ಸಾರಾಂಶ
ಈವರೆಗೆ ಶೇ. 68 ರಷ್ಟು ಮಳೆ ಬಂದಿದೆ । ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ 90,090 ಹೆಕ್ಟೇರ್ ಬಿತ್ತನೆ ಗುರಿ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಜಿಲ್ಲೆಯಾದ್ಯಂತ ಎಲ್ಲಾ ತಾಲೂಕುಗಳಲ್ಲಿ ಉತ್ತಮ ಮಳೆಯಾಗಿದ್ದು, ಪೂರ್ವ ಮುಂಗಾರು ಕೃಷಿಗೆ ಭೂಮಿ ಸಿದ್ಧತೆ ಚಟುವಟಿಕೆ ಚುರುಕುಗೊಂಡಿದೆ. ಅಶ್ವಿನಿ ಮಳೆ ನಕ್ಷತ್ರದಿಂದ ಉತ್ತಮ ಆರಂಭ ಪಡೆದ ಮಳೆ ಇದುವರೆಗೆ 94 ಮಿ.ಮೀ.ನಷ್ಟು (ಶೇ.68 ರಷ್ಟು ಹೆಚ್ಚು) ಬಂದಿದ್ದು, ಕೃಷಿ ಯೋಗ್ಯ ವಾತಾವರಣ ಕಲ್ಪಿಸಿಕೊಟ್ಟಿದೆ ಎಂದು ಜಂಟಿ ಕೃಷಿ ನಿರ್ದೇಶಕಿ ಸುಜಾತಾ ತಿಳಿಸಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ 90,090 ಹೆಕ್ಟೇರ್ ಬಿತ್ತನೆ ಗುರಿ ಹೊಂದಿದ್ದು, ಪೂರ್ವ ಮುಂಗಾರು ಹಂಗಾಮಿಗೆ 9,155 ಹೆಕ್ಟೇರ್ ಪ್ರದೇಶದಲ್ಲಿ (ನೆಲಗಡಲೆ 2,200 ಹೆಕ್ಟೇರ್, ಹೆಸರು 1,710 ಹೆಕ್ಟೇರ್, ಹತ್ತಿ 1,420 ಹೆಕ್ಟೇರ್, ಅಲಸಂದೆ 1,300 ಹೆಕ್ಟೇರ್, ಉದ್ದು 425 ಹೆಕ್ಟೇರ್, ಎಳ್ಳು 2,100 ಹೆಕ್ಟೇರ್) ಬಿತ್ತನೆ ಗುರಿ ಹೊಂದಲಾಗಿದೆ. ಬಿತ್ತನೆ ಬೀಜ ಪೂರೈಕೆ
ಪೂರ್ವ ಮುಂಗಾರು ಹಂಗಾಮಿಗೆ ಜಿಲ್ಲೆಯಲ್ಲಿ 1009.25 ಕ್ವಿಂಟಾಲ್ ಬಿತ್ತನೆ ಬೀಜದ ಗುರಿಯಿದ್ದು, ಬೇಡಿಕೆಗೆ ಅನುಸಾರವಾಗಿ ಬಿತ್ತನೆಗೆ ಅನುಕೂಲವಾಗುವಂತೆ ಉದ್ದು, ಹೆಸರು, ಅಲಸಂದೆ, ನೆಲಗಡಲೆ ಬಿತ್ತನೆ ಬೀಜಗಳನ್ನು ರೈತ ಸಂಪರ್ಕ ಕೇಂದ್ರ ಗಳಲ್ಲಿ ದಾಸ್ತಾನು ಮಾಡಲಾಗಿದ್ದು ರಿಯಾಯಿತಿ ದರದಲ್ಲಿ ವಿತರಿಸುವ ಕಾರ್ಯ ಪ್ರಗತಿಯಲ್ಲಿದೆ. ಬಿತ್ತನೆ ಬೀಜದಲ್ಲಿ ಯಾವುದೇ ಕೊರತೆಯಾಗಿಲ್ಲ. ಅದರಂತೆ ಮುಂಗಾರು ಹಂಗಾಮಿಗೆ ಜಿಲ್ಲೆಯಲ್ಲಿ 4308.89 ಕ್ವಿಂಟಾಲ್ ಬಿತ್ತನೆ ಬೀಜಗಳಿಗೆ ಬೇಡಿಕೆ ಇದ್ದು, ಅಗತ್ಯವಾದ ಬಿತ್ತನೆ ಬೀಜಗಳನ್ನು ರಿಯಾಯಿತಿ ದರದಲ್ಲಿ ರೈತ ಸಂಪರ್ಕ ಕೇಂದ್ರಗಳ ಮೂಲಕ ಸಕಾಲದಲ್ಲಿ ರೈತರ ಬೇಡಿಕೆಗೆ ಅನುಗುಣವಾಗಿ ಪೂರೈಸಲು ಇಲಾಖೆ ಸಜ್ಜುಗೊಂಡಿದೆ ಎಂದು ಹೇಳಿದ್ದಾರೆ.ಅಧಿಕೃತ ಮಾರಾಟಗಾರರಿಂದ ಖರೀದಿ ಸೂಕ್ತರೈತರು ಅಧಿಕೃತ ಬಿತ್ತನೆ ಬೀಜ ಮಾರಾಟಗಾರರಿಂದಲೇ ಬಿತ್ತನೆ ಬೀಜ ಖರೀದಿಸುವುದು ಉತ್ತಮ. ಬಿತ್ತನೆ ಬೀಜ ಹಾಗೂ ರಸಗೊಬ್ಬರ ಖರೀದಿಸಿದಾಗ ತಪ್ಪದೇ ಅಧಿಕೃತ ರಶೀದಿ ಪಡೆಯಬೇಕು. ಬಿತ್ತನೆ ಬೀಜ ರಶೀದಿಯಲ್ಲಿ ಲಾಟ್ ನಂಬರ್ ನಮೂದಿಸಿರಬೇಕು. ಬಿತ್ತನೆ ಬೀಜದ ಚೀಲ, ಸ್ವಲ್ಪ ಪ್ರಮಾಣದ ಬಿತ್ತನೆ ಬೀಜ, ದೃಢೀಕರಣದ ಬಗ್ಗೆ ಲಗತ್ತಿಸಿರುವ ಟ್ಯಾಗ್‌ಗಳನ್ನು ಬೆಳೆ ಕಟಾವು ಆಗುವವರೆಗೆ ಸುರಕ್ಷಿತವಾಗಿ ಕಾಯ್ದಿಟ್ಟುಕೊಳ್ಳಬೇಕು.ಬಿತ್ತನೆ ಬೀಜವನ್ನು ಉಪಚರಿಸಲಾಗಿದೆಯೆ ಎಂಬುದನ್ನು ಗಮನಿಸುವುದು ಹಾಗೂ ಒಂದು ವೇಳೆ ಈ ಬಿತ್ತನೆ ಬೀಜಗಳು ಬೀಜೋಪಚಾರವಾಗಿರದಿದ್ದಲ್ಲಿ ಬೀಜದಿಂದ ಹಾಗೂ ಮಣ್ಣಿನಿಂದ ಹರಡುವ ರೋಗ ಮತ್ತು ಕೀಟಗಳಿಂದ ಬೆಳೆಗಳನ್ನು ರಕ್ಷಿಸಲು ಬೀಜವನ್ನು ಬಿತ್ತನೆಗೆ ಉಪಯೋಗಿಸುವ ಮೊದಲು ಸೂಕ್ತರೀತಿ ಉಪಚರಿಸಿ ಬಿತ್ತುವುದರಿಂದ ನಿರ್ವಹಣೆಗಳೊಂದಿಗೆ ಹೆಚ್ಚಿನ ಇಳುವರಿ ಪಡೆಯಬಹುದು.ರಸಗೊಬ್ಬರ ಪೂರೈಕೆ
ಜಿಲ್ಲೆಯಲ್ಲಿ ಏಪ್ರಿಲ್ ಮಾಸದವರೆಗೆ ಒಟ್ಟು 17,822 ಟನ್ ವಿವಿಧ ರಸಗೊಬ್ಬರಗಳ ಬೇಡಿಕೆ ಇದ್ದು ಪ್ರಸ್ತುತ ದಾಸ್ತಾನು ಮತ್ತು ರಸಗೊಬ್ಬರ ಮಾರಾಟಗಾರರಲ್ಲಿ ಒಟ್ಟು 26541 ಟನ್ (ಡಿಎಪಿ- 750, ಕಾಂಪ್ಲೆಕ್ಸ್ 14072 ಟನ್, ಎಂಒಪಿ 4427 ಟನ್, ಯೂರಿಯಾ 6057 ಟನ್, ಎಸ್‌ಎಸ್‌ಪಿ 1235 ಟನ್) ರಸಗೊಬ್ಬರ ದಾಸ್ತಾನಿದ್ದು, ರಸಗೊಬ್ಬರದ ಯಾವುದೇ ಕೊರತೆ ಇರುವುದಿಲ್ಲ.ರೈತರು ರಸಗೊಬ್ಬರಗಳನ್ನು ಖರೀದಿಸುವಾಗ ಚೀಲದ ಮೇಲೆ ನಮೂದಿಸಿರುವ ಎಂ.ಆರ್.ಪಿ ದರದಲ್ಲಿಯೇ ಖರೀದಿಸಬೇಕು ಹಾಗೂ ಕಡ್ಡಾಯವಾಗಿ ರಸೀದಿ ಪಡೆಯಬೇಕು. ರಸಗೊಬ್ಬರ ಮಾರಾಟಗಾರರು ಎಂ.ಆರ್.ಪಿ ದರಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು ಕಂಡುಬಂದಲ್ಲಿ ಹತ್ತಿರದ ರೈತ ಸಂಪರ್ಕ ಕೇಂದ್ರ, ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ಉಪ ಕೃಷಿ ನಿರ್ದೇಶಕರ ಕಚೇರಿ, ಜಂಟಿ ಕೃಷಿ ನಿರ್ದೇಶಕರ ಕಚೇರಿಗೆ ಸೂಕ್ತ ದಾಖಲೆಯೊಂದಿಗೆ ಮಾಹಿತಿ ನೀಡಿದಲ್ಲಿ ಅಂತಹ ರಸಗೊಬ್ಬರ ಮಾರಾಟಗಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.ಪೋಟೋ ಫೈಲ್ ನೇಮ್ 25 ಕೆಸಿಕೆಎಂ 5