ಸಾರಾಂಶ
ಅತಿಥಿ ಶಿಕ್ಷಕರಿಗೆ ಪ್ರತ್ಯೇಕ ಅನುದಾನವಿಲ್ಲ. ಕೆಕೆಆರ್‌ಡಿಬಿಯಲ್ಲಿಯೇ ಶಾಸಕರ ಶಿಫಾರಸಿನ ಮೇಲೆ ಅನುದಾನ ಪಡೆಯುವಂತೆ ಯೋಜನೆ ರೂಪಿಸಿದ ವೇಳೆ ತಿಳಿಸಲಾಗಿದೆ. ಆದರೆ, ಕಾಲಕಾಲಕ್ಕೆ ಗೌರವಧನ ನೀಡಲು ಅನುದಾನ ಲಭ್ಯವಾಗುತ್ತಿಲ್ಲ.
ಸೋಮರಡ್ಡಿ ಅಳವಂಡಿ
ಕನ್ನಡಪ್ರಭ ವಾರ್ತೆ ಕೊಪ್ಪಳಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರಾಯೋಗಿಕವಾಗಿ ಸರ್ಕಾರಿ ಶಾಲೆಗಳಲ್ಲಿಯೇ ಪೂರ್ವ ಪ್ರಾಥಮಿಕ ಹಾಗೂ ದ್ವಿಭಾಷಾ ಶಾಲೆ ಪ್ರಾರಂಭಿಸಿದ್ದು, ಇದಕ್ಕೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಆದರೆ, ಇವರಿಗೆ ಕಳೆದ 7 ತಿಂಗಳಿಂದ ಗೌರವಧನ ನೀಡದೆ ಇರುವುದರಿಂದ ಅವರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ರಾಜ್ಯದಲ್ಲಿಯೇ ವಿಶೇಷವಾಗಿ ಕಲ್ಯಾಣ ಕರ್ನಾಟಕ ಭಾಗದ ಕೊಪ್ಪಳ ಸೇರಿದಂತೆ ಏಳು ಜಿಲ್ಲೆಗಳಲ್ಲಿ ಕಾನ್ಮೆಂಟ್ ಮಾದರಿಯ ಪೂರ್ವ ಪ್ರಾಥಮಿಕ ಶಾಲೆ ಮತ್ತು ದ್ವಿಭಾಷಾ ಶಾಲೆಯನ್ನು 2024-25ನೇ ಸಾಲಿಗೆ ಪ್ರಾಯೋಗಿಕವಾಗಿ ಪ್ರತಿ ಜಿಲ್ಲೆಯಲ್ಲಿಯೂ 100 ಶಾಲೆ ಪ್ರಾರಂಭಿಸಲಾಗಿದೆ. ಇಲ್ಲಿಗೆ ಪೂರ್ವ ಪ್ರಾಥಮಿಕ ಶಾಲೆಗೆ ಓರ್ವರು ಹಾಗೂ ದ್ವಿಭಾಷಾ ಶಾಲೆಗೆ ಎರಡ್ಮೂರು ಅತಿಥಿ ಶಿಕ್ಷಕರನ್ನು ನೇಮಿಸಲಾಗಿದೆ. ಪ್ರಾರಂಭದಲ್ಲಿ ನಾಲ್ಕು ತಿಂಗಳು ವೇತನ ನೀಡಿದ್ದು 2024ರ ಸೆಪ್ಪೆಂಬರ್‌ನಿಂದ ಈ ವರೆಗೂ ವೇತನ ನೀಡಿಲ್ಲ.ಅನುದಾನ ಸಮಸ್ಯೆ:
ಈ ಶಾಲೆಗೆ ನೇಮಿಸಿದ ಅತಿಥಿ ಶಿಕ್ಷಕರಿಗೆ ಪ್ರತ್ಯೇಕ ಅನುದಾನವಿಲ್ಲ. ಕೆಕೆಆರ್‌ಡಿಬಿಯಲ್ಲಿಯೇ ಶಾಸಕರ ಶಿಫಾರಸಿನ ಮೇಲೆ ಅನುದಾನ ಪಡೆಯುವಂತೆ ಯೋಜನೆ ರೂಪಿಸಿದ ವೇಳೆ ತಿಳಿಸಲಾಗಿದೆ. ಆದರೆ, ಕಾಲಕಾಲಕ್ಕೆ ಗೌರವಧನ ನೀಡಲು ಅನುದಾನ ಲಭ್ಯವಾಗುತ್ತಿಲ್ಲ.ಉತ್ತಮ ಪ್ರತಿಕ್ರಿಯೆ:
ಕಲ್ಯಾಣ ಕರ್ನಾಟಕ ಭಾಗ ಶೈಕ್ಷಣಿಕವಾಗಿ ಭಾರಿ ಹಿಂದುಳಿದಿದೆ. ಅದರಲ್ಲೂ ಬಹುತೇಕರು ಮಕ್ಕಳನ್ನು ಕನ್ನಡ ಶಾಲೆ ಬಿಡಿಸಿ, ಆಂಗ್ಲಮಾಧ್ಯಮ ಖಾಸಗಿ ಶಾಲೆಗೆ ಕಳುಹಿಸುತ್ತಾರೆ. ಇದನ್ನು ತಪ್ಪಿಸಬೇಕು ಎಂದು ಕಾನ್ವೆಂಟ್ ಮಾದರಿಯಲ್ಲಿ ಇರುವ ಕನ್ನಡ ಶಾಲೆಯಲ್ಲಿಯೇ ಪ್ರತ್ಯೇಕ ವಿಭಾಗ ಮಾಡಿ 1ನೇ ತರಗತಿಯಿಂದ ಪ್ರಾರಂಭಿಸಲಾಗಿದೆ. ಪಾಲಕರಿಂದಲೂ ಉತ್ತಮ ಪ್ರತಿಕ್ರಿಯೆ ಬಂದಿದ್ದು, ನಿರೀಕ್ಷೆ ಮೀರಿ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ.10 ಸಾವಿರ ಗೌರವಧನ:
ಈ ಶಾಲೆಗಳ ಅತಿಥಿ ಶಿಕ್ಷಕರಿಗೆ ಗೌರವಧನವಾಗಿ ಕೇವಲ ₹ 10000 ನೀಡಲಾಗುತ್ತಿದೆ. ನರೇಗಾ ಯೋಜನೆಯಲ್ಲಿ ಕಾರ್ಮಿಕರಿಗೆ ಕೊಡುವ ಕನಿಷ್ಠ ಕೂಲಿಗಿಂತಲೂ ಕಡಿಮೆಯಾಗಿದೆ. ನರೇಗಾದಲ್ಲಿ ₹ 375 ಪ್ರತಿದಿನಕ್ಕೆ ನೀಡಿದರೆ, ಇವರಿಗೆ ₹ 300 ಆಗುತ್ತದೆ. ಹೀಗಾಗಿ, ನರೇಗಾದಲ್ಲಿ ಕೆಲಸ ಮಾಡುವವರಿಗಿಂತಲೂ ಕಡಿಮೆ ಕೂಲಿ ಪಡೆಯುವಂತೆ ಆಗಿದೆ. ಆದರೂ ಅದು ಸಕಾಲಕ್ಕೆ ಬರುತ್ತಿಲ್ಲ ಎಂದು ಅತಿಥಿ ಶಿಕ್ಷಕರು ಅಳಲು ತೋಡಿಕೊಂಡಿದ್ದಾರೆ.ಗೌರವಧನ ನೀಡಿಲ್ಲವೆಂದು ಯಾರಿಗೂ ಹೇಳುವಂತಿಲ್ಲ. ಹೇಳಿದರೆ ಕೆಸಲದಿಂದ ಕಿತ್ತು ಹಾಕುತ್ತಾರೆಂಬ ಭಯ. ತಿಂಗಳಿಗೆ ಕೇವಲ ₹ 10000 ನೀಡುತ್ತಿದ್ದು ಏಳು ತಿಂಗಳಿಂದ ಅದನ್ನು ನೀಡುತ್ತಿಲ್ಲ. ಇದರಿಂದ ಜೀವನ ನಿರ್ವಹಣೆ ಕಷ್ಟಸಾಧ್ಯವಾಗಿದೆ.ಹೆಸರು ಹೇಳದ ಶಿಕ್ಷಕ ದ್ವಿಭಾಷೆ ಹಾಗೂ ಪೂರ್ವಪ್ರಾಥಮಿಕ ಶಾಲಾ ಅತಿಥಿ ಶಿಕ್ಷಕರ ಗೌರವಧನವನ್ನು ಬಾಕಿ ಇಟ್ಟುಕೊಳ್ಳದೆ ನೀಡಲಾಗಿದೆ. ಗೌರವಧನ ನೀಡುವಲ್ಲಿ ಯಾವುದೇ ಸಮಸ್ಯೆಯಾಗಿಲ್ಲ.
ಶ್ರೀಶೈಲ ಬಿರಾದರ ಡಿಡಿಪಿಐ ಕೊಪ್ಪಳ ಪೂರ್ವ ಪ್ರಾಥಮಿಕ ಮತ್ತು ದ್ವಿಭಾಷಾ ಶಾಲೆಯಲ್ಲಿ ಕೆಲಸ ಮಾಡುತ್ತಿರುವ ಅತಿಥಿ ಶಿಕ್ಷಕರ ಗೌರವಧನ ವಿಳಂಬವಾಗಿದೆ. ಅನುದಾನ ಬಂದಿದ್ದು, ವಾರದಲ್ಲಿ ಆಗುತ್ತದೆ.ಶಂಕ್ರಯ್ಯ ಬಿಇಒ ಕೊಪ್ಪಳ