ಸಾರಾಂಶ
- ಜಿಲ್ಲೆಯ ಜಗಳೂರು, ದಾವಣಗೆರೆ, ಹರಿಹರ, ಚನ್ನಗಿರಿ, ನ್ಯಾಮತಿ, ಹೊನ್ನಾಳಿ ಭಾಗದಲ್ಲಿ ಹದ ಮಳೆ
- - -ಕನ್ನಡಪ್ರಭ ವಾರ್ತೆ, ದಾವಣಗೆರೆ
ಜಿಲ್ಲಾದ್ಯಂತ ಕಳೆದ ಐದಾರು ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, ಸೋಮವಾರ ಸುರಿದ ಮಳೆಯು ಜಿಲ್ಲೆಯ ಬರವನ್ನೇ ನೀಗಿಸುವಷ್ಟರ ಮಟ್ಟಿಗೆ ರೈತರು ನಿಟ್ಟಿಸಿರು ಬಿಡುವಂತೆ ಮಾಡಿದೆ. ಜಿಲ್ಲಾದ್ಯಂತ ಬುಧವಾರದವರೆಗೆ ಸರಾಸರಿ 3.2 ಮಿಮೀ ಮಳೆಯಾಗಿದೆ.ಮುಂಗಾರು ಪೂರ್ವ ಮಳೆಯಿಂದಾಗಿಯೇ ಜಿಲ್ಲಾದ್ಯಂತ ಕೆರೆ, ಕಟ್ಟೆಗಳಿಗೆ ಸಾಕಷ್ಟು ಪ್ರಮಾಣದಲ್ಲಿ ನೀರು ಹರಿದುಬಂದಿದೆ. ಬರಪೀಡಿತ ಜಗಳೂರು ತಾಲೂಕಿನ ಕೆರೆಗಳೂ ನೀರು ಕಾಣುತ್ತಿವೆ. ಬರದಿಂದ ಕಾದ ಕಾವಲಿಯಂತಾಗಿದ್ದ ಭೂಮಿಯೂ ಈಗ ತಂಪಾಗಿ, ತಣಿದಿದೆ. ಕಳೆದ ವರ್ಷವಿಡೀ ಮಳೆ ಇಲ್ಲದೇ ಬರಿದಾಗಿದ್ದ ಕೆರೆಗಳು ತಮ್ಮೊಡಲ್ಲಿ ಈಗ ಮಳೆನೀರು ಸಂಗ್ರಹಿಸಿಟ್ಟುಕೊಳ್ಳುತ್ತಿವೆ. ಜಿಲ್ಲೆಯಲ್ಲಿ ಮುಂಗಾರು ಪೂರ್ವದ ಮಳೆಯಿಂದಾಗಿ ಕೃಷಿ ಚಟುವಟಿಕೆ ಗರಿಗೆದರಿವೆ. ವಿಶೇಷವಾಗಿ ಕಳೆದೊಂದು ದಶಕದಿಂದ ತೀವ್ರ ಬರವನ್ನೇ ಹಾಸಿ, ಹೊದ್ದಿರುವ ಜಗಳೂರಿನಲ್ಲಿ ಅತಿ ಹೆಚ್ಚು ಮಳೆ ಆಗಿರುವುದು ಅಲ್ಲಿನ ಮಳೆಯಾಶ್ರಿತ ರೈತರಲ್ಲಿ ಜೀವನೋತ್ಸಾಹ ತಂದಿದೆ. ದಾವಣಗೆರೆ, ಹರಿಹರ, ಚನ್ನಗಿರಿ, ನ್ಯಾಮತಿ, ಹೊನ್ನಾಳಿ ಭಾಗದಲ್ಲೂ ಉತ್ತಮ ಮಳೆಯಾಗಿದೆ. ಒಂದೇ ಮಳೆಗೆ, ರಾತ್ರೋರಾತ್ರಿ ಸುರಿದ ಮಳೆಯಿಂದಾಗಿ ಸಾಕಷ್ಟು ಕೆರೆಗಳಿಗೆ ಅಪಾರ ನೀರು ಹರಿದು ಬಂದಿರುವುದು ಗಮನಾರ್ಹ. ಐದಾರು ದಿನಗಳ ಮಳೆಯಿಂದಾಗಿ ಅಂತರ್ಜಲವೂ ಹೆಚ್ಚಳವಾಗಿದೆ. ಕಳೆದೊಂದು ವರ್ಷದಿಂದ ಮೇವು, ಅದರಲ್ಲೂ ಹಸಿ ಮೇವನ್ನೇ ಕಾಣದಿದ್ದ ರಾಸುಗಳಿಗೆ ಹಸಿಹುಲ್ಲು ಸಿಗುವಂತಾಗಿದೆ. ಬಿಸಿಲ ಝಳ, ಉಷ್ಣ ಗಾಳಿಯಿಂದ ಒಣಗಿ ನಾಶವಾಗುತ್ತಿದ್ದ ತೆಂಗು, ಅಡಕೆ, ಬಾಳೆ, ಕಬ್ಬಿನ ಬೆಳೆಗಳು ಒಂದಿಷ್ಟು ಚೇತರಿಕೆ ಕಾಣುವಂತಾಗಿದೆ. ಅಡಕೆ ತೋಟಗಳನ್ನು ಉಳಿಸಿಕೊಳ್ಳಲು ಮನೆಯಲ್ಲಿ ಒಡವೆ, ವಸ್ತುಗಳನ್ನು ಮಾರಾಟ ಮಾಡಿ, ಟ್ಯಾಂಕರ್ ನೀರಿನ ಮೊರೆಹೋಗಿದ್ದ ರೈತರು ಕಡೆಗೂ ಕೃಪೆ ತೋರಿದ ವರುಣನಿಗೆ ಕೃತಜ್ಞತೆ ಅರ್ಪಿಸುವಂತಾಗಿದೆ.
- - - ಬಾಕ್ಸ್ 2.45 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಗುರಿಸದ್ಯಕ್ಕೆ ಜಿಲ್ಲೆಯಲ್ಲಿ 2.45 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಗುರಿ ಹೊಂದಿದ್ದು, ಬಿತ್ತನೆಬೀಜ, ರಸಗೊಬ್ಬರಕ್ಕೆ ಯಾವುದೇ ಕೊರತೆ ಆಗದಂತೆ ಕೃಷಿ ಇಲಾಖೆ ಮುನ್ನೆಚ್ಚರಿಕೆ ವಹಿಸಿದೆ. ಜಿಲ್ಲೆಗೆ ಸುಮಾರು 50 ಸಾವಿರ ಕ್ವಿಂಟಲ್ ಬಿತ್ತನೆ ಬೀಜದ ಅಗತ್ಯವಿದೆ. ಅಗತ್ಯಕ್ಕಿಂತ ಹೆಚ್ಚು ಅಂದರೆ 52 ಸಾವಿರ ಕ್ವಿಂಟಲ್ ಬಿತ್ತನೆ ಬೀಜ ದಾಸ್ತಾನು ಇದೆ. 23 ಸಾವಿರ ಕ್ವಿಂಟಲ್ ಮೆಕ್ಕೆಜೋಳ, 15 ಕ್ವಿಂಟಲ್ ಬತ್ತ, ಇತರೆ ಧಾನ್ಯ 10 ಕ್ವಿಂಟಲ್‌ನಷ್ಟು ದಾಸ್ತಾನು ಇದೆ. ಮೇ ತಿಂಗಳಲ್ಲಿ 23,154 ಟನ್ ರಸಗೊಬ್ಬರಕ್ಕೆ ಜಿಲ್ಲೆಯಲ್ಲಿ ಬೇಡಿಕೆ ಇದೆ. 43,646 ಕ್ವಿಂಟಲ್ ರಸಗೊಬ್ಬರ ದಾಸ್ತಾನು ಇದೆ. ಮೇ ತಿಂಗಳಲ್ಲಿ 6,303 ಟನ್ ಯೂರಿಯಾಗೆ ಬೇಡಿಕೆ ಇದೆ. 11,996 ಟನ್ ಯೂರಿಯಾ ದಾಸ್ತಾನು ಇದೆ. 3908 ಟನ್ ಡಿಎಪಿ ಬೇಡಿಕೆ ಇದ್ದು, 6626 ಟನ್ ಸಂಗ್ರಹವಿದೆ. ಎನ್‌ಪಿಕೆ ಕಾಂಪ್ಲೆಕ್ಸ್ ಗೊಬ್ಬರ 11,627 ಟನ್‌ಗೆ ಬೇಡಿಕೆ ಇದ್ದು, 22,885 ಟನ್ ದಾಸ್ತಾನಿದೆ ಎಂದು ಕೃಷಿ ಇಲಾಖೆ ಹೇಳಿದೆ. - - -(-ಸಾಂದರ್ಭಿಕ ಚಿತ್ರ)
;Resize=(128,128))
;Resize=(128,128))
;Resize=(128,128))
;Resize=(128,128))