ಶಿರಸಿ ಬಂದ್‌ಗೆ ಕರೆ ನೀಡಬೇಕಾಗುತ್ತದೆ- ಉಪೇಂದ್ರ ಪೈ ಎಚ್ಚರಿಕೆ

| Published : Jun 02 2024, 01:46 AM IST

ಸಾರಾಂಶ

ಶಿರಸಿಯ ಕಾಮಧೇನು ಜ್ಯೂವೆಲರ್ಸ್‌ ಮಾಲೀಕರ ಮಗ ಪ್ರೀತಮ್ ಪಾಲನಕರ್ ಆತ್ಮಹತ್ಯೆ ಪ್ರಕರಣದ ಆರೋಪಿಗಳನ್ನು ಬಂಧಿಸಿ ಕಾನೂನು‌ ಕ್ರಮ ಕೈಗೊಳ್ಳದೇ ಹೋದರೆ‌ ಶಿರಸಿ ಬಂದ್‌ಗೆ ಕರೆ ನೀಡಲಾಗುತ್ತದೆ ಎಂದು‌ ಜೆಡಿಎಸ್ ಮುಖಂಡ ಉಪೇಂದ್ರ ಪೈ ಎಚ್ಚರಿಸಿದ್ದಾರೆ.

ಶಿರಸಿ: ನಗರದ ಕಾಮಧೇನು ಜ್ಯೂವೆಲರ್ಸ್‌ ಮಾಲೀಕರ ಮಗ, ಯುವಕ ಪ್ರೀತಮ್ ಪಾಲನಕರ್ ಆತ್ಮಹತ್ಯೆ ಪ್ರಕರಣ ಹಿಂದೆ ಬ್ಲಾಕ್‌ಮೇಲ್‌ ದೂರಿದ್ದು, ತಕ್ಷಣ ಆರೋಪಿಗಳನ್ನು ಬಂಧಿಸಿ ಕಾನೂನು‌ ಕ್ರಮ ಕೈಗೊಳ್ಳದೇ ಹೋದರೆ‌ ಶಿರಸಿ ಬಂದ್‌ಗೆ ಕರೆ ನೀಡಲಾಗುತ್ತದೆ ಎಂದು‌ ಜೆಡಿಎಸ್ ಮುಖಂಡ ಉಪೇಂದ್ರ ಪೈ ಎಚ್ಚರಿಸಿದ್ದಾರೆ.

ಶನಿವಾರ ನಗರದಲ್ಲಿ ಸಹಾಯಕ ಆಯುಕ್ತರಿಗೆ ಹಾಗೂ ಪೊಲೀಸ್ ವೃತ್ತ ನಿರೀಕ್ಷಕರಿಗೆ ಮನವಿ ನೀಡಿ, ಘಟನೆ‌ ನಡೆದು ೧೭ ದಿನ ಆದರೂ ಆರೋಪಿಗಳನ್ನು ಬಂಧಿಸಲು ಆಗಲಿಲ್ಲ. ಈಗಾಗಲೇ ಮೂವರು ಆರೋಪಿತರು ಬ್ಲಾಕ್‌ಮೇಲ್‌ ಮಾಡಿದ್ದರ ಬಗ್ಗೆ ಮೃತನ ಸಹೋದರರೇ ದೂರು ನೀಡಿದ್ದಾರೆ. ಚಿನ್ನದ ವ್ಯಾಪಾರಿಗಳೂ ಪ್ರತಿಭಟನೆ ಮಾಡಿ ನ್ಯಾಯಕ್ಕಾಗಿ ಮನವಿ ನೀಡಿದ್ದರು. ಆದರೂ ಆರೋಪಿತರ ಬಂಧನ ಆಗಲಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.

ಈ ವೇಳೆ ರೆಡ್ ಆಂಟ್ ಮಹೇಶ ನಾಯ್ಕ, ಕರ್ನಾಟಕ ರಕ್ಷಣಾ ವೇದಿಕೆ‌ ಉಮೇಶ ಹರಿಕಂತ್ರ, ಈಶ್ವರ ನಾಯ್ಕ, ಅಬ್ದುಲ್ ಹಜೀದ್, ರೋಹಿತ್ ನಾಯ್ಕ ಇತರರು ಇದ್ದರು.

ಉದ್ಯಮಿ ಪ್ರೀತಂ ಆತ್ಮಹತ್ಯೆ ಸೂಕ್ತ ತನಿಖೆಯಾಗಬೇಕು: ನಾರ್ವೇಕರ

ಕಳೆದ ೧೫ ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡ ಶಿರಸಿ ಕಾಮಧೇನು ಜ್ಯುವೆಲರಿಯ ಮಾಲೀಕ ಪ್ರೀತಂ ಪಾಲನಕರ ಸಾವಿನ ತನಿಖೆ ನಿಷ್ಪಕ್ಷಪಾತವಾಗಿ ನಡೆಯಬೇಕು. ಸತ್ಯಾಸತ್ಯತೆ ಹೊರಬರಬೇಕು ಎಂದು ಎಐಸಿಸಿ ರಾಷ್ಟ್ರೀಯ ಒಬಿಸಿ ಸಂಯೋಜಕ ನಾಗರಾಜ ನಾರ್ವೇಕರ ಹೇಳಿದರು.

ಕಾರವಾರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾವು ಪಾಲನರ ಕುಟುಂಬವನ್ನು ಬಹಳ ಹತ್ತಿರದಿಂದ ನೋಡಿದ್ದು, ಅತ್ಯಂತ ಮೃದು ಸ್ವಭಾವದವರಾಗಿದ್ದಾರೆ. ಆದರೆ ನಕಲಿ ಪತ್ರಕರ್ತ ರವೀಶ ಹೆಗಡೆ, ಗಣೇಶ ಆಚಾರಿ, ಆರ್‌ಟಿಐ ಕಾರ್ಯಕರ್ತ ಓಂ ಹೆಗಡೆ ಬ್ಲಾಕ್‌ಮೇಲ್‌ನಿಂದ ಪ್ರೀತಂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಸಂಶಯವಿದೆ. ಕೆಲವು ತಿಂಗಳ ಹಿಂದೆ ಈ ಬಗ್ಗೆ ತಮಗೆ ಪ್ರೀತಂ ಹೇಳಿದ್ದರು ಎಂದರು.ಶಿರಸಿ ಮಾರುಕಟ್ಟೆ ಠಾಣೆಯ ಪಿಎಸ್‌ಐ ರತ್ನಾ ಕುರಿ ತನಿಖೆಯ ಹಾದಿತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ. ಅವರು ಮೃತಪಟ್ಟ ವೇಳೆ ತಂದೆ ದೂರು ನೀಡಲು ಹೋದರೆ ನಿಮಗೆ ಅಧಿಕಾರವಿಲ್ಲ, ಮೃತರ ಪತ್ನಿ ದೂರು ನೀಡಬೇಕು ಎಂದು ಹೇಳಿ ಕಳುಹಿಸಿದ್ದಾರೆ. ಬಳಿಕ ದೂರು ನೀಡಲು ಹೋದರೆ ಮರಣೋತ್ತರ ಪರೀಕ್ಷೆಗೆ ಹುಬ್ಬಳ್ಳಿಗೆ ಕಳಿಸುತ್ತೇವೆ ಎಂದು ಹೇಳಿದ್ದಾರೆ. ಶಾಸಕ ಭೀಮಣ್ಣ ಅವರ ಸಹಕಾರದಿಂದ ದೂರು ದಾಖಲಾದ ಬಳಿಕ ತನಿಖಾಧಿಕಾರಿ ರತ್ನಾ, ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಮಾಡಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿಲ್ಲ ಎಂದು ಬರೆದು ಮೃತ ಪ್ರೀತಂ ಪತ್ನಿ, ಅತ್ತೆ, ಮಾವನ ಬಳಿ ಸಹಿ ಹಾಕಿಸಲು ಮುಂದಾಗಿದ್ದರು. ಈ ಪ್ರಕರಣವನ್ನು ಪೊಲೀಸರು ಅತ್ಯಂತ ನಿರ್ಲಕ್ಷ್ಯವಾಗಿ ನೋಡುತ್ತಿದ್ದಾರೆ. ಪ್ರೀತಂ ಆತ್ಮಹತ್ಯೆ ಮಾಡಿಕೊಂಡು ೧೫ ದಿನ ಕಳೆದರೂ ಆರೋಪಿಗಳನ್ನು ಬಂಧಿಸಿಲ್ಲ. ಇದರ ಅರ್ಥವೇನು? ಪೊಲೀಸರು ಏಕೆ ಈ ರೀತಿ ಮಾಡುತ್ತಿದ್ದಾರೆ? ಇಂದಿನ ತಂತ್ರಜ್ಞಾನ ಬಳಸಿಕೊಂಡು ಆರೋಪಿಗಳನ್ನು ಬಂಧಿಸಲು ಅವಕಾಶವಿಲ್ಲವೇ ಎಂದು ಪ್ರಶ್ನಿಸಿದರು.

ಶಿರಸಿಯಲ್ಲಿ ಪೊಲೀಸ್ ವ್ಯವಸ್ಥೆ ಹದಗೆಟ್ಟಿದೆ. ತಾವು ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿದ್ದು, ನಮ್ಮ ಪಕ್ಷ ಆಡಳಿತದಲ್ಲಿ ಸಚಿವರ, ಶಾಸಕರ ಗೌರವಕ್ಕೆ ಕುಂದುಬರುವಂತೆ ಪೊಲೀಸರು ವರ್ತನೆ ಮಾಡುತ್ತಿದ್ದಾರೆ. ಈ ರವೀಶ ಎನ್ನುವವರ ವಿರುದ್ಧ ಬ್ಲಾಕ್‌ಮೇಲ್ ಒಂದೇ ಅಲ್ಲ, ಒಂದೇ ಕಾರಿಗೆ ಹಲವು ಕಡೆ ಸಾಲ ಪಡೆದ ಆರೋಪವೂ ಇದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಳಿ ಮಾತನಾಡಿದ ಬಳಿಕ ತನಿಖಾಧಿಕಾರಿ ಬದಲಾವಣೆ ಆಗಿದೆ. ಆದರೆ ರತ್ನಾ ಅವರ ವಿರುದ್ಧ ಕಾನೂನು ಕ್ರಮವಾಗಿಲ್ಲ. ಕನಿಷ್ಠ ಪಕ್ಷ ವರ್ಗಾವಣೆಯನ್ನೂ ಮಾಡಿಲ್ಲ. ಪೊಲೀಸ್ ಇಲಾಖೆ ಮೇಲೆ ನಂಬಿಕೆ ಹೋಗುವಂತಾಗಿದೆ. ಸತ್ಯ ಹೊರಬರಬೇಕು. ಏನಾಗಿದೆ ತಿಳಿಯಬೇಕು ಎಂದು ಹೇಳಿದರು. ಪ್ರೀತಂ ಸಹೋದರ ಪವನ ಪಾಲನಕರ, ಸಂಬಂಧಿ ವೈಭವ ಇದ್ದರು.