ಗರ್ಭಿಣಿ ಸ್ತ್ರೀಯರು ಮುನ್ನೆಚ್ಚರಿಕೆ ವಹಿಸಿ: ಡಾ. ರವಿಕುಮಾರ್

| Published : Jan 12 2024, 01:45 AM IST

ಸಾರಾಂಶ

ಗರ್ಭಿಣಿ ಸ್ತ್ರೀಯರು ಸುಲಲಿತ ಹೆರಿಗೆಗಾಗಿ ಮುನ್ನೆಚ್ಚರಿಕೆ ವಹಿಸಬೇಕು ಎಂದು ಜಿಲ್ಲಾ ಏಡ್ಸ್ ನಿಯಂತ್ರಣ ಅಧಿಕಾರಿ ಡಾ. ರವಿಕುಮಾರ್ ಹೇಳಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಗರ್ಭಿಣಿ ಸ್ತ್ರೀಯರು ಸುಲಲಿತ ಹೆರಿಗೆಗಾಗಿ ಮುನ್ನೆಚ್ಚರಿಕೆ ವಹಿಸಬೇಕು ಎಂದು ಜಿಲ್ಲಾ ಏಡ್ಸ್ ನಿಯಂತ್ರಣ ಅಧಿಕಾರಿ ಡಾ. ರವಿಕುಮಾರ್ ಹೇಳಿದರು.

ಪ್ರಧಾನ ಮಂತ್ರಿ ಮಾತೃತ್ವ ಸುರಕ್ಷಾ ಅಭಿಯಾನ ದಿನದ ಪ್ರಯುಕ್ತ ನಗರದ ಜಿಲ್ಲಾ ಆಸ್ಪತ್ರೆ ಸಭಾಂಗಣದಲ್ಲಿ ಗರ್ಭಿಣಿ ಸ್ತ್ರೀಯರಿಗೆ ಎಚ್‌ಐವಿ ಸಿಪಿಲಿಸ್ ಹಾಗೂ ಹೆಪಟೈಟಿಸ್ ಸೋಂಕಿನ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಗರ್ಭಿಣಿ ತಾಯಿಗೆ ಪ್ರಸವ ಪೂರ್ವ ರಕ್ತಸ್ರಾವ, ತೀವ್ರವಾದ ನೆತ್ತರು ನಂಜು, ಪ್ರಸವೋತ್ತರ ರಕ್ತಸ್ರಾವ, ಅಡ್ಡಿಯುಂಟಾದ ಹೆರಿಗೆ ಹಾಗೂ ಮಗುವಿಗೆ ಹುಟ್ಟಿದಾಗ ಉಸಿರಾಟದ ತೊಂದರೆ ಬರಬಹುದು. ಈ ಎಲ್ಲಾ ತೊಂದರೆಗಳನ್ನು ತಪ್ಪಿಸಲು ಪ್ರಧಾನ ಮಂತ್ರಿ ಮಾತೃತ್ವ ಸುರಕ್ಷಾ ಅಭಿಯಾನ ಜಾರಿ ಮಾಡಲಾಗಿದೆ ಎಂದರು

ಪ್ರಧಾನ ಮಂತ್ರಿ ಸುರಕ್ಷಿತ್ ಮಾತೃತ್ವ ಅಭಿಯಾನವನ್ನು ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಪ್ರಾರಂಭಿಸಿದೆ. ಎಲ್ಲಾ ಗರ್ಭಿಣಿಯರಿಗೆ ಸಾರ್ವತ್ರಿಕವಾಗಿ ಖಚಿತವಾದ, ಸಮಗ್ರ ಮತ್ತು ಗುಣಮಟ್ಟದ ಪ್ರಸವಪೂರ್ವ ಆರೈಕೆಯನ್ನು ಉಚಿತವಾಗಿ ಒದಗಿಸುವ ಗುರಿಯನ್ನು ಹೊಂದಲಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಗರ್ಭಿಣಿ ಸ್ತ್ರೀಯರಿಗೆ ಸೀಮಂತ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಸ್ತ್ರೀರೋಗ ತಜ್ಞರಾದ ಡಾ.ಪ್ರದೀಪ್, ಹಾಗೂ ಹಿರಿಯ ಸ್ತ್ರೀರೋಗ ತಜ್ಞರಾದ ಡಾ.ರಾಜೇಶ್ವರಿ ಗರ್ಭಿಣಿ ಸ್ತ್ರೀಯರಿಗೆ ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮ ಪೌಷ್ಟಿಕಾಂಶದ ಬಗ್ಗೆ ಸೂಕ್ತ ಮಾರ್ಗದರ್ಶನವನ್ನು ನೀಡಿದರು.

ಕಾರ್ಯಕ್ರಮದಲ್ಲಿ ವಿಶೇಷವಾಗಿ ಈಗಾಗಲೇ ಆಸ್ಪತ್ರೆಗೆ ದಾಖಲಾಗಿರುವ ಎಚ್‌ಐವಿ ಸೋಂಕಿತ ಮಹಿಳೆಯ ಸುಲಲಿತ ಹೆರಿಗೆಗೆ ವೈದ್ಯಕೀಯವಾಗಿ ಹಾಗೂ ಮಾನಸಿಕವಾಗಿ ಸ್ಥೈರ್ಯತುಂಬಿ ನೆರವಾದ ವೈದ್ಯರು ಹಾಗೂ ಸಿಬ್ಬಂದಿಗೆ ಮಗುವಿಗೆ ಜನ್ಮ ನೀಡಿದ ದಂಪತಿಗಳು ಸನ್ಮಾನಿಸಿದರು.

ಆಪ್ತ ಸಮಾಲೋಚಕರಾದ ಲತಾ ಕುಮಾರಿ ಶೋಭಾ ಹಾಗೂ ಹೆರಿಗೆ ವಿಭಾಗದ ಸರಿತಾ, ಆಪ್ತ ಸಮಾಲೋಚಕರಾದ ರಾಜೇಶ್, ಐಸಿಟಿಸಿ ವಿಭಾಗದ ಪ್ರಯೋಗಶಾಲಾ ತಂತ್ರಜ್ಞರಾದ ಸುನಿಲ್ ನೆರೆದಿದ್ದ ಗರ್ಭಿಣಿ ಸ್ತ್ರೀಯರಿಗೆ ಸಂಪೂರ್ಣ ಮಾಹಿತಿ ಒದಗಿಸಿದರು.

ಕಾರ್ಯಕ್ರಮದ ನಿರೂಪಣೆಯನ್ನು ಮೇಲ್ವಿಚಾರಕ ಮಹಾದೇವ ಪ್ರಸಾದ್ ನಡೆಸಿಕೊಟ್ಟರು, ಆಶಾ ಕಾರ್ಯಕರ್ತರು ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.