ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಚುನಾವಣೆ ಪೂರ್ವದಲ್ಲಿ ನೀಡಿದ 24 ಅಂಶಗಳ ಪ್ರಣಾಳಿಕೆಯಲ್ಲಿ ಈಗಾಗಲೇ 22 ಅಂಶಗಳನ್ನು ಪೂರೈಸಲಾಗಿದೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹಾ ಗಾರ ಹಾಗೂ ವಿರಾಜಪೇಟೆ ಕ್ಷೇತ್ರ ಶಾಸಕ ಎ.ಎಸ್. ಪೊನ್ನಣ್ಣ ಅಭಿಪ್ರಾಯಪಟ್ಟರು.ಪೊನ್ನಂಪೇಟೆಯ ಕುಂದ ರಸ್ತೆ ಮುತ್ತಪ್ಪ ದೇವಸ್ಥಾನ ಸಮೀಪ 1 ಕೋಟಿ ರು. ಅನುದಾನದಲ್ಲಿ ಎಸ್.ಎನ್.ಡಿ.ಪಿ. ಯ ಜಾಗದಲ್ಲಿ ಶ್ರೀ ನಾರಾಯಣ ಗುರುಗಳ ನೂತನ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಅವರು ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಇದರಲ್ಲಿ ಶ್ರೀ ನಾರಾಯಣ ಗುರು ಸಮುದಾಯ ಭವನ ಸಹ ಒಂದಾಗಿದೆ. ಎಸ್ ಎನ್ ಡಿ ಪಿ ಗೆ ಕೊಡಗು ಜಿಲ್ಲೆಯಲ್ಲಿ ಯಾವುದೇ ಸಮುದಾಯ ಭವನ ಇರಲಿಲ್ಲ. ಇದೀಗ ಸಮುದಾಯ ಭವನವನ್ನು ನಿರ್ಮಿಸಲು ಭೂಮಿ ಪೂಜೆ ಮಾಡಲಾಗಿದೆ. ಈ ಮೂಲಕ ಶ್ರೀ ನಾರಾಯಣ ಗುರುಗಳ ಚಿಂತನೆ, ತತ್ವ ಸಿದ್ಧಾಂತವನ್ನು ಪಾಲಿಸಿ ಇಡೀ ಜಗತ್ತಿಗೆ ಮಾನವೀಯತೆಯನ್ನು ಸಾರಿದ ಅವರ ಹೆಸರಿನಲ್ಲಿ ಸಮುದಾಯ ಭವನ ನಿರ್ಮಿಸುವ ಕಾರ್ಯಕ್ಕೆ ಮುಂದಾಗುವ ಮೂಲಕ ಸಾರ್ಥಕತೆ ಆಗಿದೆ ಎಂದರು.ಮುಖ್ಯಮಂತ್ರಿಗಳ ವಿಶೇಷ 25 ಕೋಟಿ ರು. ಅನುದಾನದಲ್ಲಿ 17 ಕೋಟಿ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ, 2 ಕೋಟಿ ಸಮುದಾಯ ಭವನಕ್ಕೆ, 2 ಕೋಟಿ ಕ್ರೀಡೆಗೆ ಹಾಗೂ 1 ಕೋಟಿ ಪುರಸಭೆಗೆ ನೀಡಲಾಗಿದೆ. ಇದಲ್ಲದೆ ಲೋಕೋಪಯೋಗಿ ಇಲಾಖೆಗೆ 20 ಕೋಟಿ, ಹಾಗೂ ಪಂಚಾಯತ್ ರಾಜ್ ಮೂಲಕ 10 ಕೋಟಿಯನ್ನು ಮಾನ್ಯ ಮುಖ್ಯಮಂತ್ರಿಗಳು ನೀಡಿದ್ದಾರೆ. ಇವುಗಳನ್ನು ಸಹ ರಸ್ತೆಗಳಿಗೆ ಮೀಸಲಿಟ್ಟು ಕಾಮಗಾರಿ ಮಾಡುತ್ತೇವೆ ಎಂದು ಅವರು ಹೇಳಿದರು.
25 ವರ್ಷಗಳಿಂದ ಆಗದೆ ಇರುವ ಕೆಲಸಗಳನ್ನು ಒಂದೆರಡು ವರ್ಷಗಳಲ್ಲಿ ಆಗಬೇಕೆಂಬ ಜನರ ನಿರೀಕ್ಷೆ ತಪ್ಪು ಎಂದು ಹೇಳುವುದಿಲ್ಲ. ಆದರೆ ಅದಕ್ಕೆ ನಮಗೆ ಶಕ್ತಿ ದೊರೆಯ ಬೇಕಾಗಿದೆ ಹಾಗೂ ಹಂತ ಹಂತವಾಗಿ ಮೂಲಭೂತ ಸಮಸ್ಯೆ ನಿವಾರಿಸಲು ಬದ್ಧನಾಗಿರುವುದಾಗಿ ಶಾಸಕ ಪೊನ್ನಣ್ಣ ಪುನರುಚ್ಚರಿಸಿದರು.ಜಿಲ್ಲೆಯ ಇತಿಹಾಸದಲ್ಲೇ ಪ್ರಥಮ ಬಾರಿಗೆ ಜಿಲ್ಲೆಗೆ 208 ಕೋಟಿ ವಿದ್ಯುತ್ ಉನ್ನತೀಕರಣಕ್ಕೆ ಮಂಜೂರಾಗಿದ್ದು, ವಿದ್ಯುತ್ ಕಂಬಗಳ, ತಂತಿಗಳ, ವಿದ್ಯುತ್ ಟ್ರಾನ್ಸ್''''''''ಫಾರ್ಮರ್ ಉನ್ನತಿಕರಣಗಳಿಗೆ ಈ ಅನುದಾನವನ್ನು ಬಳಸಲಾಗುವುದು. ಇದಲ್ಲದೆ ವಿರಾಜಪೇಟೆ ಕ್ಷೇತ್ರ ವ್ಯಾಪ್ತಿಯಲ್ಲಿ ಆರು ವಿದ್ಯುತ್ ಉಪ ಕೇಂದ್ರ ಸ್ಥಾಪನೆಯಾಗಲಿದ್ದು ನಾಲ್ಕು ಉಪ ಕೇಂದ್ರಗಳು ಟೆಂಡರ್ ಆಗಿದೆ. ಮೂರ್ನಾಡು, ಹುದಿಕೇರಿ, ಬಾಳೆಲೆ ಸಿದ್ದಾಪುರ, ಕಳತ್ಮಾಡು, ಕಾಟಗೇರಿ ಇದಲ್ಲದೆ ಸಂಪಾಜೆ, ಭಾಗಮಂಡಲ, ಬಿರುನಾಣಿ ಬಾಕಿ ಇದ್ದು ಇದನ್ನು ಮುಂದಿನ ವರ್ಷದಲ್ಲಿ ಮುಗಿಸುತ್ತೇವೆ ಎಂದು ಹೇಳಿದರು.
ಕೊಡಗು ಜಿಲ್ಲೆಯಲ್ಲಿ 1.10 ಲಕ್ಷ ಕಿಲೋಮೀಟರ್ ರಸ್ತೆಗಳಿವೆ. ಏಕಕಾಲದಲ್ಲಿ ಎಲ್ಲವನ್ನು ಕೈಗೆತ್ತಿಕೊಳ್ಳಲು ಕಷ್ಟವಾಗುತ್ತದೆ. ಬಹುತೇಕ ಮಾಡುವ ಕೆಲಸ ಪ್ರಾಮಾಣಿಕವಾಗಿ ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದು ಅವರು ಈ ಸಂದರ್ಭ ಹೇಳಿದರು.ವಿರಾಜಪೇಟೆ ಸಮುದಾಯ ಆರೋಗ್ಯ ಕೇಂದ್ರ, ರಾಜ್ಯದಲ್ಲಿಯೇ ಐಸಿಯು ವಿಭಾಗದಲ್ಲಿ ಎರಡನೇ ಸ್ಥಾನದಲ್ಲಿದೆ. 7 ಡಯಾಲಿಸಿಸ್ ಯಂತ್ರಗಳು ಇದ್ದು ಯಾರು ಚಿಕಿತ್ಸೆಗಾಗಿ, ಸೌಲಭ್ಯ ಪಡೆಯಲು ಕಾಯುವಂತೆ ಇಲ್ಲ. ಎಲ್ಲರಿಗೂ ಸೌಲಭ್ಯ ಸಿಗುತ್ತಿದೆ.ಕಳೆದ ಒಂದುವರೆ ವರ್ಷಗಳಿಂದ ಸುಧಾರಣೆ ಹಾಗೂ ಬದಲಾವಣೆಯನ್ನು ತರುತ್ತಿದ್ದೇವೆ ಎಂದು ಪ್ರಾಮಾಣಿಕವಾಗಿ ಹೇಳಲು ಬಯಸುತ್ತೇನೆ ಎಂದು ಶಾಸಕ ಪೊನ್ನಣ್ಣ ನುಡಿದರು.
ಈ ಸಂದರ್ಭ ಶಾಸಕ ಪೊನ್ನಣ್ಣ ಅವರನ್ನು ಎಸ್ಎನ್. ಡಿ. ಪಿ ವತಿಯಿಂದ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷರಾದ ತೀತಿರ ಧರ್ಮಜ ಉತ್ತಪ್ಪ, ಪೊನ್ನಂಪೇಟೆ ಎಸ್ ಎನ್ ಡಿ ಪಿ ಅಧ್ಯಕ್ಷರಾದ ರುದ್ರಪ್ಪಣ್ಣ, ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಪೊನ್ನಂಪೇಟೆ ಎಸ್ ಎನ್ ಡಿ ಪಿ ಪ್ರಮುಖರಾದ ಶಾಜಿ ಅಚ್ಚುತ್ತನ್, ದಿಲೀಪ್, ವಿನು ಮನು, ಗೋಣಿಕೊಪ್ಪಲು ಎಸ್ ಎನ್ ಡಿ ಉಪಾಧ್ಯಕ್ಷ ಪಿ .ಜಿ. ರಾಜಶೇಖರ್, ಗೋಣಿಕೊಪ್ಪಲು ಎಸ್ ಎನ್ ಡಿ ಪಿ ಶಾಖ ಯೋಗಂ ಕಾರ್ಯಕಾರಿ ಸಮಿತಿಯ ಟಿ .ವಿ.ಪ್ರೇಮನ್ ವಿ .ಅರ್ ಸುಧೀರ್, ಸುದರ್ಶನ್, ಸೂರ್ಯ ಪೊನ್ನಂಪೇಟೆ ಬ್ಲಾಕ್ ಅದ್ಯಕ್ಷರು ಮೀದೇರಿರ ನವೀನ್ ಹಾಗೂ ವಿವಿಧ ಎಸ್ ಎನ್ ಡಿ ಪಿ ಶಾಖ ಯೋಗಂ ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಶ್ರೀ ನಾರಾಯಣ ಗುರುಗಳ ಅನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.