ಸಾರಾಂಶ
ಆರೋಗ್ಯ ನಿರೀಕ್ಷಕ ನಿಜಲಿಂಗಪ್ಪ ಅವರು ವೈಯಕ್ತಿಕ ಮಟ್ಟದಲ್ಲಿ ಪಾಲಿಸಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ವಿವರಿಸಿದರು.
ಅರಸೀಕೆರೆ: ಡೆಂಘೀ ಚಿಕಿತ್ಸೆಗಾಗಿ ಯಾವುದೇ ನಿರ್ದಿಷ್ಟ ಔಷಧಿ ಲಭ್ಯವಿಲ್ಲ. ಈ ರೋಗದ ವಿರುದ್ಧ ಹೋರಾಡಲು ಮುನ್ನೆಚ್ಚರಿಕೆ ಹಾಗೂ ಜಾಗೃತಿಯೇ ಅತ್ಯಂತ ಪರಿಣಾಮಕಾರಿ ಮಾರ್ಗ ಎಂದು ಬಾಣಾವರ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆ ಡಾ. ನಿವೇದಿತಾ ತಿಳಿಸಿದರು.
ತಾಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರೆಡ್ ರಿಬ್ಬನ್ ಕ್ಲಬ್, ಐಕ್ಯೂಎಸಿ ಹಾಗೂ ವಿವಿಧ ಸಮಿತಿಗಳ ಸಹಯೋಗದೊಂದಿಗೆ ಸಮಗ್ರ ಆರೋಗ್ಯ ಜಾಗೃತಿ ಕಾರ್ಯಕ್ರಮ ಮತ್ತು ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿದ ಅವರು, ಡೆಂಘೀ ರೋಗದಲ್ಲಿ ತೀವ್ರ ಜ್ವರ, ತಲೆನೋವು, ದೇಹದಲ್ಲಿ ರಾಶಿ, ಮಜ್ಜೆ ನೋವು ಸೇರಿ ವಿವಿಧ ಲಕ್ಷಣಗಳು ಕಾಣಿಸುತ್ತವೆ. ಇದು ಐಡಿಸ್ ಎಜಿಪ್ಟೈ ಸೊಳ್ಳೆಯಿಂದ ಹರಡುತ್ತದೆ. ಮಲೇರಿಯಾ ರೋಗದಲ್ಲಿ ಚಳಿ, ಬೆಚ್ಚಗಿನ ಅವಸ್ಥೆ, ತಲೆನೋವು, ವಾಂತಿ ಮುಂತಾದವು ಸಾಮಾನ್ಯ. ಇದು ಅನೋಫಿಲಿಸ್ ಸೊಳ್ಳೆ ಮೂಲಕ ಹರಡುತ್ತದೆ. ರೋಗಗಳ ತಡೆಗೆ ನೀರು ನಿಲ್ಲದಂತೆ ನೋಡಿಕೊಳ್ಳುವುದು, ಸೊಳ್ಳೆ ನಿವಾರಣಾ ಕ್ರಮ ಅನುಸರಿಸುವುದು, ಮಜ್ಜರದ ಜಾಲಿ ಉಪಯೋಗಿಸುವುದು ಹಾಗೂ ಶುದ್ಧತೆಯ ಪಾಲನೆ ಮಾಡುವುದು ಅತ್ಯಗತ್ಯವೆಂದು ಹೇಳಿದರು.ಶಿಬಿರದ ಸಂದರ್ಭದಲ್ಲಿ ಡಾ. ನಿವೇದಿತಾ ಅವರು ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ನಡೆಸಿದರು.
ಆರೋಗ್ಯ ನಿರೀಕ್ಷಕ ಶ್ರೀ ಪ್ರಸನ್ನ ಅವರು ಸೊಳ್ಳೆಗಳ ನಿಯಂತ್ರಣ ಮತ್ತು ಪರಿಸರ ಸ್ವಚ್ಛತೆ ಮೂಲಕ ಡೆಂಘೀ ಹಾಗೂ ಮಲೇರಿಯಾ ತಡೆಗೆ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಉಪಯುಕ್ತ ಮಾಹಿತಿ ನೀಡಿದರು.ಮತ್ತೊಬ್ಬ ಆರೋಗ್ಯ ನಿರೀಕ್ಷಕ ನಿಜಲಿಂಗಪ್ಪ ಅವರು ವೈಯಕ್ತಿಕ ಮಟ್ಟದಲ್ಲಿ ಪಾಲಿಸಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಗೀತಾ ಮಾತನಾಡಿ, ಡೆಂಘೀ ರೋಗದ ಪರಿಣಾಮಗಳು ಅಪಾಯಕಾರಿಯಾಗಿದ್ದು, ವಿದ್ಯಾರ್ಥಿಗಳು ಹಾಗೂ ಎಲ್ಲಾ ಸಾರ್ವಜನಿಕರು ಇದರ ಬಗ್ಗೆ ಜಾಗೃತರಾಗಬೇಕು. ಶುದ್ಧತೆಯ ಪಾಲನೆ ಮತ್ತು ಸರಿಯಾದ ಮಾಹಿತಿ ಸ್ವೀಕರಣದಿಂದ ಡೆಂಘೀ ತಡೆಗಟ್ಟುವಿಕೆ ಸಾಧ್ಯ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಯೋಜಕರಾದ ಡಾ. ಸುನಿಲ್ ಕುಮಾರ್ ಎಂ.ಎನ್, ಆರೋಗ್ಯ ನಿರೀಕ್ಷಕಿ ಶ್ರೀಮತಿ ಜವರಮ್ಮ, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಎಸ್. ನಾರಾಯಣ ಹಾಗೂ ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.