ಮಾಡದೇ ಇರುವುದು ಮತ್ತು ಪಾಪವನ್ನು ಮಾಡುವುದು. ಪಶ್ಚಾತ್ತಾಪ ಆಗದೆ ಇರಲು ಪಾಪವನ್ನು ಮಾಡಬಾರದು. ಪಾಪ ಕರ್ಮಗಳಲ್ಲಿ ನಮ್ಮನ್ನು ತೊಡಗಿಸಿಕೊಳ್ಳಬಾರದು. ಪಾಪವನ್ನು ಚೆನ್ನಾಗಿ ಪರಿಹರಿಸಿಕೊಳ್ಳಬೇಕು. ಅವಕಾಶ ಸಿಕ್ಕಾಗ ಪುಣ್ಯವನ್ನು ಸಂಪಾದಿಸಿಕೊಳ್ಳಬೇಕು. ಈ ರೀತಿಯಾಗಿ ಮಾಡುತ್ತಾ ಬಂದರೆ ಜೀವನದ ಕೊನೆಯ ಕ್ಷಣದಲ್ಲಿ ಪಶ್ಚಾತ್ತಾಪವು ಆಗುವುದಿಲ್ಲ ಎಂದರು.

ಮನುಷ್ಯನ ಸಹಜವಾದ ಪ್ರವೃತ್ತಿ ಹೇಗಿದೆ ಎಂದರೆ ಎಲ್ಲರಿಗೂ ಪುಣ್ಯದ ಫಲವಾದ ಸುಖ ಬೇಕು. ಆದರೆ ಅದಕ್ಕೆ ಪುಣ್ಯ ಮಾಡಿಕೊಳ್ಳಬೇಕು ಎಂಬುದು ಗೊತ್ತಾಗುವುದಿಲ್ಲ ಎಂದರು. ಗೊತ್ತಿದ್ದರೂ ಪುಣ್ಯ ಸಂಪಾದನೆಗೆ ತೊಡಗಿಕೊಳ್ಳುವುದಿಲ್ಲ. ಪಾಪದ ಫಲವಾದ ದುಃಖ ಯಾರಿಗೂ ಬೇಡ. ಆದರೆ ಮತ್ತೆ ಮತ್ತೆ ಬೆನ್ನುಬಿದ್ದು ಪಾಪವನ್ನೇ ಮಾಡುತ್ತಾರೆ. ಇದು ಜನರ ತಪ್ಪು ನಡತೆ ಎಂದರು.

ಪುಣ್ಯದ ಕೆಲಸಗಳಿಗೆ ಹೆಚ್ಚು ಒತ್ತು ಕೊಟ್ಟು ಅದನ್ನು ಸಂಪಾದಿಸಿಕೊಳ್ಳಬೇಕು. ಹಾಗೆ ಪಾಪವನ್ನು ಕೂಡ ಬಹಳ ಪ್ರಯತ್ನ ಹಾಕಿ ತಪ್ಪಿಸಿಕೊಳ್ಳಬೇಕು. ಜೀವನದಲ್ಲಿ ಆಗುವ ಅನೇಕ ತಪ್ಪುಗಳಿಗೆ ಅವಕಾಶ ಕೊಡದೇ ಜೀವನವಿಡೀ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಜೀವನದ ಪೂರ್ವ ವಯಸ್ಸಿನಲ್ಲಿ ಪುಣ್ಯವನ್ನು ಮಾಡುವುದರ ಮೂಲಕ ಹಾಗೂ ಎಚ್ಚರಿಕೆಯಿಂದ ಪಾಪವನ್ನು ಮಾಡದೇ ಇದ್ದರೆ ಪಶ್ಚಾತ್ತಾಪರಹಿತವಾದ ವೃದ್ಧಾಪ್ಯವನ್ನು ಕಾಣಲು ಸಾಧ್ಯ. ನಿತ್ಯವೂ ಸಂಧ್ಯಾವಂದನೆ, ದೇವರ ನಾಮಸ್ಮರಣೆ, ಪ್ರಾಯಶ್ಚಿತ್ತ ಕರ್ಮಗಳನ್ನು ಮಾಡುವುದರ ಮೂಲಕ ಅವತ್ತಿನ ಪಾಪಗಳನ್ನು ಅವತ್ತೇ ಕಳೆದುಕೊಳ್ಳಬೇಕು ಎಂದರು.

ಕೆಸರನ್ನು ತಾಗಿಸಿಕೊಂಡು ಅನಂತರ ತೊಳೆದುಕೊಳ್ಳುವುದಕ್ಕಿಂತ ಕೆಸರನ್ನು ತಾಗಿಸಿಕೊಳ್ಳದೇ ಇರುವುದೇ ಹೆಚ್ಚು ಶ್ರೇಷ್ಠ. ಅದೇ ರೀತಿ ತಪ್ಪುಗಳನ್ನು ಮಾಡಿಕೊಂಡು ನಂತರ ಪ್ರಾಯಶ್ಚಿತ್ತ ಕರ್ಮಗಳನ್ನು ಮಾಡುವುದರ ಮೂಲಕ ಅದನ್ನು ಸರಿಪಡಿಸಿಕೊಳ್ಳುವುದಕ್ಕಿಂತ ತಪ್ಪುಗಳನ್ನು ಮಾಡದೇ ಇರುವುದೇ ಹೆಚ್ಚು ಶ್ರೇಷ್ಠ ಎಂದರು. ಈ ಸಂದರ್ಭದಲ್ಲಿ ಸೀಮೆಯ ಪ್ರಮುಖರಾದ ವೆಂಕಟರಮಣ ಹೆಗಡೆ, ಮಹಾಬಲೇಶ್ವರ ಹೆಗಡೆ, ರಾಮಚಂದ್ರ ಜೋಶಿ ಮತ್ತಿತರರು ಇದ್ದರು.