ಸಾರಾಂಶ
ತುಮಕೂರು ಜಿಲ್ಲೆಯ ಶಿರಾ ತಾಲೂಕಿನಲ್ಲಿ ಸಾಮೂಹಿಕ ಸೀಮಂತ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಶಿರಾ
ತಾಯ್ತನ ಎಂಬುದು ಹೆಣ್ಣು ಮಕ್ಕಳಿಗೆ ದೇವರು ಕೊಟ್ಟ ವರ, ಪ್ರತಿಯೊಬ್ಬ ಗರ್ಭಿಣಿಯರು ಹಸಿರು ತರಕಾರಿ ಸೇರಿದಂತೆ ಪೌಷ್ಟಿಕ ಆಹಾರ ಸೇವನೆ ಮಾಡುವುದರ ಜೊತೆಗೆ ವೈದ್ಯರ ಸಲಹೆಯಂತೆ ಹಾರೈಕೆ ಮಾಡಿಕೊಂಡಾಗ ಸುಲಭ ಹೆರಿಗೆ ಸಾಧ್ಯವಾಗಲಿದೆ ಎಂದು ವೈದ್ಯಾಧಿಕಾರಿ ಡಾ. ರಾಜಶೇಖರ್ ಹೇಳಿದರು.ತಾಲೂಕಿನ ದೊಡ್ಡ ಹುಲಿಕುಂಟೆ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಗರ್ಭಿಣಿಯರಿಗೆ ಸಾಮೂಹಿಕ ಸೀಮಂತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ತಾಯಂದಿರು ಹುಟ್ಟುವಂತ ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವುದರ ಜೊತೆಗೆ ಒಳ್ಳೆಯ ಶಿಕ್ಷಣ ಮತ್ತು ಸಂಸ್ಕಾರ ಕಲಿಸಿ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ರೂಪಿಸುವ ಜವಾಬ್ದಾರಿ ಪ್ರತಿಯೊಂದು ತಾಯಂದಿರದು ಎಂದರು.ಹುಲಿಕುಂಟೆ ಗ್ರಾ.ಪಂ. ಉಪಾಧ್ಯಕ್ಷೆ ಶಾರದಮ್ಮ ಮಾತನಾಡಿ ಆರೋಗ್ಯ ಇಲಾಖೆಯ ಸಾಮೂಹಿಕ ಸೀಮಂತ ಕಾರ್ಯ ಬಡ ಗರ್ಭಿಣಿಯರಲ್ಲಿ ತವರಿನ ಉಡುಗೊರೆಯ ನೆನಪು ನೀಡುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಹುಲಿಕುಂಟೆ ಗ್ರಾ.ಪಂ. ಅಧ್ಯಕ್ಷ ದೊಡ್ಡೇಗೌಡ, ಮಾಜಿ ಉಪಾಧ್ಯಕ್ಷ ರವಿಕುಮಾರ್, ಎಚ್.ಎಲ್. ಗಿರೀಶ್, ಗ್ರಾಮ ಪಂಚಾಯಿತಿ ಸದಸ್ಯ ಕೆ.ಜಿ. ಈರಣ್ಣ, ಕಾಂತರಾಜು, ಮುಖಂಡ ಜಗನ್ನಾಥ್, ಆರೋಗ್ಯ ಇಲಾಖೆಯ ಮಂಜುನಾಥ ಸ್ವಾಮಿ, ದೇವಮ್ಮ, ಪವಿತ್ರಾ, ಫಾತಿಮಾ, ಸೌಮ್ಯಾ, ಕಾವ್ಯಾ ,ಶಶಿಧರ, ಕೃತಿಕಾ ಸೇರಿದಂತೆ ಆಶಾ ಕಾರ್ಯಕರ್ತರು ಹಾಗೂ ಗರ್ಭಿಣಿಯರು ಭಾಗವಹಿಸಿದ್ದರು.