ಸಾರಾಂಶ
ಬೆಂಗಳೂರು : ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ಮುಂಗಾರು ಪೂರ್ವ ಮಳೆ ಮಂಗಳವಾರ ಸಂಜೆ ಮತ್ತ ಬುಧವಾರ ಧಾರಾಕಾರವಾಗಿ ಸುರಿದಿದ್ದು, ಹಲವು ಅನಾಹುತಗಳನ್ನು ಸೃಷ್ಟಿ ಮಾಡಿದೆ.
ಭಾರೀ ಗಾಳಿ-ಮಳೆಯಿಂದಾಗಿ ಜೋಯಿಡಾ ತಾಲೂಕಿನ ಉಳವಿ ಗ್ರಾಪಂನ ಶಿವಪುರದ ಹಿರಿಯ ಪ್ರಾಥಮಿಕ ಶಾಲೆ ಮೇಲೆ ಅಡಿಕೆ ಮರವೊಂದು ಮುರಿದು ಬಿದ್ದಿದೆ. ಇದರಿಂದ ಶಾಲಾ ಕಟ್ಟಡ ಜಖಂಗೊಂಡಿದೆ. ಏಳು ವಿದ್ಯಾರ್ಥಿಗಳಿಗೆ ಗಾಯಗಳಾಗಿದ್ದು, ಯಲ್ಲಾಪುರ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾತ್ಕಾರಣಿ ಅಂಗನವಾಡಿ ಸಿಮೆಂಟ್ ಶೀಟುಗಳೆಲ್ಲ ಗಾಳಿಗೆ ಹಾರಿ ಹೋಗಿವೆ.
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ಮೂಡಿಗೆರೆ, ಕೊಪ್ಪ ಹಾಗೂ ಎನ್.ಆರ್.ಪುರ ತಾಲೂಕುಗಳಲ್ಲಿ ಗುಡುಗು ಸಹಿತ ಮಳೆಯಾಗಿದೆ. ಬಾಳೂರು ಸಮೀಪದ ಕಲ್ಲಕ್ಕಿ ಮುಖ್ಯ ರಸ್ತೆಗೆ ಮರ ಉರುಳಿ ಬಿದ್ದು ಕೆಲ ಸಮಯ ಸಂಚಾರ ಸ್ಥಗಿತವಾಗಿತ್ತು. ಬಾಳೆಹೊನ್ನೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಹ ಗುಡುಗು ಸಹಿತ ಧಾರಾಕಾರ ಮಳೆಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಹಲವು ಭಾಗಗಳಲ್ಲಿ ಸಂಜೆ ಗುಡುಗು, ಗಾಳಿ ಸಹಿತ ಉತ್ತಮ ಮಳೆಯಾಗಿದೆ. ಉಡುಪಿ ಜಿಲ್ಲೆಯ ಕಾರ್ಕಳ, ಹೆಬ್ರಿ ತಾಲೂಕಲ್ಲೂ ಧಾರಾಕಾರ ಮಳೆ ಸುರಿದು, ಹಲವೆಡೆ ಮರಗಳು ಧರೆಗುರುಳಿ ಅಪಾರ ಹಾನಿ ಸಂಭವಿಸಿದೆ. ಹಾಗೆಯೇ ಕೊಡಗು ಜಿಲ್ಲೆ ನಾಪೋಕ್ಲು ಸುತ್ತಮುತ್ತಲಿನ ಗ್ರಾಮಗಳಲ್ಲಿ ಗುಡುಗು, ಆಲಿಕಲ್ಲು ಸಹಿತ ಭಾರಿ ಮಳೆ ಸುರಿದಿದೆ. ಕುಶಾಲನಗರ ತಾಲೂಕಿನ ಕಣಿವೆ, ಹಕ್ಕೆ ತೊರೆನೂರು, ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಸಾಧಾರಣ ಮಳೆಯಾಗಿದೆ.