ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದಲ್ಲಿ ಭಾರತೀಯ ಜನತಾ ಪಾರ್ಟಿ ಎಲ್ಲಿದೆ ಎಂದು ಕೇಳುವ ವಿರೋಧ ಪಕ್ಷದ ನಾಯಕರಿಗೆ ಮುಂದಿನ ದಿನಗಳಲ್ಲಿ ನಮ್ಮ ಕಾರ್ಯಕರ್ತರೇ ತಕ್ಕ ಉತ್ತರ ನೀಡಲಿದ್ದಾರೆ ಎಂದು ಮಾಜಿ ಶಾಸಕ ಹಾಗೂ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ ಸಾರಿದ್ದಾರೆ. ತಾಲೂಕಿನ ಶ್ರವಣಬೆಳಗೊಳ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಬೂತ್ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮೈತ್ರಿ ರಾಜಕಾರಣದ ಹೆಸರಲ್ಲಿ ಬಿಜೆಪಿ ಅಸ್ತಿತ್ವವನ್ನೇ ಅಡಮಾನ ಇಡುವ ಪ್ರಸಂಗ ಬಂದರೆ ತಾವು ಸುಮ್ಮನಿರುವುದಿಲ್ಲ ಎಂಬ ಖಡಕ್ ಸಂದೇಶ ರವಾನಿಸಿದ್ದಾರೆ. ಕ್ಷೇತ್ರದಲ್ಲಿ ಸತತ ಮೂರು ಬಾರಿ ಗೆದ್ದು ಶಾಸಕರಾಗಿರುವ ಸಿ.ಎನ್. ಬಾಲಕೃಷ್ಣ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದ ಪ್ರೀತಂ ಗೌಡ, ನಾವು ಮೂರು ಬಾರಿ ರೊಟ್ಟಿಯನ್ನೇ ತಿಂದಿದ್ದೇವೆ, ಈಗ ಒಂದು ಸಲ ದೋಸೆ ತಿನ್ನಬೇಕು ಎನಿಸುತ್ತಿಲ್ಲವೇ? ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು. ಈ ಮೂಲಕ ಮುಂದಿನ ಚುನಾವಣೆಯಲ್ಲಿ ಬದಲಾವಣೆಯ ಗಾಳಿ ಬೀಸಲಿದೆ ಎಂದು ಭವಿಷ್ಯ ನುಡಿದ ಅವರು, ಆ ’ದೋಸೆ’ಯೇ ಭಾರತೀಯ ಜನತಾ ಪಾರ್ಟಿಯ ಮುಂದಿನ ಅಭ್ಯರ್ಥಿಯಾಗಲಿದ್ದಾರೆ ಎಂದು ಕಾರ್ಯಕರ್ತರಲ್ಲಿ ಹೊಸ ಸಂಚಲನ ಮೂಡಿಸಿದರು. ಶ್ರವಣಬೆಳಗೊಳ ಕ್ಷೇತ್ರದಲ್ಲಿ ಬಿಜೆಪಿಗೆ ಭವಿಷ್ಯವಿಲ್ಲ ಎನ್ನುವವರಿಗೆ ಈ ಸಭೆಯ ಮೂಲಕ ಪ್ರಬಲ ಸಂದೇಶ ರವಾನೆಯಾಗಿದೆ ಎಂದು ಅವರು ಗುಡುಗಿದರು. ಅವರ ಈ ಮಾತುಗಳು ಜೆಡಿಎಸ್ ನಾಯಕರಿಗಷ್ಟೇ ಅಲ್ಲ, ಮೈತ್ರಿಯ ಅತಿಯಾದ ಹಂಬಲದಲ್ಲಿರುವ ಸ್ವಪಕ್ಷದವರಿಗೂ ನೀಡಿದ ಎಚ್ಚರಿಕೆಯಂತೆ ಕೇಳಿಬಂದಿತು.ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಎನ್‌ಡಿಎ ಮೈತ್ರಿ ಆಗಿರುವುದು ನಿಜ, ಆ ತೀರ್ಮಾನಕ್ಕೆ ನಾವು ಬದ್ದರೂ ಹೌದು. ಆದರೆ ಮೈತ್ರಿ ಆಗಿದೆ ಎಂಬ ಕಾರಣಕ್ಕೆ ಬಿಜೆಪಿ ಕಚೇರಿಗೆ ಬೀಗ ಹಾಕಿ, ನಮ್ಮ ಕಾರ್ಯಕರ್ತರು ಯಾವುದೋ ಒಂದು ಪಕ್ಷದ ಪರವಾಗಿ ಹೋಗಲಿಕ್ಕೆ ತಯಾರಿಲ್ಲ. ಹಾಸನ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ ಹಾಸನದಲ್ಲಿ ಬಿಜೆಪಿ ಈಗಾಗಲೇ ಗಟ್ಟಿಯಾಗಿದೆ. ಅದೇ ರೀತಿ ಶ್ರವಣಬೆಳಗೊಳ, ಹೊಳೆನರಸೀಪುರ, ಅರಕಲಗೂಡು ಹಾಗೂ ಅರಸೀಕೆರೆ ಭಾಗಗಳಲ್ಲೂ ಬೂತ್ ಮಟ್ಟದಿಂದ ಪಕ್ಷವನ್ನು ಬಲಿ?ಗೊಳಿಸುವ ಕೆಲಸವಾಗಬೇಕು ಎಂದು ಅವರು ಕರೆ ನೀಡಿದರು.ಅಭ್ಯರ್ಥಿ ಯಾರಾಗುತ್ತಾರೆ ಎನ್ನುವುದನ್ನು ಸರ್ವೆ ವರದಿಗಳು ತೀರ್ಮಾನಿಸುತ್ತವೆ. ಆದರೆ ಸಂಘಟನೆ ಶಕ್ತಿಯುತವಾಗಿದ್ದರೆ ಮಾತ್ರ ರಾಷ್ಟ್ರೀಯ ನಾಯಕರು ನಮ್ಮನ್ನು ಪರಿಗಣಿಸುತ್ತಾರೆ. ಆದ್ದರಿಂದ ನಮ್ಮ ಉದ್ದೇಶ ಇರುವಂಥದ್ದು ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಭಾರತೀಯ ಜನತಾ ಪಾರ್ಟಿಯ ಕನಿಷ್ಠ ಐವತ್ತು ಸಾವಿರ ಮತಗಳನ್ನು ಕ್ರೋಢೀಕರಿಸುವುದು. ಈ ನಿಟ್ಟಿನಲ್ಲಿ ಕಾರ್ಯಕರ್ತರು ಈಗಿನಿಂದಲೇ ಸನ್ನದ್ಧರಾಗಬೇಕು ಎಂದು ಪ್ರೀತಂ ಗೌಡ ಕಿವಿಮಾತು ಹೇಳಿದರು.ಕಾರ್ಯಕ್ರಮದಲ್ಲಿ ಶ್ರವಣಬೆಳಗೊಳ ಕ್ಷೇತ್ರದ ಪರಾಜಿತ ಬಿಜೆಪಿ ಅಭ್ಯರ್ಥಿ ಚಿದಾನಂದ ನೇತೃತ್ವದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ತೊರೆದ ಸುಮಾರು ೩೦೦ಕ್ಕೂ ಅಧಿಕ ಕಾರ್ಯಕರ್ತರು ಬಿಜೆಪಿ ಸೇರ್ಪಡೆಗೊಂಡರು. ಸೋತರೂ ಧೃತಿಗೆಡದೆ ಕ್ಷೇತ್ರದಲ್ಲಿ ಸಕ್ರಿಯರಾಗಿ ಕಾರ್ಯನಿರ್ವಹಿಸುತ್ತಿರುವ ಚಿದಾನಂದ ಅವರು, ಸತತವಾಗಿ ಜನಸಂಪರ್ಕ ಹೊಂದಿದ್ದು ಈಗ ವಿವಿಧ ಪಕ್ಷದವರನ್ನು ಸೆಳೆಯುವ ಮೂಲಕ ತಮ್ಮದೇ ಆದ ಛಾಪನ್ನು ಮೂಡಿಸುತ್ತಿದ್ದಾರೆ. ಇದು ಶ್ರವಣಬೆಳಗೊಳದಲ್ಲಿ ಬಿಜೆಪಿಯ ಸಂಘಟನಾ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದರು.